ಪೂಜೆ ನೆಪದಲ್ಲಿ ಚಿಕ್ಕಮಗಳೂರಿನ ಪುರೋಹಿತರನ್ನು ಮನೆಗೆ ಕರೆಸಿ ಹನಿಟ್ರ್ಯಾಪ್ ; 50 ಲಕ್ಷಕ್ಕೂ ಹೆಚ್ಚು ಹಣ ಪೀಕಿಸಿ ಬ್ಲಾಕ್ಮೇಲ್, ಹಾಸನ ಮೂಲದ ದಂಪತಿ ಸೆರೆ !

21-01-22 02:06 pm       Mangalore Correspondent   ಕ್ರೈಂ

ಮನೆಯಲ್ಲಿ ದೋಷ ಪರಿಹಾರ ಪೂಜೆಗೆಂದು ಪುರೋಹಿತರೊಬ್ಬರನ್ನು ಕರೆಯಿಸಿ, ಜೊತೆಗೆ ನಿಂತು ವಿಡಿಯೋ ಮಾಡಿ, ಅದನ್ನು ಮುಂದಿಟ್ಟು ಹಣಕ್ಕಾಗಿ ಪೀಡಿಸಿ ಹನಿಟ್ರ್ಯಾಪ್ ಮಾಡಿದ ಪ್ರಕರಣ ಪತ್ತೆಯಾಗಿದ್ದು, ಪೊಲೀಸರು ಹಾಸನ ಮೂಲದ ದಂಪತಿಯನ್ನು ಬಂಧಿಸಿದ್ದಾರೆ.

Photo credits : Headline Karnataka

ಮಂಗಳೂರು, ಜ.21 : ಮನೆಯಲ್ಲಿ ದೋಷ ಪರಿಹಾರ ಪೂಜೆಗೆಂದು ಪುರೋಹಿತರೊಬ್ಬರನ್ನು ಕರೆಯಿಸಿ, ಜೊತೆಗೆ ನಿಂತು ವಿಡಿಯೋ ಮಾಡಿ, ಅದನ್ನು ಮುಂದಿಟ್ಟು ಹಣಕ್ಕಾಗಿ ಪೀಡಿಸಿ ಹನಿಟ್ರ್ಯಾಪ್ ಮಾಡಿದ ಪ್ರಕರಣ ಪತ್ತೆಯಾಗಿದ್ದು, ಪೊಲೀಸರು ಹಾಸನ ಮೂಲದ ದಂಪತಿಯನ್ನು ಬಂಧಿಸಿದ್ದಾರೆ.

ಕೊಡಗಿನ ಸೋಮವಾರ ಪೇಟೆ ಮೂಲದ ನಿವಾಸಿ ಭವ್ಯ(30) ಮತ್ತು ಹಾಸನ ಜಿಲ್ಲೆಯ ಅರಕಲಗೂಡು ನಿವಾಸಿ ಕುಮಾರ್ ಅಲಿಯಾಸ್ ರಾಜು(35) ಬಂಧಿತರು. ಇವರು ಮಂಗಳೂರಿನ ಮೇರಿಹಿಲ್ ಬಳಿಯ ಅಪಾರ್ಟ್ಮೆಂಟ್ ನಲ್ಲಿ ಲೀಸಿಗೆ ಮನೆ ಬಾಡಿಗೆ ಪಡೆದು ವಾಸವಿದ್ದರು. ಇವರು ಚಿಕ್ಕಮಗಳೂರು ಜಿಲ್ಲೆಯ ಪುರೋಹಿತ ಮತ್ತು ಜ್ಯೋತಿಷಿಯಾಗಿರುವ ವ್ಯಕ್ತಿಯೊಬ್ಬರನ್ನು ಮನೆಗೆ ಕರೆಸಿಕೊಂಡು ಮನೆಯ ಸಮಸ್ಯೆ ಪರಿಹರಿಸಲು ವಿಶೇಷ ಪೂಜೆ ಮಾಡುವಂತೆ ವಿನಂತಿಸಿದ್ದರು. ಪುರೋಹಿತರು ಮನೆಗೆ ಬಂದಿದ್ದ ಸಮಯ ಯುವತಿ ಜೊತೆಗೆ ನಿಂತು ಫೋಟೋ, ವಿಡಿಯೋ ತೆಗೆಸಿಕೊಂಡಿದ್ದು, ಆನಂತರ ಅದನ್ನು ಮುಂದಿಟ್ಟು ಬ್ಲಾಕ್ಮೇಲ್ ನಡೆಸಿದ್ದಾರೆ.

