Exclusive: ಗ್ರಾಮ ಲೆಕ್ಕಾಧಿಕಾರಿ ಹುದ್ದೆ ತೆಗೆಸಿಕೊಡುವುದಾಗಿ ಹೇಳಿ 40 ಲಕ್ಷ ಪೀಕಿಸಿದ ಖದೀಮರು ; ಮಂಗಳೂರು, ಬೆಂಗಳೂರಿನಲ್ಲಿ ಬೀಡುಬಿಟ್ಟ ಸಿಬಿಐ ಸೋಗಿನ ಜಾಲ !

05-05-22 09:25 pm       Mangalore Correspondent   ಕ್ರೈಂ

ಪಿಎಸ್ಐ ನೇಮಕಾತಿಯಲ್ಲಿ ಕೋಟ್ಯಂತರ ರೂಪಾಯಿ ಹಗರಣ ಆಗಿರುವ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ತೆಗೆಸಿಕೊಡುತ್ತೇವೆಂದು ನಾಲ್ವರು ತಂಡ ಕಟ್ಟಿಕೊಂಡು ಹುದ್ದೆ ಆಕಾಂಕ್ಷಿಗಳಿಂದ 40 ಲಕ್ಷ ರೂಪಾಯಿ ಹಣ ದೋಚಿದ ಬಗ್ಗೆ ಮಂಗಳೂರಿನಲ್ಲಿ ದೂರು ದಾಖಲಾಗಿದೆ.

ಮಂಗಳೂರು, ಮೇ 5: ಪಿಎಸ್ಐ ನೇಮಕಾತಿಯಲ್ಲಿ ಕೋಟ್ಯಂತರ ರೂಪಾಯಿ ಹಗರಣ ಆಗಿರುವ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ತೆಗೆಸಿಕೊಡುತ್ತೇವೆಂದು ನಾಲ್ವರು ತಂಡ ಕಟ್ಟಿಕೊಂಡು ಹುದ್ದೆ ಆಕಾಂಕ್ಷಿಗಳಿಂದ 40 ಲಕ್ಷ ರೂಪಾಯಿ ಹಣ ದೋಚಿದ ಬಗ್ಗೆ ಮಂಗಳೂರಿನಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಹಣ ಕಳೆದುಕೊಂಡ ಹಾಸನ ಜಿಲ್ಲೆಯ ಆಲೂರು ನಿವಾಸಿ ಕೃಷ್ಣ ಗೌಡ(66) ಎಂಬವರು ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾಗಭೂಷಣ್ ಬೆಂಗಳೂರು, ನಾರಾಯಣಸ್ವಾಮಿ ವಾಮಂಜೂರು, ಮಹೇಶ್ ಭಟ್ ಮುಲ್ಕಿ, ದಿನೇಶ್ ಮೂಡುಬಿದ್ರೆ ಎಂಬವರು ಪ್ರಕರಣದ ಆರೋಪಿಗಳೆಂದು ಹೆಸರಿಸಲಾಗಿದೆ.  

ಕೃಷ್ಣ ಗೌಡರ ಪುತ್ರ ದರ್ಶನ್ ಸಿ.ಕೆ., ಹಾಸನ ಜಿಲ್ಲೆಯ ಹೇಮಾವತಿ, ಚಿಕ್ಕಮಗಳೂರಿನ ಲೋಹಿತ್ ಮತ್ತು ಬೆಂಗಳೂರಿನ ಮೊಹಮ್ಮದ್ ಶರೀಫ್ ಎಂಬವರು ಬೆಂಗಳೂರಿನಲ್ಲಿ ಕೋಚಿಂಗ್ ಸೆಂಟರ್ ಒಂದರಲ್ಲಿ ತರಬೇತಿ ಪಡೆಯುತ್ತಿದ್ದಾಗ ಪರಸ್ಪರ ಪರಿಚಿತರಾಗಿದ್ದರು. 2019ರಲ್ಲಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಸರಕಾರಿ ನೇಮಕಾತಿ ಬಗ್ಗೆ ಜಾಹೀರಾತು ಬಂದಿರುವುದನ್ನು ನೋಡಿ ಹುದ್ದೆ ಗಿಟ್ಟಿಸಲು ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಮೊಹಮ್ಮದ್ ಶರೀಫ್ ಬೆಂಗಳೂರಿನ ತನ್ನ ನೆರೆಮನೆಯ ನಿರ್ಮಲಾ ವೆಂಕಟಸ್ವಾಮಿ ಎಂಬವರ ಮನೆಯಲ್ಲಿ ಪೂಜೆಗೆಂದು ಬರುತ್ತಿದ್ದ ಮಂಗಳೂರಿನ ಮುಲ್ಕಿಯ ಮಹೇಶ್ ಭಟ್ ಬಳಿ ಸರಕಾರಿ ಹುದ್ದೆ ಗಿಟ್ಟಿಸುವ ಬಗ್ಗೆ ಮಾಹಿತಿ ಕೇಳಿದ್ದಾರೆ.

