ಮೀಟರ್ ಬಡ್ಡಿಗೆ ಸಾಲ ನೀಡಿ ಕಿರುಕುಳ ; ಕಂಪ್ಯೂಟರ್ ಕ್ಲಾಸ್ ನಡೆಸ್ತಿದ್ದ ಮಹಿಳೆಗೆ ಸತಾಯಿಸಿದ ದಂಪತಿ ಸೇರಿ ಮೂವರ ಸೆರೆ ! 10 ಲಕ್ಷ ಸಾಲಕ್ಕೆ ಚೆಕ್ ಪಡೆದು 50 ಲಕ್ಷ ಲೂಟಿ ! 

20-02-22 11:03 pm       Mangalore Correspondent   ಕ್ರೈಂ

ಕಂಪ್ಯೂಟರ್ ಕ್ಲಾಸ್ ನಡೆಸುತ್ತಿದ್ದ ಮಹಿಳೆಗೆ ಹಣಕ್ಕಾಗಿ ಕಿರುಕುಳ ಕೊಟ್ಟು 10 ಲಕ್ಷ ಸಾಲಕ್ಕೆ 50 ಲಕ್ಷ ಪೀಕಿಸಿಕೊಂಡ ಆರೋಪದಲ್ಲಿ ದಂಪತಿ ಸೇರಿ ಮೂವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. 

ಮಂಗಳೂರು, ಫೆ.20 : ಕಂಪ್ಯೂಟರ್ ಕ್ಲಾಸ್ ನಡೆಸುತ್ತಿದ್ದ ಮಹಿಳೆಗೆ ಹಣಕ್ಕಾಗಿ ಕಿರುಕುಳ ಕೊಟ್ಟು 10 ಲಕ್ಷ ಸಾಲಕ್ಕೆ 50 ಲಕ್ಷ ಪೀಕಿಸಿಕೊಂಡ ಆರೋಪದಲ್ಲಿ ದಂಪತಿ ಸೇರಿ ಮೂವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. 

ನಂತೂರು ನಿವಾಸಿ ಸ್ವರೂಪ ಎನ್. ಶೆಟ್ಟಿ ಎಂಬವರು 2016 ರಲ್ಲಿ ಜೆಪ್ಪಿನಮೊಗರಿನಲ್ಲಿ ಕಂಪ್ಯೂಟರ್ ತರಬೇತಿ ಕ್ಲಾಸ್ ನಡೆಸುತ್ತಿದ್ದರು. ಈ ವೇಳೆ, ಅಲ್ಲಿನ ವಿದ್ಯಾರ್ಥಿಯೊಬ್ಬನ ತಾಯಿ ತನ್ನ ಮನೆ ಏಲಂ ಆಗುತ್ತೆ ಎಂದು ಹೇಳಿ ಸ್ವರೂಪ ಬಳಿ ಅಲವತ್ತುಕೊಂಡಿದ್ದರು. ಅದರಂತೆ, ತನ್ನ ಸ್ನೇಹಿತೆಯಾಗಿದ್ದ ಶರ್ಮಿಳಾ (48) ಎಂಬವರನ್ನು ಸ್ವರೂಪ ಪರಿಚಯಿಸಿದ್ದರು. 

ಶರ್ಮಿಳಾ ಮತ್ತು ಆಕೆಯ ಗಂಡ ಮೋಹನದಾಸ್, ವಿದ್ಯಾರ್ಥಿಯ ತಾಯಿಗೆ ತಿಂಗಳಿಗೆ ಹತ್ತು ಪರ್ಸೆಂಟ್ ಬಡ್ಡಿಗೆ ಹತ್ತು ಲಕ್ಷ ಸಾಲ ನೀಡಿದ್ದರು. ಸಾಲ ಪಡೆದ ಮಹಿಳೆ ತಿಂಗಳಿಗೆ ಒಂದು ಲಕ್ಷ ರೂ. ಬಡ್ಡಿ ಪಾವತಿ ಮಾಡಬೇಕಿತ್ತು. ಅದಕ್ಕೆಂದು ಚೆಕ್ ಪಡೆದಿದ್ದ ಶರ್ಮಿಳಾ, ಆನಂತರ ಮಹಿಳೆಯನ್ನು ಪೀಡಿಸಿ ಹಣವನ್ನು ವಾಪಸ್ ಪಡೆದಿದ್ದರುಎನ್ನಲಾಗಿದೆ. 

