ಸಾಕಲು ಕೊಟ್ಟಿದ್ದ ಕರುವನ್ನು ಮುಂದಿಟ್ಟು ಸುಳ್ಳು ಕೇಸು ; ಎರಡು ದಿನ ಜೈಲಿಗೆ ಹಾಕಿದ ಗಂಗೊಳ್ಳಿ ಪೊಲೀಸರು !

01-03-22 06:59 pm       Udupi Correspondent   ಕ್ರೈಂ

ತನ್ನ ಗೆಳೆಯ ಮಹಮ್ಮದ್ ಇಬ್ರಾಹಿಂ ಎಂಬವರಿಗೆ ಸಾಕುವುದಕ್ಕಾಗಿ ಉಚಿತವಾಗಿ ಕೊಟ್ಟಿದ್ದ ಕರುವನ್ನು ಮುಂದಿಟ್ಟು ನನ್ನನ್ನು ಗಂಗೊಳ್ಳಿ ಪೊಲೀಸರು ಕಳ್ಳನಂತೆ ಮಾಡಿದ್ದಾರೆ.

ಉಡುಪಿ, ಮಾ.1: ತನ್ನ ಗೆಳೆಯ ಮಹಮ್ಮದ್ ಇಬ್ರಾಹಿಂ ಎಂಬವರಿಗೆ ಸಾಕುವುದಕ್ಕಾಗಿ ಉಚಿತವಾಗಿ ಕೊಟ್ಟಿದ್ದ ಕರುವನ್ನು ಮುಂದಿಟ್ಟು ನನ್ನನ್ನು ಗಂಗೊಳ್ಳಿ ಪೊಲೀಸರು ಕಳ್ಳನಂತೆ ಮಾಡಿದ್ದಾರೆ. ಕರುವನ್ನು ಕದ್ದೊಯ್ದಿರುವುದಾಗಿ ಇಬ್ರಾಹಿಂ ಮೇಲೆ ದೂರು ಕೊಡಲು ನಿರಾಕರಿಸಿದ್ದಕ್ಕೆ ನನ್ನ ಮೇಲೆಯೇ ಸುಳ್ಳು ಕೇಸು ದಾಖಲು ಮಾಡಿದ್ದರು. ಆನಂತರ ಎರಡು ದಿನ ಜೈಲಿಗೆ ಹಾಕಿ, ಆಮೇಲೆ ಜಾಮೀನಿನಲ್ಲಿ ಬಿಡುಗಡೆಯಾಗಿ ಬಂದಿದ್ದೇನೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನಂಜ ನಾಯ್ಕ್ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುತ್ತೇನೆ. ಮಾನವ ಹಕ್ಕು ಆಯೋಗಕ್ಕೂ ದೂರು ನೀಡುವುದಾಗಿ ಫ್ರಾನ್ಸಿಸ್ ಆಲ್ಮೇಡಾ ಹೇಳಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗಂಗೊಳ್ಳಿ ನಿವಾಸಿ ಫ್ರಾನ್ಸಿಸ್ ಅಲ್ಮೇಡಾ, ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಮಹಮ್ಮದ್ ಇಬ್ರಾಹಿಂ ತನ್ನ ಮನೆಯ ಬಳಿ ದನ ಸಾಕಲೆಂದು ಶೆಡ್ ಕಟ್ಟಿದ್ದರು. ನಾನು ವೃತ್ತಿಯಲ್ಲಿ ಇಲೆಕ್ಟ್ರೀಶಿಯನ್ ಆಗಿದ್ದುಕೊಂಡು ಜೊತೆಗೆ ಹೈನುಗಾರಿಕೆಯನ್ನೂ ನಡೆಸುತ್ತಿದ್ದೇನೆ. ಈ ನಡುವೆ, ಇಬ್ರಾಹಿಂ ಅವರಿಗೆ ಒಂದು ಕರುವನ್ನು ಸಾಕಲು ನೀಡಿದ್ದೆ. ಡಿ.26ರಂದು ಗಂಗೊಳ್ಳಿ ಪೊಲೀಸರು ಇಬ್ರಾಹಿಂ ಮನೆಗೆ ತೆರಳಿದ್ದು, ಕರುವನ್ನು ಕೊಂಡೊಯ್ದಿದ್ದಾರೆ. ಆನಂತರ ನನಗೆ ಮತ್ತು ಇಬ್ರಾಹಿಂ ಅವರನ್ನು ಠಾಣೆಗೆ ಬರಹೇಳಿದ್ದರು.

