ಬಿಲ್ಲವ ಮಹಿಳಾ ಅರಣ್ಯಾಧಿಕಾರಿಯನ್ನು ನೀರಿಲ್ಲದ ಜಾಗಕ್ಕೆ ವರ್ಗಾಯಿಸಿದ ಬೆಳ್ತಂಗಡಿ ಶಾಸಕ ; ಮರಗಳ್ಳರ ವಿರುದ್ಧ ಕಾರ್ಯಾಚರಣೆ ನಡೆಸಿದ್ದಕ್ಕೆ ದರ್ಪ ! ಬಿಲ್ಲವ ವೇದಿಕೆಗೆ ದೂರಿತ್ತು ಅಳಲು ತೋಡಿಕೊಂಡ ಅಧಿಕಾರಿ !

29-01-22 02:47 pm       Mangalore Correspondent   ಕ್ರೈಂ

ಬೆಳ್ತಂಗಡಿ ಶಾಸಕ ಹರೀಶ ಪೂಂಜ, ಮರಗಳ್ಳರ ವಿರುದ್ಧ ಕಾರ್ಯಾಚರಣೆ ನಡೆಸಿದ ಒಂದೇ ಕಾರಣಕ್ಕೆ ಮಹಿಳಾ ಅರಣ್ಯಾಧಿಕಾರಿ ಒಬ್ಬರನ್ನು ನೀರಿಲ್ಲದ ಊರು, ದೂರದ ಬೀದರಿಗೆ ವರ್ಗಾಯಿಸಲು ಮುಖ್ಯಮಂತ್ರಿಗೆ ಒತ್ತಡ ಹೇರಿದ್ದು, ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.

Photo credits : Headline Karnataka

ಮಂಗಳೂರು, ಜ.29 : ಕೆಲಸ ಮಾಡದ ಸರಕಾರಿ ಅಧಿಕಾರಿ, ಸಿಬಂದಿಗಳನ್ನು ಕೆಲವೊಮ್ಮೆ ಶಾಸಕರು ನೀರಿಲ್ಲದ ಕಡೆಗೆ ವರ್ಗಾಯಿಸ್ತೀನಿ ಎಂದು ಹೇಳಿ ಬೆದರಿಸುವುದನ್ನು ಕೇಳಿದ್ದೇವೆ. ಆದರೆ, ಬೆಳ್ತಂಗಡಿ ಶಾಸಕ ಹರೀಶ ಪೂಂಜ, ಮರಗಳ್ಳರ ವಿರುದ್ಧ ಕಾರ್ಯಾಚರಣೆ ನಡೆಸಿದ ಒಂದೇ ಕಾರಣಕ್ಕೆ ಮಹಿಳಾ ಅರಣ್ಯಾಧಿಕಾರಿ ಒಬ್ಬರನ್ನು ನೀರಿಲ್ಲದ ಊರು, ದೂರದ ಬೀದರಿಗೆ ವರ್ಗಾಯಿಸಲು ಮುಖ್ಯಮಂತ್ರಿಗೆ ಒತ್ತಡ ಹೇರಿದ್ದು, ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಉಡುಪಿ ವಲಯ ಅರಣ್ಯಾಧಿಕಾರಿ ಆಗಿರುವ ಸಂಧ್ಯಾ ಸಚಿನ್ ಅವರು ಮಂಗಳೂರು ವಿಭಾಗದ ಅರಣ್ಯ ಸಂಚಾರಿ ದಳದ ಪ್ರಭಾರ ಕರ್ತವ್ಯ ಹೊಂದಿದ್ದಾರೆ. ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಬದ್ಯಾರಿನಲ್ಲಿ ಅರಣ್ಯದಿಂದ ಮರಗಳನ್ನು ಕಡಿದು ಸಾಗಿಸುತ್ತಿದ್ದ ವಿಚಾರ ತಿಳಿದು ಸ್ಥಳಕ್ಕೆ ದಾಳಿ ನಡೆಸಿದ್ದರು. ಮರಗಳ್ಳತನ ನಡೆಸುತ್ತಿದ್ದ ಬಾಲಕೃಷ್ಣ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿ, ಕಡಿದು ಹಾಕಿದ್ದ ಭಾರೀ ಪ್ರಮಾಣದ ಮರಗಳನ್ನು ವಶಕ್ಕೆ ಪಡೆದಿದ್ದರು. ಈ ವಿಚಾರದಲ್ಲಿ ಮರಗಳ್ಳತನ ನಡೆಸುತ್ತಿದ್ದ ದಂಧೆಕೋರರು ಶಾಸಕ ಹರೀಶ ಪೂಂಜಾ ಗಮನಕ್ಕೆ ತಂದಿದ್ದು, ಅಧಿಕಾರಿಯನ್ನೇ ಎತ್ತಂಗಡಿ ಮಾಡಿಸಲು ಒತ್ತಡ ಹೇರಿದ್ದಾರೆ.