In FIR, Four CBI Officers Accused of Leaking Info to Firms Under Probe for  Bank Fraud

ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಹಾಕಿದ್ದೀವಿ, ಏನಾದ್ರೂ ಮಾಡಬಹುದೇ ಎಂದು ಮೊಹಮ್ಮದ್ ಶರೀಫ್ ಕೇಳಿದ್ದಕ್ಕೆ ಮಹೇಶ್ ಭಟ್, ತನಗೆ ಸಿಬಿಐನಲ್ಲಿ ನಾರಾಯಣ ಸ್ವಾಮಿ ಎಂಬ ಅಧಿಕಾರಿಯ ಪರಿಚಯ ಇದೆ, ಅವರಿಗೆ ಪೊಲೀಸ್ ಇಲಾಖೆಯಲ್ಲಿ ಮತ್ತು ರಾಜಕೀಯ ಗಣ್ಯರ ಸಂಪರ್ಕ ಇದ್ದು ಕೆಲಸ ಮಾಡಿಕೊಡುತ್ತಾರೆ ಎಂದು ಹೇಳಿದ್ದರು. ಇದರಂತೆ ಅರ್ಜಿ ಸಲ್ಲಿಸಿದ್ದ ಮೊಹಮ್ಮದ್ ಶರೀಫ್ ಮತ್ತು ಇತರ ಮೂವರು 2019ರ ಆಗಸ್ಟ್ ತಿಂಗಳಲ್ಲಿ ಮುಲ್ಕಿಯ ಮಹೇಶ್ ಭಟ್ ಮನೆಗೆ ತೆರಳಿದ್ದರು. ಅಲ್ಲಿ ಸಿಬಿಐ ಅಧಿಕಾರಿ ಸೋಗಿನಲ್ಲಿದ್ದ ನಾರಾಯಣ ಸ್ವಾಮಿಯನ್ನು ಮಹೇಶ್ ಭಟ್ ಪರಿಚಯ ಮಾಡಿದ್ದ. ನಿಮ್ಮ ಕೆಲಸ ಮಾಡಿಕೊಡುತ್ತೇನೆ. ಬೆಂಗಳೂರಿನಲ್ಲಿ ನಾಗಭೂಷಣ್ ಮತ್ತು ಮೂಡುಬಿದ್ರೆಯ ದಿನೇಶ್ ಎಂಬಿಬ್ಬರ ಮೂಲಕ ಮಾತನಾಡಿದರೆ ಕೆಲಸ ಗ್ಯಾರಂಟಿ. ಆದರೆ ಅವರು ಹೇಳಿದಷ್ಟು ಹಣದ ವ್ಯವಸ್ಥೆ ಮಾಡಬೇಕು ಎಂದು ನಾರಾಯಣ ಸ್ವಾಮಿ ಹೇಳಿದ್ದಾನೆ. ಅದರಂತೆ, ಆಗಸ್ಟ್ 11ರಂದು ಕೃಷ್ಣ ಗೌಡರು ತನ್ನ ಪುತ್ರನ ಸಲುವಾಗಿ ಎಂಟು ಲಕ್ಷ ಹಣವನ್ನು ಮಂಗಳೂರಿನ ವಾಮಂಜೂರಿನ ನಾರಾಯಣ ಸ್ವಾಮಿಯ ಮನೆಗೆ ತಲುಪಿಸಿದ್ದರು.

ಆನಂತರ ಉದ್ಯೋಗದ ಆದೇಶದ ಪ್ರತಿ ಕೇಳಿದಾಗ, ಕೆಲವು ಕಾರಣದಿಂದ ವಿಳಂಬ ಆಗಿರುವುದಾಗಿ ಆರೋಪಿಗಳು ಸಮಜಾಯಿಷಿ ನೀಡಿದ್ದರು. 2021ರ ಸೆಪ್ಟಂಬರ್ ನಲ್ಲಿ ಆದೇಶದ ಪ್ರತಿ ರೆಡಿಯಾಗಿದೆ, ಉಳಿದ ಹಣದ ಜೊತೆಗೆ ಬೆಂಗಳೂರಿಗೆ ಬರುವಂತೆ ತಿಳಿಸಿದ್ದರು. ಕೃಷ್ಣ ಗೌಡ ಮತ್ತು ಮಗ ಬೆಂಗಳೂರಿಗೆ ತೆರಳಿದ್ದಾಗ, ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಸಿಕ್ಕಿರುವ ಬಗ್ಗೆ ನಕಲಿ ಆದೇಶ ಪತ್ರವನ್ನು ತೋರಿಸಿದ್ದಾರೆ. ಅದನ್ನು ನಂಬಿದ ಕೃಷ್ಣೇಗೌಡರು ಅಕ್ಟೋಬರ್ 24ರಂದು 32 ಲಕ್ಷ ರೂಪಾಯಿ ಹಣವನ್ನು ನಾರಾಯಣ ಸ್ವಾಮಿ ಮನೆಯಲ್ಲಿ ನೀಡಿದ್ದರು.

