ಆಪಲ್ ಸಂಸ್ಥೆ ಇಂತಹ ಶಾಕಿಂಗ್ ಸುದ್ದಿ ನೀಡುತ್ತೆ ಅಂತ ಯಾರೂ ನಿರೀಕ್ಷಿಸಿರಲಿಲ್ಲ!

16-09-21 03:19 pm       Gizbot, Mantesh   ಡಿಜಿಟಲ್ ಟೆಕ್

ಜನಪ್ರಿಯ ಟೆಕ್ ದೈತ್ಯ ಆಪಲ್ ಕಂಪನಿಯ ತನ್ನ ಬಹುನಿರೀಕ್ಷಿತ ಐಫೋನ್ 13 ಸರಣಿಯಲ್ಲಿ ಒಟ್ಟು ನಾಲ್ಕು ಫೋನ್ ಲಾಂಚ್ ಮಾಡಿದೆ.

ಜನಪ್ರಿಯ ಟೆಕ್ ದೈತ್ಯ ಆಪಲ್ ಕಂಪನಿಯ ತನ್ನ ಬಹುನಿರೀಕ್ಷಿತ ಐಫೋನ್ 13 ಸರಣಿಯಲ್ಲಿ ಒಟ್ಟು ನಾಲ್ಕು ಫೋನ್ ಲಾಂಚ್ ಮಾಡಿದೆ. ಅವುಗಳು ಕ್ರಮವಾಗಿ ಐಫೋನ್ 13, ಐಫೋನ್ 13 ಮಿನಿ, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್‌ ಆಗಿವೆ. ಈ ಸರಣಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಐಫೋನ್‌ 12, ಐಫೋನ್‌ 12 ಮಿನಿ ಹಾಗೂ ಐಫೋನ್ 11 ಫೋನ್‌ ಮಾಡೆಲ್‌ಗಳ ಬೆಲೆಯಲ್ಲಿ ಇಳಿಕೆ ಘೋಷಿಸಿ ಗ್ರಾಹಕರಿಗೆ ಖುಷಿ ನೀಡಿದೆ. ಆದ್ರೆ ಇದೀಗ ದಿಡೀರ್‌ ಶಾಕಿಂಗ್ ಸುದ್ದಿಯನ್ನು ಹೊರಹಾಕಿದೆ.

ಹೌದು, ಆಪಲ್‌ ಸಂಸ್ಥೆಯು ಐಫೋನ್ 13 ಸರಣಿ ಲಾಂಚ್ ಬೆನ್ನಲ್ಲೇ, ಭಾರತದಲ್ಲಿ ತನ್ನ ಅತ್ಯಂತ ಜನಪ್ರಿಯ ಎರಡು ಐಫೋನ್‌ ಮಾಡೆಲ್‌ಗಳನ್ನು ನಿಲ್ಲಿಸಲಿದೆ ಎಂದು ವರದಿಯಿಂದ ತಿಳಿದು ಬಂದಿದೆ. ಆಪಲ್ ಕಂಪೆನಿಯ ಹಲವು ಮಾಡೆಲ್‌ಗಳು ಗ್ರಾಹಕರನ್ನು ಸೆಳೆದಿದ್ದು, ಆ ಪೈಕಿ ಐಫೋನ್ ಎಕ್ಸ್ ಸರಣಿಯಲ್ಲಿನ ಐಫೋನ್ ಎಕ್ಸ್‌ಆರ್ ಇದುವರೆಗೆ ದೇಶದಲ್ಲಿ ಲಭ್ಯವಿರುವ ಅತ್ಯಂತ ಜನಪ್ರಿಯ ಮಾಡೆಲ್‌ಗಳಲ್ಲಿ ಒಂದಾಗಿದೆ. ಆದ್ರೆ ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಜನಪ್ರಿಯ ಮಾಡೆಲ್‌ಗಳನ್ನು ಈಗ ಸ್ಥಗಿತ ಮಾಡಿದೆ. ಹಾಗಾದರೇ ಸ್ಥಗಿತ ಮಾಡಲಾದ ಆಪಲ್‌ನ ಆ ಐಫೋನ್‌ ಮಾಡೆಲ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಈ ಜನಪ್ರಿಯ ಮಾಡೆಲ್‌ಗಳು ಇನ್ನಿಲ್ಲ

ಆಪಲ್‌ ಕಂಪನಿಯು ಕಳೆದ ವರ್ಷ ಬಿಡುಗಡೆ ಮಾಡಿದ್ದ ಆಪಲ್‌ ಐಫೋನ್‌ 12 ಸರಣಿಯ ಜನಪ್ರಿಯ ಐಫೋನ್‌ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್‌ ಮಾಡೆಲ್‌ಗಳನ್ನು ಈಗ ನಿಲ್ಲಿಸಿದೆ. ಆದರೆ ಐಫೋನ್‌ 12 ಮತ್ತು ಐಫೋನ್‌ 12 ಮಿನಿ ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ಘೋಷಿಸಿದೆ.

