ವಾಟ್ಸಾಪ್‌ನಲ್ಲಿ ಕೋವಿಡ್‌ ಲಸಿಕೆ ಸ್ಲಾಟ್‌ ಬುಕ್‌ ಮಾಡುವುದು ಹೇಗೆ!?

24-08-21 05:02 pm       Mayuri N   ಡಿಜಿಟಲ್ ಟೆಕ್

ಇನ್ನು ಮುಂದೆ ಕೊರೊನಾ ವೈರಸ್‌ ಸೋಂಕು ವಿರುದ್ದದ ಲಸಿಕೆ ಪಡೆಯುವ ಫಲಾನುಭವಿಗಳು ಈಗ ವಾಟ್ಸಾಪ್‌ ಮೂಲಕವೂ ಕೋವಿಡ್‌ ಲಸಿಕೆಯ ಸ್ಲಾಟ್‌ ಬುಕ್‌ ಮಾಡಬಹುದು.

ನವದೆಹಲಿ, ಆಗಸ್ಟ್‌ 24: ಇನ್ನು ಮುಂದೆ ಕೊರೊನಾ ವೈರಸ್‌ ಸೋಂಕು ವಿರುದ್ದದ ಲಸಿಕೆ ಪಡೆಯುವ ಫಲಾನುಭವಿಗಳು ಈಗ ವಾಟ್ಸಾಪ್‌ ಮೂಲಕವೂ ಕೋವಿಡ್‌ ಲಸಿಕೆಯ ಸ್ಲಾಟ್‌ ಬುಕ್‌ ಮಾಡಬಹುದು. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದ್ದು, ಕೋವಿಡ್‌ ಲಸಿಕೆ ಪಡೆಯಬಹುದಾದ ಫಲಾನುಭವಿಗಳು ಕೊರೊನಾ ಸಹಾಯವಾಣಿ ಸಂಖ್ಯೆಗೆ ವಾಟ್ಸಾಪ್‌ ಮಾಡುವ ಮೂಲಕ ಕೋವಿಡ್‌ ಲಸಿಕೆಗಾಗಿ ತಮ್ಮ ಹತ್ತಿರದ ಕೋವಿಡ್‌ ಲಸಿಕೆ ಕೇಂದ್ರದಲ್ಲಿ ದಾಖಲಾತಿಯನ್ನು ಪಡೆಯಬಹುದು ಎಂದು ತಿಳಿಸಿದೆ.

ನೀವು ನಿಮ್ಮ ನಿವಾಸದ ಸಮೀಪದ ಕೋವಿಡ್‌ ಲಸಿಕಾ ಕೇಂದ್ರದಲ್ಲಿ ಕೋವಿಡ್‌ ಲಸಿಕೆಯನ್ನು ಪಡೆಯಬೇಕಾದರೆ ವಾಟ್ಸಾಪ್‌ ಸಂಖ್ಯೆ +91 9013151515 ಸಂಖ್ಯೆಗೆ "Book Slot" ಎಂದು ಸಂದೇಶವನ್ನು ಕಳಿಸುವ ಮೂಲಕ ಸ್ಲಾಟ್‌ ಬುಕ್‌ ಮಾಡಬಹುದು. ಆನ್‌ಲೈನ್‌ ಕೋವಿನ್‌ ಮೂಲಕ ಕೋವಿಡ್‌ ಲಸಿಕೆ ಸ್ಲಾಟ್‌ಗಳನ್ನು ಬುಕ್ ಮಾಡಲು ಸರಿಯಾಗಿ ತಿಳಿಯದವರಿಗೆ ಈ ವಾಟ್ಸಾಪ್‌ ಸೌಕರ್ಯವು ಸ್ಲಾಟ್‌ ಬುಕ್‌ ಮಾಡಲು ಬಹಳ ಸರಳ ವಿಧಾನವಾಗಿದೆ.