ಮರಗಳ್ಳರು ಮಾಡಿದ ಒತ್ತಡವನ್ನೇ ಹುಕುಂ ಎಂದು ಪರಿಗಣಿಸಿದ ಶಾಸಕ ಹರೀಶ್ ಪೂಂಜಾ, ತನ್ನದೇ ಕ್ಷೇತ್ರದ ನಿವಾಸಿಯಾಗಿರುವ ಬಿಲ್ಲವ ಸಮುದಾಯದ ಮಹಿಳಾ ಅಧಿಕಾರಿಯನ್ನು ದೂರದ ಬೀದರ್ ಜಿಲ್ಲೆಯ ಅರಣ್ಯ ತರಬೇತಿ ಕೇಂದ್ರಕ್ಕೆ ವಲಯ ಅರಣ್ಯಾಧಿಕಾರಿಯಾಗಿ ವರ್ಗಾಯಿಸುವಂತೆ ತನ್ನ ಲೆಟರ್ ಹೆಡ್ ನಲ್ಲಿ ಬರೆದು ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಶಾಸಕರ ಪತ್ರಕ್ಕೆ ಸಹಿ ಹಾಕಿದ್ದು, ಇದನ್ನೇ ವರ್ಗಾವಣೆ ಆದೇಶವೆಂದು ಪರಿಗಣಿಸುವಂತೆ ಅಧಿಕಾರಿಗಳಿಗೆ ಬರೆದಿದ್ದಾರೆ. ಇದರಿಂದ ತೀವ್ರ ನೊಂದ ಮಹಿಳಾ ಅಧಿಕಾರಿ ಸಂಧ್ಯಾ ಅವರು ಬೆಳ್ತಂಗಡಿ ಬಿಲ್ಲವ ವೇದಿಕೆಗೆ ದೂರು ನೀಡಿದ್ದಾರೆ.

ವೈಯಕ್ತಿಕ ದ್ವೇಷದಿಂದ ವರ್ಗಾವಣೆ

ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಅಧಿಕಾರಿ ಪತ್ರ ಬರೆದಿದ್ದು ಶಾಸಕರು ವೈಯಕ್ತಿಕ ದ್ವೇಷದಿಂದ ಈ ವರ್ಗಾವಣೆ ಮಾಡಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಅಕ್ರಮ ಮರಗಳ್ಳತನಕ್ಕೆ ದಾಳಿ ನಡೆಸಿ, ಮರಮಟ್ಟುಗಳನ್ನು ವಶಕ್ಕೆ ಪಡೆದಿರುವುದಕ್ಕೆ ಕೋಪಗೊಂಡು ಶಾಸಕರು ಈ ಕೆಲಸ ಮಾಡಿದ್ದಾರೆ. ಮೇಲಧಿಕಾರಿಗಳ ಆದೇಶದಂತೆ ನಾನು ಅಕ್ರಮ ಮರಗಳ ದಾಸ್ತಾನು ಕೇಂದ್ರಕ್ಕೆ ದಾಳಿ ನಡೆಸಿ, ವಶಕ್ಕೆ ಪಡೆದಿರುತ್ತೇನೆ. ಇದು ಇಲಾಖೆಯ ಒಳಗೆ ನಡೆಯುವ ಸಾಮಾನ್ಯ ಪ್ರಕ್ರಿಯೆ. ಆದರೆ ಶಾಸಕರು ನನ್ನಲ್ಲಿ ವೈಯಕ್ತಿಕ ದ್ವೇಷದ ಹಗೆತನ ಸಾಧಿಸಿ, ಮರಗಳ್ಳರಾದಂತಹ ಬಾಲಕೃಷ್ಣ ಶೆಟ್ಟಿ ಬದ್ಯಾರು ಇನ್ನಿತರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಹಿಳಾ ಅಧಿಕಾರಿಯಾದ ನನ್ನನ್ನು ದೂರದ ಬೀದರ್ ಗೆ ವರ್ಗಾಯಿಸಿದ್ದಾರೆ. ಬಿಲ್ಲವ ಸಮಾಜದಳಾದ ನನ್ನ ಮೇಲಿನ ದಬ್ಬಾಳಿಕೆಯನ್ನು ಖಂಡಿಸಿ, ನನಗೆ ನ್ಯಾಯ ಒದಗಿಸಬೇಕೆಂದು ಕೇಳಿಕೊಂಡಿದ್ದಾರೆ.

ಸಂಧ್ಯಾ ಅವರು, ಬೆಳ್ತಂಗಡಿಯ ಕುತ್ಯಾರು ಮಾರಿಗುಡಿ ಪ್ರತಿಷ್ಠಿತ ಬಿಲ್ಲವ ಮನೆತನದ ಸಚಿನ್ ನೂಜೋಡಿ ಪತ್ನಿಯಾಗಿದ್ದು, ಇದೀಗ ಬೆಳ್ತಂಗಡಿಯಲ್ಲಿ ಬಿಲ್ಲವ ಮಹಿಳಾ ಅಧಿಕಾರಿ ಮೇಲೆ ಶಾಸಕರ ದಬ್ಬಾಳಿಕೆ ಅನ್ನುವ ರೀತಿ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ. ಉಡುಪಿಯಲ್ಲಿ ಅಧಿಕಾರಿಯಾಗಿರುವ ಮಹಿಳೆಯನ್ನು ಬೆಳ್ತಂಗಡಿಯ ಶಾಸಕರು ಅಧಿಕಾರ ಬಳಸಿ ವರ್ಗಾಯಿಸಿದ್ದು, ಬಿಜೆಪಿಯ ಇತರ ಶಾಸಕರಲ್ಲಿಯೂ ಅಸಮಾಧಾನಕ್ಕೆ ಕಾರಣವಾಗಿದೆ.

Belthangady MLA Harish Poonja involved in illegal timber smuggling, forest officer shares experience. Forest officer Sandhya Sachin was transferred by MLA to a isolated place because she raided a centre where illegal timber was smuggled. Now she exposes the dark side of Harish Poonja.