ಜುವೆಲ್ಲರಿ ಉದ್ಯಮಿಯ ಕಾರು ಅಡ್ಡಗಟ್ಟಿ ಕೋಟಿಗೂ ಮಿಕ್ಕಿದ ನಗದು ದರೋಡೆ ; ಹುಬ್ಬಳ್ಳಿಯಿಂದ ತಮಿಳುನಾಡಿಗೆ ತೆರಳುತ್ತಿದ್ದಾಗ ನೆಲಮಂಗಲದಲ್ಲಿ ಕಿಲಾಡಿ ಕೃತ್ಯ ! 

11-03-22 07:43 pm       Bengaluru Correspondent   ಕ್ರೈಂ

ಹಾಡಹಗಲೇ ಚಿನ್ನದ ವ್ಯಾಪಾರಿಯನ್ನ ಅಡ್ಡಗಟ್ಟಿ ಕಾರು ಸಹಿತ ಒಂದು ಕೋಟಿಗೂ ಮಿಕ್ಕಿದ ನಗದು ಹಣವನ್ನು ದರೋಡೆಗೈದ ಘಟನೆ ನೆಲಮಂಗಲ ಬಳಿಯ ತುಮಕೂರು ರಸ್ತೆಯಲ್ಲಿ ಶುಕ್ರವಾರ ನಡೆದಿದೆ.‌

ಬೆಂಗಳೂರು, ಮಾ.11: ಹಾಡಹಗಲೇ ಚಿನ್ನದ ವ್ಯಾಪಾರಿಯನ್ನ ಅಡ್ಡಗಟ್ಟಿ ಕಾರು ಸಹಿತ ಒಂದು ಕೋಟಿಗೂ ಮಿಕ್ಕಿದ ನಗದು ಹಣವನ್ನು ದರೋಡೆಗೈದ ಘಟನೆ ನೆಲಮಂಗಲ ಬಳಿಯ ತುಮಕೂರು ರಸ್ತೆಯಲ್ಲಿ ಶುಕ್ರವಾರ ನಡೆದಿದೆ.‌

ಇನೋವಾ ಕಾರಿನಲ್ಲಿ ಬಂದಿದ್ದ 7-8 ಮಂದಿಯಿದ್ದ ದರೋಡೆಕೋರರು ಕೃತ್ಯ ನಡೆಸಿದ್ದು ಬೆದರಿಸಿ ಹಣದ ಬ್ಯಾಗ್ ಪಡೆದು ಕಾರು ಸಹಿತ ತಂಡ ಪರಾರಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 48ರ ತುಮಕೂರು ರಸ್ತೆಯ ಮಾದಾವರ ಎಂಬಲ್ಲಿ ನಾಡ್ಗೀರ್ ಕಾಲೇಜು ಬಳಿ ಘಟನೆ ನಡೆದಿದೆ. ಉದ್ಯಮಿಗಳಾದ ಯೋಗೇಶ್ ಮತ್ತು ಜೋಸೆಫ್ ಪಾಲುದಾರಿಕೆಯಲ್ಲಿ ಜುವೆಲ್ಲರಿ ಬಿಸಿನೆಸ್ ನಡೆಸುತ್ತಿದ್ದು ಹುಬ್ಬಳ್ಳಿಯಿಂದ ತಮಿಳುನಾಡಿನ ನಾಗರ ಕೋಯಿಲ್ ಗೆ ಬ್ರೀಝಾ ಕಾರಿನಲ್ಲಿ ನಗದು ಹಣ ಇರಿಸಿಕೊಂಡು ತೆರಳುತ್ತಿದ್ದರು.‌ ಕಾರಿನಲ್ಲಿ ಯೋಗೇಶ್, ದಿನೇಶ್, ಫ್ರಾಂಕ್ಲಿನ್, ಮಣಿಕಂಠನ್ ಸತ್ಯವೇಲು ಎಂಬವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. 

ಈ ವೇಳೆ, ಇನೋವಾ ಕಾರಿನಲ್ಲಿ ಬಂದ ಏಳೆಂಟು ಜನರಿದ್ದ ತಂಡ ಕಾರನ್ನು ಅಡ್ಡಗಟ್ಟಿದ್ದು ಯೋಗೇಶ್ ಮೇಲೆ ರಾಡಿನಿಂದ ಹಲ್ಲೆ ನಡೆಸಿದ್ದಾರೆ. ಆನಂತರ ಕಾರಿನಲ್ಲಿದ್ದವರನ್ನು ಇಳಿಸಿ, ಕಾರು ಸಹಿತ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಕಾರಿನಲ್ಲಿ ಒಂದು ಕೋಟಿಗೂ ಹೆಚ್ಚು ಹಣ ಇತ್ತೆಂದು ಹೇಳಲಾಗುತ್ತಿದೆ. ಇವರು ಭಾರೀ ಪ್ರಮಾಣದಲ್ಲಿ ನಗದು ಹಣವನ್ನು ಒಯ್ಯುತ್ತಿರುವ ವಿಚಾರ ಗೊತ್ತಿದ್ದವರೇ ಈ ಕೃತ್ಯ ಎಸಗಿರುವ ಶಂಕೆಯಿದೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಖೆಡ್ಡಾ ತೋಡಿದ್ದಾರೆ.

Bangalore Robbers stop car rob crores of gold and flee at Nelamangala Tumakuru Highway.