ಫೋಟೋ, ವಿಡಿಯೋವನ್ನು ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ 15 ಲಕ್ಷ ನಗದು ರೂಪದಲ್ಲಿ ಆನಂತರ 34 ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಖಾತೆಗಳ ಮೂಲಕ ತಮ್ಮ ವಿವಿಧ ಖಾತೆಗಳಿಗೆ ಹಾಕಿಸಿಕೊಂಡಿದ್ದಾರೆ. ಪದೇ ಪದೇ ಹಣಕ್ಕಾಡಿ ಪೀಡಿಸಿದ್ದರಿಂದ ಕಿರುಕುಳಕ್ಕೊಳಗಾದ ಪುರೋಹಿತ ವ್ಯಕ್ತಿ ಮಂಗಳೂರು ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಿದ್ದರಿಂದ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಪೊಲೀಸರ ತಂಡ ದಂಪತಿ ಎನ್ನಲಾಗಿರುವ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 37 ಸಾವಿರ ಮೌಲ್ಯದ ಎರಡು ಚಿನ್ನದ ರಿಂಗ್, ನಗದು ಹಣ 31 ಸಾವಿರ ರೂ., ನಾಲ್ಕು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದೆ.

ಆರೋಪಿಗಳು ಇದೇ ರೀತಿ ಹಲವು ವ್ಯಕ್ತಿಗಳನ್ನು ಹನಿಟ್ರ್ಯಾಪ್ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಇಖೆ ಮುಂದುವರಿಸಿದ್ದಾರೆ. ಅಲ್ಲದೆ, ಆರೋಪಿಗಳು ಪೊಲೀಸರು, ಇನ್ಸ್ ಪೆಕ್ಟರ್, ಮಹಿಳಾ ಸಂಘಟನೆಗಳ ಹೆಸರಿನಲ್ಲಿ ಸಂತ್ರಸ್ತ ವ್ಯಕ್ತಿಗೆ ಬೆದರಿಕೆ ಹಾಕಿದ್ದರು. ಕೇಳಿದಷ್ಟು ಹಣ ನೀಡದೇ ಇದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದರು. ಆರೋಪಿಗಳ ಪೈಕಿ ಕುಮಾರ್ ತನ್ನ ಹೆಸರನ್ನು ರಾಜು ಎಂದು ಹೇಳಿಕೊಂಡು ಪುರೋಹಿತ ವ್ಯಕ್ತಿಯ ಜೊತೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದು ಆತನಿಗೆ ಸಹಾಯ ಮಾಡುವ ನೆಪದಲ್ಲಿ ಹಣ ವಸೂಲಿ ಮಾಡಿದ್ದಾನೆ.

ಸುಲಿಗೆ ಮಾಡಿದ ಹಣದಲ್ಲಿ ಆರೋಪಿಗಳು ಮಂಗಳೂರಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಮೊದಲು ಸಣ್ಣ ಬಾಡಿಗೆ ಮನೆಯಲ್ಲಿದ್ದವರು, ಕೃತ್ಯ ಎಸಗಿದ ಬಳಿಕ ಪಡೆದ ಹಣದಲ್ಲಿ ಹತ್ತು ಲಕ್ಷ ಕೊಟ್ಟು ಮೇರಿಹಿಲ್ ನಲ್ಲಿ ಫ್ಲ್ಯಾಟ್ ಲೀಸಿಗೆ ಪಡೆದಿದ್ದರು. ಅಲ್ಲದೆ, ಆ ಮನೆಗೆ ಏಳು ಲಕ್ಷ ಮೌಲ್ಯದ ಮನೆ ಸಾಮಗ್ರಿಗಳನ್ನು ಖರೀದಿಸಿದ್ದರು. ಓಡಾಡಲು ಹೊಸ ದ್ವಿಚಕ್ರ ವಾಹನವನ್ನು ಖರೀದಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳ ಪೈಕಿ ಭವ್ಯಳನ್ನು ಕೋರ್ಟಿಗೆ ಹಾಜರುಪಡಿಸಿದ್ದು ಐದು ದಿನಗಳ ಪೊಲೀಸ್ ಕಸ್ಟಡಿ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐ ರಾಜೇಂದ್ರ ಬಿ., ಪ್ರದೀಪ ಟಿ.ಆರ್ ಪಾಲ್ಗೊಂಡಿದ್ದರು.

Honey trap, Hassan couple arrested in Mangalore. The couple who invited a Purohit into the home for pooja made a video and started to blackmail him. The arrested have been identified as Bhavya and Raju.