ಟ್ವಿಟರ್‌ನಿಂದ ಭಾರತದಲ್ಲಿ ಹೊಸ ಕುಂದುಕೊರತೆ ಅಧಿಕಾರಿಯ ನೇಮಕ !

29-06-21 11:55 am       GIZBOT Mutthuraju H M   ಡಿಜಿಟಲ್ ಟೆಕ್

ಭಾರತದಲ್ಲಿ ಟ್ವಿಟರ್‌ನ ಕುಂದುಕೊರತೆ ಅಧಿಕಾರಿಯಾಗಿ ಟ್ವಿಟರ್‌ ಕ್ಯಾಲಿಫೋರ್ನಿಯಾ ಮೂಲದ ಜೆರೆಮಿ ಕೆಸೆಲ್‌ ಅವರನ್ನು ನೇಮಿಸಿದೆ.

ಭಾರತದಲ್ಲಿ ಟ್ವಿಟರ್‌ನ ಕುಂದುಕೊರತೆ ಅಧಿಕಾರಿಯಾಗಿ ಟ್ವಿಟರ್‌ ಕ್ಯಾಲಿಫೋರ್ನಿಯಾ ಮೂಲದ ಜೆರೆಮಿ ಕೆಸೆಲ್‌ ಅವರನ್ನು ನೇಮಿಸಿದೆ. ಭಾರತದ ಟ್ವಿಟರ್‌ ಮಧ್ಯಂತರ ನಿವಾಸ ಕುಂದುಕೊರತೆ ಅಧಿಕಾರಿ ಸ್ಥಾನಕ್ಕೆ ಧರ್ಮೇಂದ್ರ ಚತುರ್‌ ರಾಜಿನಾಮೆ ನೀಡಿದ ಕೆಲವೇ ಗಂಟೆಗಳ ಅಂತರದಲ್ಲಿ ಈ ಹೊಸ ಬೆಳವಣಿಗೆ ನಡೆದಿದೆ. ಭಾರತೀಯ ಚಂದಾದಾರರಿಂದ ಬಂದ ದೂರುಗಳನ್ನು ಪರಿಹರಿಸಲು ಹೊಸ ಐಟಿ ನಿಯಮಗಳ ಪ್ರಕಾರ ಕಟ್ಟುನಿಟ್ಟಿನ ಅಧಿಕಾರಿಯ ಅವಶ್ಯಕತೆ ಇರುವುದರಿಂದ ಮೈಕ್ರೋ ಬ್ಲಾಗಿಂಗ್‌ ಸೈಟ್‌ ಈ ಕ್ರಮ ಕೈಗೊಂಡಿದೆ.

ಹೌದು, ಭಾರತದಲ್ಲಿ ಟ್ವಿಟರ್‌ ಹೊಸ ಕುಂದುಕೊರೆತ ಅಧಿಕಾರಿಯಾಗಿ ಜೆರೆಮಿ ಕೆಸೆಲ್‌ ಅವರನ್ನು ನೇಮಕ ಮಾಡಿದೆ. ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು 2021 ರ ಅಡಿಯಲ್ಲಿ ಅಗತ್ಯವಿರುವಂತೆ ಸಾಮಾಜಿಕ ಮಾಧ್ಯಮ ಕಂಪನಿಯ ಕುಂದುಕೊರತೆ ಅಧಿಕಾರಿಯನ್ನು ನೇಮಿಸಿದೆ. ಭಾರತದ ಹೊಸ ಐಟಿ ನಿಯಮಗಳ ಜಾರಿ ಕುರಿತು ಭಾರತ ಸರ್ಕಾರದೊಂದಿಗೆ ಟ್ವಿಟರ್‌ ತಿಕ್ಕಾಟ ನಡೆಸುತ್ತಿದೆ. ಇದೆ ಸಮಯದಲ್ಲಿ ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿವೆ. ಈಗಾಗಲೇ ದೇಶದ ಹೊಸ ಐಟಿ ನಿಯಮಗಳನ್ನು ಪಾಲಿಸಲು ವಿಫಲವಾದ ಕಾರಣಕ್ಕಾಗಿ ಸರ್ಕಾರವು ಟ್ವಿಟರ್‌ ವಿರುದ್ದ ಆಕ್ರೋಶವನ್ನು ಸಹ ವ್ಯಕ್ತಪಡಿಸಿದೆ.