ಕಳೆದ ಮಾರ್ಚ್ ತಿಂಗಳಿನಿಂದ ಮೈಗವರ್ನಮೆಂಟ್‌ ಕೊರೊನಾ ಹೆಲ್ಪ್‌ಲೈನ್‌ ಡೆಸ್ಕ್‌ನ ವಾಟ್ಸಾಪ್‌ ಕೂಡಾ ಇದೆ. ಇದು ಹ್ಯಾಪ್ಟಿಕ್‌ನ ಎಐ ಸೊಲ್ಯೂಷನ್‌ನಿಂದ ಚಾಲಿತವಾಗಿದೆ ಹಾಗೂ Turn.io ನಿಂದ ಬೆಂಬಲಿತವಾಗಿದೆ. ಸುಮಾರು 41 ದಶಲಕ್ಷಕ್ಕೂ ಹೆಚ್ಚು ವಾಟ್ಸಾಪ್‌ ಬಳಕೆದಾರರಿಗೆ ಕೋವಿಡ್ ಸಂಬಂಧಿತ ಮಾಹಿತಿ ನೀಡುವಲ್ಲಿ ಈ ವಾಟ್ಸಪ್‌ ಸಹಾಯವಾಣಿಯು ಪ್ರಮುಖ ಪಾತ್ರವನ್ನು ವಹಿಸಿದೆ. ಈ ತಿಂಗಳಿನ ಆರಂಭದಲ್ಲಿ ಮೈಗವರ್ನಮೆಂಟ್‌ ಹಾಗೂ ವಾಟ್ಸಾಪ್‌ ತಮ್ಮ ಕಾರ್ಯ ವ್ಯಾಪ್ತಿಯನ್ನು ಹೆಚ್ಚಿಸಿದೆ ಹಾಗೂ ಕೋವಿಡ್‌ ಲಸಿಕೆ ಪಡೆದವರು ವಾಟ್ಸಾಪ್‌ ಮೂಲಕ ಕೋವಿಡ್‌ ಲಸಿಕೆ ಪ್ರಮಾಣ ಪತ್ರವನ್ನು ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಿದೆ. ಈ ಸೌಲಭ್ಯದ ಮೂಲಕ ಈವರೆಗೂ ಸುಮಾರು 32 ಲಕ್ಷ ಕೋವಿಡ್‌ ಲಸಿಕೆ ಪ್ರಮಾಣ ಪತ್ರವನ್ನು ಡೌನ್‌ ಲೋಡ್‌ ಮಾಡಲಾಗಿದೆ.



ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಮೈಗವರ್ನಮೆಂಟ್‌ ಸಿಇಒ ಅಭಿಷೇಕ್‌ ಸಿಂಗ್‌, "ಸರಿಯಾದ ವೇದಿಕೆ ಹಾಗೂ ತಂತ್ರಜ್ಞಾನವನ್ನು ಒಂದುಗೂಡಿದಾಗ ಅದರ ಫಲಿತಾಂಶವು ಅಪಾರ ಉಪಯೋಗದಾಯಕವಾಗಿರುತ್ತದೆ. ಮೈಗವರ್ನಮೆಂಟ್‌ ಕೊರೊನಾ ಹೆಲ್ಪ್‌ಲೈನ್‌ ಡೆಸ್ಕ್‌ ಆರಂಭವಾದ ಸಂದರ್ಭದಿಂದ ಅದು ಹ್ಯಾಪ್ಟಿಕ್‌ನ ಎಐ ಸೊಲ್ಯೂಷನ್‌ ಮತ್ತು Turn.io ನಿಂದ ಬೆಂಬಲಿತವಾಗಿದೆ. ಈ ವಾಟ್ಸಾಪ್‌ ಸಹಾಯವಾಣಿಯು ಜನರಿಗೆ ಕೊರೊನಾ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ನೀಡುವುದು ಮಾತ್ರವಲ್ಲದೇ ಈಗ ವಾಟ್ಸಾಪ್‌ ಮೂಲಕ ಕೋವಿಡ್‌ ಲಸಿಕೆಗೆ ಸ್ಲಾಟ್‌ ಬುಕ್‌ ಮಾಡಬಹುದು, ತಮ್ಮ ಸಮೀಪದ ಕೋವಿಡ್‌ ಲಸಿಕೆ ಕೇಂದ್ರಗಳ ಮಾಹಿತಿಯನ್ನು ಪಡೆಯಬಹುದು, ಹಾಗೆಯೇ ಕೋವಿಡ್‌ ಲಸಿಕೆ ಪಡೆದ ಬಳಿಕ ಪ್ರಮಾಣ ಪತ್ರವನ್ನು ಕೂಡಾ ಡೌನ್‌ಲೋಡ್‌ ಮಾಡಬಹುದು," ಎಂದು ಮಾಹಿತಿ ನೀಡಿದ್ದಾರೆ.