ಆದರೆ ಈ ನಡುವೆ ಮಹಿಳೆಯನ್ನು ಪರಿಚಯಿಸಿದ ಕಾರಣಕ್ಕಾಗಿ ಶರ್ಮಿಳಾ ಮತ್ತು ಮೋಹನದಾಸ್ ದಂಪತಿ ಸ್ವರೂಪ ಶೆಟ್ಟಿಯನ್ನು ಹಿಡಿದುಕೊಂಡಿದ್ದು ತಮ್ಮ ಅಸಲು ಮತ್ತು ಬಡ್ಡಿ ಬಂದಿಲ್ಲವೆಂದು ಕಿರುಕುಳ ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಜಾಮೀನಿನ ನೆಪದಲ್ಲಿ ಸ್ವರೂಪ ಶೆಟ್ಟಿ ಹೆಸರಲ್ಲಿ ಖಾಲಿ ಚೆಕ್ ಪಡೆದಿದ್ದು ಅದನ್ನು ಮುಂದಿಟ್ಟು ಹಣ ನೀಡುವಂತೆ ಕಿರುಕುಳ ನೀಡಿದ್ದಾರೆ. ಅಲ್ಲದೆ, ಖಾಲಿ ಚೆಕ್ ನಲ್ಲಿ ಐದು ವರ್ಷಗಳ ಬಡ್ಡಿ ಎಂದು ಹೇಳಿ ಬೇಕಾಬಿಟ್ಟಿಯಾಗಿ ಲಕ್ಷಾಂತರ ಹಣವನ್ನು ನಮೂದಿಸಿ ಬ್ಯಾಂಕಿನಿಂದ ಡ್ರಾ ಮಾಡಿದ್ದಾರೆ. 

ಒಟ್ಟು 50 ಲಕ್ಷ ರೂ. ಮೊತ್ತವನ್ನು ಸ್ವರೂಪ ಶೆಟ್ಟಿ ಬಳಿಯಿಂದ ಪಡೆದಿದ್ದು ಆಕೆ ನಷ್ಟಕ್ಕೀಡಾಗಿ ಕಂಪ್ಯೂಟರ್ ತರಬೇತಿ ಕೇಂದ್ರವನ್ನೇ ಎರಡು ವರ್ಷಗಳ ಹಿಂದೆ ಸ್ಥಗಿತಗೊಳಿಸಿದ್ದರು. ಈ ಬಗ್ಗೆ ಸ್ವರೂಪ ಶೆಟ್ಟಿ ಎರಡು ದಿನಗಳ ಹಿಂದೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ಆರೋಪಿಗಳಾದ ಶರ್ಮಿಳಾ (48), ಆಕೆಯ ಗಂಡ ಮೋಹನದಾಸ್ (52) ಮತ್ತು ಇವರಿಗೆ ಸಹಕರಿಸಿದ ಬಂಟ್ವಾಳ ಮೂಲದ ಸಾಯಿಕಿರಣ್ (52) ಎಂಬವರನ್ನು ಬಂಧಿಸಿದ್ದಾರೆ‌.

Three persons including a woman have been arrested for extorting money to the tune of Rs 50 lakh from a gullible woman under relevant IPC sections and Karnataka Prohibition of Charging Exorbitant Interest Act. The victim is Swaroopa N Shetty,  a resident of Nanthoor and the arrested accused are Sharmila (48) and Mohandas (52) of Jeppinamogaru, and Sati Kiran (52) from Bantwal taluk.