ನಾನು ಠಾಣೆಗೆ ಹೋದಾಗ, ಅಲ್ಲಿ ಬಜರಂಗದಳ ಸಂಘಟನೆಯವರು ಇದ್ದರು. ನನಗೆ ಇಬ್ರಾಹಿಂ ವಿರುದ್ಧ ಕರು ಕಳವು ಮಾಡಿರುವ ಬಗ್ಗೆ ದೂರು ನೀಡಲು ಹೇಳಿದರು. ಆದರೆ ನಾನು ದೂರು ನೀಡುವುದಿಲ್ಲ ಎಂದು ನಿರಾಕರಿಸಿ ಅಲ್ಲಿಂದ ತೆರಳಿದ್ದೆ. ಬಳಿಕ ಇಬ್ರಾಹಿಂ ಅವರನ್ನು ಠಾಣೆಯಲ್ಲಿ ಕುಳ್ಳಿರಿಸಿ ಎನ್ಕೌಂಟರ್ ಮಾಡಲು ನೋಡಿದ್ದಾರೆ. ಎರಡು ಗಂಟೆ ರಾತ್ರಿಗೆ ಅವರನ್ನು ಜೀಪಿನಲ್ಲಿ ಮೋಂಕಿ ಕ್ರಾಸ್ ರಸ್ತೆಗೆ ಕೊಂಡೊಯ್ದು ಜೀಪಿನಿಂದ ಇಳಿಸಿ, ಗನ್ ಪಾಯಿಂಟನ್ನು ತಲೆಗೆ ಇರಿಸಿ ಓಡಲು ಹೋಗಿದ್ದಾರೆ. ಆದರೆ, ಇಬ್ರಾಹಿಂ ಓಡಿರಲಿಲ್ಲ.

ಒಂದು ತಿಂಗಳ ನಂತರ ಫೋನ್ ಮಾಡಿ, ಠಾಣೆಯಲ್ಲಿದ್ದ ಕರುವನ್ನು ತೆಗೆದುಕೊಂಡು ಹೋಗಲು ನನಗೆ ಹೇಳಿದ್ದರು. ಇಬ್ರಾಹಿಂ ವಿರುದ್ಧ ದೂರು ನೀಡಲು ನಿರಾಕರಿಸಿದ್ದಕ್ಕೆ ನನ್ನ ಮೇಲೆಯೇ ಕೇಸ್ ಮಾಡಿ ಬಂಧಿಸಿದ್ದಾರೆ. ಫೆ.18ರಂದು ನನ್ನನ್ನು ಬಂಧಿಸಿ ಎರಡು ದಿನ ಜೈಲಲ್ಲಿ ಇರಿಸಿದ್ದಾರೆ. ಆಮೇಲೆ ಜಾಮೀನಿನಲ್ಲಿ ಹೊರಗೆ ಬಂದಿದ್ದೇನೆ. ನನ್ನ ಮೇಲೆ ವಿನಾಕಾರಣ ಕೇಸು ಹಾಕಿ ಹಿಂಸೆ, ಕಿರುಕುಳ ನೀಡಿದ್ದಾರೆ. ಗಂಗೊಳ್ಳಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಎಸ್ಪಿಗೆ ಅಲ್ಮೇಡಾ ಆಗ್ರಹ ಮಾಡಿದ್ದಾರೆ.

Francis Almeida, an electrician by profession who also undertakes dairying activity, said that he had given a calf free of cost to a friend, Muhammed Ibrahim from Gangolli. He alleged that Gangolli police sub-inspector, Nanja Naik, has been pressuring him to file a statement accusing Ibrahim of stealing his cow. "I did not agree to his suggestion. Therefore he registered false case against me and put me behind the bars. As he has meted out injustice to me, I will register case against sub-inspector Nanja Naik," Almeida asserted.