ಭಜನಾ ಮಂದಿರದ ಜಾಗದ ವಿಚಾರದಲ್ಲಿ ತಕರಾರು ; ಅಕ್ಕಪಕ್ಕದ ಮನೆಯವರ ನಡುವೆ ಹೊಡೆದಾಟ, ಆಸ್ಪತ್ರೆಗೆ ದಾಖಲು 

14-03-22 01:13 pm       Mangalore Correspondent   ಕ್ರೈಂ

ಭಜನಾ ಮಂದಿರದ ಜಾಗದ ವಿಚಾರದಲ್ಲಿ ಸ್ಥಳೀಯ ಎರಡು ಗುಂಪಿನ ಮಂದಿ ಹೊಡೆದಾಡಿಕೊಂಡಿದ್ದು, ಮೂವರು ಆಸ್ಪತ್ರೆಗೆ ದಾಖಲಾದ ಘಟನೆ‌ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದಲ್ಲಿ ನಡೆದಿದೆ.

ಪುತ್ತೂರು, ಮಾ.14: ಭಜನಾ ಮಂದಿರದ ಜಾಗದ ವಿಚಾರದಲ್ಲಿ ಸ್ಥಳೀಯ ಎರಡು ಗುಂಪಿನ ಮಂದಿ ಹೊಡೆದಾಡಿಕೊಂಡಿದ್ದು, ಮೂವರು ಆಸ್ಪತ್ರೆಗೆ ದಾಖಲಾದ ಘಟನೆ‌ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದಲ್ಲಿ ನಡೆದಿದೆ.

ಅರ್ಯಾಪು ಗ್ರಾಮದ ದೊಡ್ಡಡ್ಕದಲ್ಲಿ ಮಹಾಲಕ್ಷ್ಮಿ ಭಜನಾ ಮಂದಿರದ ಆವರಣದಲ್ಲಿ ಪೂವಪ್ಪ ನಾಯ್ಕ ಎಂಬವರು ಹುಲ್ಲು ತೆಗೆದು ಸ್ವಚ್ಛಗೊಳಿಸುತ್ತಿದ್ದಾಗ ಹತ್ತಿರದ ನಿವಾಸಿ ನಾಗರಾಜ ಆಚಾರ್ಯ ಮನೆಯವರು ಆಕ್ಷೇಪಿಸಿದ್ದಾರೆ. ಇದೇ ವಿಚಾರದಲ್ಲಿ ಎರಡು ಮನೆಯವರು ಹೊಡೆದಾಟ ನಡೆಸಿದ್ದಾರೆ. ನಾರಾಯಣ ಆಚಾರ್ಯ, ಸರೋಜಿನಿ ಸೇರಿದಂತೆ ಆ ಮನೆಯವರು ಪೂವಪ್ಪ ನಾಯ್ಕ ಮತ್ತು ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ, ಪೂವಪ್ಪ ನಾಯ್ಕ ತನ್ನಲ್ಲಿದ್ದ ಹುಲ್ಲು ತೆಗೆಯುವ ಯಂತ್ರದಲ್ಲಿ ಸರೋಜಿನಿ ಎಂಬವರಿಗೆ ತಾಗಿಸಿ ಹಲ್ಲೆ ನಡೆಸಿದ್ದಾನೆಂದು ದೂರಲಾಗಿದೆ. ಎರಡೂ ಗುಂಪಿನ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ.‌

ಭಜನಾ ಮಂದಿರ ಇರುವ ಜಾಗವು ಆಚಾರ್ಯ ಕುಟುಂಬದ ಪೂರ್ವಜರಿಗೆ ಸೇರಿದ್ದು ಅದನ್ನು ಪ್ರತ್ಯೇಕ ಟ್ರಸ್ಟಿಗೆ ಬರೆದು ಕೊಟ್ಟಿರಲಿಲ್ಲ. ಆದರೆ ಹಿಂದಿನಿಂದಲೂ ಭಜನಾ ಮಂದಿರ ನಿರ್ಮಿಸಿ ಭಜನಾ ಕಾರ್ಯ ಮಾಡಲಾಗುತ್ತಿತ್ತು.  ಕ್ರಮೇಣ ಸ್ಥಳೀಯರು ಸಾರ್ವಜನಿಕ ಮಂದಿರ ಎನ್ನುವ ನೆಲೆಯಲ್ಲಿ ಹಕ್ಕು ಸ್ಥಾಪನೆಗೆ ಮುಂದಾಗಿದ್ದರು. ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸದೆ, ಕೇಸು ದಾಖಲಿಸಿ ವ್ಯಾಜ್ಯ ಕೋರ್ಟಿಗೆ ಹೋಗಿತ್ತು. ಆನಂತರ 10 ವರ್ಷ ಕಳೆದಿದ್ದು, ಅಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮತ್ತು ಯಾರು ಕೂಡ ಪ್ರವೇಶ ಮಾಡದೆ ಪೂಜಾ ಕಾರ್ಯ ನಿರ್ವಹಿಸದಂತೆ ಕೋರ್ಟಿನಿಂದ ತಡೆಯಾಜ್ಞೆ ನೀಡಲಾಗಿತ್ತು. 

ಈ ನಡುವೆ ದೊಡ್ಡಡ್ಕ ನಿವಾಸಿ ಪೂವಪ್ಪ ನಾಯ್ಕ್, ವೆಂಕಟಕೃಷ್ಣ ಭಟ್, ಸೇಸಪ್ಪ ನಾಯ್ಕ್ ಹಾಗೂ ಅವರ ಸಂಗಡಿಗರು ಆ ಜಾಗದಲ್ಲಿ ಕಳೆ ತೆಗೆದು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಈ ವೇಳೆ, ಸರೋಜಿನಿ ಮತ್ತು ಅವರ ಕುಟುಂಬ ಪ್ರಶ್ನೆ ಮಾಡಲು ಹೋಗಿದ್ದು ಹೊಡೆದಾಟ ನಡೆದಿದೆ. ಸರೋಜಿನಿ ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೊಂದು ತಂಡದ ಪೂವಪ್ಪ ನಾಯ್ಕ್ ಮತ್ತು ಅವರ ಪತ್ನಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಎರಡೂ ತಂಡದವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Puttur Clash erupts between two families over land dispute of Bhajan Mandir, three hospitalized. A case has been registered at Sampya Police Station.