ಇನ್ನು ಮೇ 25 ರಿಂದ ಜಾರಿಗೆ ಬಂದ ಹೊಸ ಐಟಿ ನಿಯಮಗಳ ಅನ್ವಯ ಬಳಕೆದಾರರಿಂದ ಅಥವಾ ಬಲಿಪಶುಗಳಿಂದ ದೂರುಗಳನ್ನು ಪರಿಹರಿಸಲು ಕುಂದುಕೊರತೆ ನಿವಾರಣಾ ಅಧಿಕಾರಿಯನ್ನು ನೇಮಿಸಬೇಕಾದ ಅನಿವಾರ್ಯತೆ ಇದೆ. 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಎಲ್ಲಾ ಮಹತ್ವದ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಅಂತಹ ದೂರುಗಳನ್ನು ಎದುರಿಸಲು ಮತ್ತು ಅಂತಹ ಅಧಿಕಾರಿಗಳ ಹೆಸರು ಮತ್ತು ಸಂಪರ್ಕ ವಿವರಗಳನ್ನು ಹಂಚಿಕೊಳ್ಳಲು ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕು.



ಇದಲ್ಲದೆ ದೊಡ್ಡ ಮಟ್ಟದ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಸಂಪರ್ಕ ವ್ಯಕ್ತಿ ಮತ್ತು ನಿವಾಸಿ ಕುಂದುಕೊರತೆ ಅಧಿಕಾರಿಯನ್ನು ನೇಮಿಸಲು ಆದೇಶಿಸಲಾಗಿದೆ. ಇವರೆಲ್ಲರೂ ಭಾರತದಲ್ಲಿ ವಾಸಿಸುವವರಾಗಿರಬೇಕು. ಆದರೆ ಟ್ವಿಟರ್‌ ಭಾರತದ ಕುಂದುಕೊರತೆ ಅಧಿಕಾರಿಯಾಗಿ ಕ್ಯಾಲಿಫೋರ್ನಿಯಾ ಮೂಲದ ವ್ಯಕ್ತಿಯನ್ನು ನೇಮಿಸಿರುವುದರಿಂದ ಇದು ಯಾವ ರೀತಿಯ ಸ್ವರೂಪ ಪಡೆದುಕೊಳ್ಳಲಿದೆ ಅನ್ನೊದನ್ನ ಕಾದು ನೋಡಬೇಕಿದೆ.



ಈಗಾಗಲೇ ಜೂನ್ 5 ರಂದು ಸರ್ಕಾರ ನೀಡಿರುವ ಅಂತಿಮ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ಟ್ವಿಟರ್, ಹೊಸ ಐಟಿ ನಿಯಮಗಳನ್ನು ಪಾಲಿಸಲು ಬದ್ದವಾಗಿರುವುದಾಗಿ ಹೇಳಿದೆ. ಅಲ್ಲದೆ ಮುಖ್ಯ ಅನುಸರಣೆ ಅಧಿಕಾರಿಯ ವಿವರಗಳನ್ನು ಹಂಚಿಕೊಳ್ಳಲಿದೆ ಎಂದು ಹೇಳಿದೆ. ಆಗ ಮಧ್ಯಂತರ ಕುಂದುಕೊರತೆ ಅಧಿಕಾರಿಯಾಗಿ ಧರ್ಮೇಂದ್ರ ಚತುರ್ ಆಯ್ಕೆಯಾಗಿದ್ದರು. ಆದರೆ ಇವರು ಈಗಾಗಲೇ ರಾಜಿನಾಮೆ ನೀಡಿದ್ದು, ಟ್ವಿಟರ್ ಈಗ ಭಾರತದ ಕುಂದುಕೊರತೆ ಅಧಿಕಾರಿ ಹೆಸರಿನ ಸ್ಥಳದಲ್ಲಿ ಯುಎಸ್ ವಿಳಾಸ ಮತ್ತು ಇಮೇಲ್ ಐಡಿಯೊಂದಿಗೆ ಜೆರೆಮಿ ಕೆಸೆಲ್ ಹೆಸರು ಪ್ರದರ್ಶಿಸುತ್ತದೆ. ಸರ್ಕಾರಿ ಅಧಿಕಾರಿಯೊಬ್ಬರ ಪ್ರಕಾರ, ಕಂಪನಿಯು ಮಧ್ಯವರ್ತಿಯಾಗಿ ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ ಮತ್ತು ಅದರ ಬಳಕೆದಾರರು ವೇದಿಕೆಯಲ್ಲಿ ಪೋಸ್ಟ್ ಮಾಡಿದ ಎಲ್ಲಾ ವಿಷಯಗಳಿಗೆ ಕಾನೂನುಬದ್ಧವಾಗಿ ಜವಾಬ್ದಾರರಾಗಿರುತ್ತಾರೆ.

(Kannada Copy of Gizbot Kannada)