ಇನ್ನು ವಾಟ್ಸಾಪ್ ನಲ್ಲಿ ಸಾರ್ವಜನಿಕ ನೀತಿ ನಿರ್ದೇಶಕರು ಆಗಿರುವ ಶಿವನಾಥ್‌ ತುಕ್ರಲ್ ಮಾತನಾಡಿ, "ಈ ಹಿಂದೆ ವಾಟ್ಸಾಪ್‌ ಮೂಲಕ ಕೋವಿಡ್‌ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕೇಳಬಹುದಿತ್ತು ಹಾಗೂ ಕೋವಿಡ್‌ ಲಸಿಕೆ ಪಡೆದವರು ತಮ್ಮ ಕೋವಿಡ್‌ ಪ್ರಮಾಣ ಪತ್ರವನ್ನು ಕೂಡಾ ಡೌನ್‌ಲೋಡ್‌ ಮಾಡಬಹುದಿತ್ತು. ಆದರೆ ಇನ್ನು ಮುಂದೆ ಜನರಿಗೆ ಕೋವಿಡ್‌ ಲಸಿಕೆ ಸ್ಲಾಟ್‌ ಅನ್ನು ಕೂಡಾ ಬುಕ್‌ ಮಾಡಬಹುದು. ನಾವು ಜೊತೆ ಸೇರಿ ಜನರಿಗೆ ಕೊರೊನಾ ವೈರಸ್‌ ವಿರುದ್ದದ ಲಸಿಕೆ ಪಡೆಯಲು ಸಹಾಯವಾಗುವ, ಸರಳವಾಗುವ ಎಲ್ಲಾ ಕಾರ್ಯ ವಿಧಾನವನ್ನು ಕೈಗೊಳ್ಳುತ್ತೇವೆ," ಎಂದು ತಿಳಿಸಿದ್ದಾರೆ.



ಹಾಗಾದರೆ ಸಹಾಯವಾಣಿಯ ಮೂಲಕ ಕೋವಿಡ್‌ ಲಸಿಕೆ ಸ್ಲಾಟ್‌ ಬುಕ್‌ ಮಾಡುವುದು ಹೇಗೆ?

  • ಮೊದಲು ವಾಟ್ಸಾಪ್‌ ಸಂಖ್ಯೆ +91 9013151515 ಅನ್ನು ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಸೇವ್‌ ಮಾಡಿಕೊಳ್ಳಿ
  • ವಾಟ್ಸಾಪ್‌ಗೆ ಹೋಗಿ ರಿಫ್ರಶ್‌ ಮಾಡಿದ ಬಳಿಕ ಈ ಸಂಖ್ಯೆ ತೋರಿಸುತ್ತದೆ. ಆಗ 'Book Slot' ಎಂದು ವಾಟ್ಸಾಪ್‌ ಮಾಡಿ
  • ಬಳಿಕ ನಿಮ್ಮ ಮೊಬೈಲ್‌ನಲ್ಲಿ ಆರು ಸಂಖ್ಯೆ ಒನ್‌ ಟೈಮ್‌ ಪಾಸ್‌ವರ್ಡ್ (ಒಟಿಪಿ) ಜೆನೆರೆಟ್‌ ಆಗಲಿದೆ
  • ನಂತರ ನೀವು ಕೋವಿಡ್‌ ಲಸಿಕೆ ಪಡೆಯಲು ಬಯಸುವ ಸ್ಥಳ ಹಾಗೂ ದಿನಾಂಕವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು
  • ಬಳಿಕ ನಿಮಗೆ ಕೇಂದ್ರದ ಹಾಗೂ ದಿನಾಂಕದ ಖಚಿತತೆ ಬಗ್ಗೆ ಮಾಹಿತಿ ದೊರೆಯಲಿದೆ

(Kannada Copy of One India Kannada)