ಆಬಳಿಕ ಉದ್ಯೋಗಕ್ಕೆ ನೇಮಕಾತಿ ಯಾವಾಗ ಆಗುತ್ತದೆ ಎಂದು ದರ್ಶನ್ ಆರೋಪಿಗಳಲ್ಲಿ ಕೇಳತೊಡಗಿದ್ದ. ಆದರೆ, ಆರೋಪಿಗಳು ತಪ್ಪಿಸಿಕೊಳ್ಳುವ ರೀತಿ ನಟಿಸಿದ್ದರು. ಈ ನಡುವೆ, ಕೃಷ್ಣ ಗೌಡರು, ನಾರಾಯಣ ಸ್ವಾಮಿ ಮತ್ತು ನಾಗಭೂಷಣ್ ಬಳಿ ಒಂದೋ ಉದ್ಯೋಗ ತೆಗೆಸಿಕೊಡಿ, ಇಲ್ಲದಿದ್ದರೆ ನನ್ನ ಹಣವನ್ನು ಹಿಂತಿರುಗಿಸಿ ಎಂದು ಗಟ್ಟಿಧ್ವನಿಯಲ್ಲಿ ಕೇಳಿದಾಗ, ಆರೋಪಿಗಳು ತಿರುಗಿ ಬೈದಿದ್ದಾರೆ. ನೀನೇನಾದರೂ ಪೊಲೀಸ್ ದೂರು ಕೊಟ್ಟರೆ ನಿನ್ನನ್ನು ಪೆಟ್ರೋಲ್ ಸುರಿದು ಸುಟ್ಟು ಹಾಕುತ್ತೇವೆ. ನಮಗೆ ಪ್ರಭಾವಿ ರಾಜಕಾರಣಿಗಳ ಕೈವಾಡವಿದ್ದು, ನಮ್ಮ ತಂಟೆಗೆ ಬಂದಲ್ಲಿ ಏನು ಮಾಡುವುದಕ್ಕೂ ಹೇಸುವವರಲ್ಲ ಎಂದು ಬೆದರಿಕೆ ಹಾಕಿದ್ದಾರೆ.

ಮಗನಿಗೆ ಹುದ್ದೆ ತೆಗೆಸಿಕೊಡುವುದಕ್ಕಾಗಿ ಕೃಷ್ಣೇಗೌಡರು 40 ಲಕ್ಷ ಹಣವನ್ನು ಕೊಟ್ಟು ಮೋಸ ಹೋಗಿದ್ದಾರೆ. ಮಂಗಳೂರು, ಬೆಂಗಳೂರಿನಲ್ಲಿ ಆರೋಪಿಗಳು ತಂಡ ಕಟ್ಟಿಕೊಂಡು ಗ್ರಾಮ ಲೆಕ್ಕಾಧಿಕಾರಿ ಹುದ್ದೆ ತೆಗೆಸಿಕೊಡುವ ಆಮಿಷದಲ್ಲಿ ಹಲವರಿಂದ ಹಣ ಪಡೆದು ದೋಚಿರುವ ಬಗ್ಗೆ ಸಂಶಯಗಳಿವೆ. ಸದ್ಯಕ್ಕೆ ಒಬ್ಬರು ಮಂಗಳೂರಿನಲ್ಲಿ ದೂರು ದಾಖಲಿಸಿದ್ದು, ಆರೋಪಿಗಳನ್ನು ಮಂಗಳೂರು ಪೊಲೀಸರು ಹಿಡಿದು ಅಕ್ರಮದ ಹೂರಣವನ್ನು ಬಯಲಿಗೆಳೆಯುತ್ತಾರೋ ಕಾದು ನೋಡಬೇಕು.

Amid Police PSI Scam in Karntaka another scam has been exposed in Mangalore. A Man has been cheated of 40 lakhs by giving fake Village Accountant job offer, a case has been filed at Mangalore cyber crime police station. A complaint has been filed by Krishan Gowda (66) from Hassan. A case had been registered against four persons in connection to this case.