ಡಿಸ್‌ಪ್ಲೇ ಮತ್ತು ಡಿಸೈನ್‌

ಐಫೋನ್ 12 ಪ್ರೊ ಫೋನ್‌ 6.1-ಇಂಚಿನ ಇಂಚಿನ ಸೂಪರ್ ರೇಟಿನಾ XDR ಮಾದರಿಯ OLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಐಫೋನ್‌ ಪ್ರೊ ಮ್ಯಾಕ್ಸ್‌ ಫೋನ್‌ 6.7-ಇಂಚಿನ ರೇಟಿನಾ XDR ಮಾದರಿಯ OLED ಡಿಸ್‌ಪ್ಲೇಯನ್ನು ಹೊಂದಿದೆ ಮತ್ತು ಬಣ್ಣ ನಿಖರತೆಗಾಗಿ ಸಿಸ್ಟಮ್‌ವೈಡ್ ಕಲರ್‌ ಮ್ಯಾನೇಜ್‌ಮೆಂಟ್‌ ಹೊಂದಿದೆ. ಇದಲ್ಲದೆ, ಈ ಎರಡೂ ಫೋನ್‌ಗಳಲ್ಲಿ ಒಎಲ್ಇಡಿ ಡಿಸ್‌ಪ್ಲೇ ಸುಮಾರು 3.5 ಮಿಲಿಯನ್ ಪಿಕ್ಸೆಲ್‌ಗಳನ್ನು ಹೊಂದಿರುತ್ತದೆ ಮತ್ತು ಗರಿಷ್ಠ ಬ್ರೈಟ್‌ನೆಶ್‌ ಮಟ್ಟ 1200 ನಿಟ್‌ಗಳವರೆಗೆ ಹೊಂದಿದೆ. ಅಲ್ಲದೆ ಎರಡೂ ಸ್ಮಾರ್ಟ್‌ಫೋನ್‌ಗಳು ಐಪಿ 68 ರೇಟಿಂಗ್ ಆಗಿದ್ದು, 6 ಮೀಟರ್‌ವರೆಗೆ 30 ನಿಮಿಷಗಳವರೆಗೆ ನೀರಿನ ಮುಳುಗುವಿಕೆಯನ್ನು ತಡೆದುಕೊಳ್ಳುತ್ತವೆ ಮತ್ತು ಕಾಫಿ ಮತ್ತು ಸೋಡಾ ಬಿದ್ದರೂ ಫೋನ್‌ಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪ್ರೊಟೆಕ್ಷನ್‌ ನೀಡಲಾಗಿದೆ.

ಪ್ರೊಸೆಸರ್‌ ಹೇಗಿದೆ

ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ ಫೋನ್‌ಗಳು ಆಪಲ್‌ನ ಎ 14 ಬಯೋನಿಕ್ ಸಿಸ್ಟಮ್-ಆನ್-ಚಿಪ್‌ಸೆಟ್‌ ಪ್ರೊಸೆಸರ್‌ ಕಾರ್ಯನಿರ್ವಹಿಸಲಿವೆ. ಪ್ರೊಸೆಸರ್‌ಗೆ ಪೂರಕವಾಗಿ iOS 14 ಬೆಂಬಲ ನೀಡಲಿದೆ. ಇನ್ನು ಎ 14 ಬಯೋನಿಕ್ ಅನ್ನು 4 ಕೆ ವಿಡಿಯೋ ಎಡಿಟಿಂಗ್ ಸೇರಿದಂತೆ ಮಾತುಕತೆಗಳನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಇದು ಈಗಾಗಲೇ ಅಸ್ತಿತ್ವದಲ್ಲಿರುವ ಎ 13 ಬಯೋನಿಕ್ ಚಿಪ್‌ಗಿಂತ ಸಿಪಿಯು ಕಾರ್ಯಕ್ಷಮತೆಯಲ್ಲಿ 40 ಪ್ರತಿಶತದಷ್ಟು ವರ್ಧನೆ ಮತ್ತು ಗ್ರಾಫಿಕ್ಸ್‌ನಲ್ಲಿ 30 ಪ್ರತಿಶತದಷ್ಟು ಸುಧಾರಣೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ, ಹೊಸ 16-ಕೋರ್ ನ್ಯೂರಾಲ್ ಎಂಜಿನ್ ಸೆಕೆಂಡಿಗೆ 11 ಟ್ರಿಲಿಯನ್ ಕಾರ್ಯಾಚರಣೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಕ್ಯಾಮೆರಾ ವಿಶೇಷತೆ

ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ ಫೋನ್‌ಗಳು ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿವೆ. ಇದರಲ್ಲಿ ಐಫೋನ್ 12 ಪ್ರೊ ಎರಡು ವೈಡ್ ಆಂಗಲ್ ಸೆನ್ಸಾರ್‌ಅನ್ನು ಹೊಂದಿದೆ ಮತ್ತು 4x ಆಪ್ಟಿಕಲ್ ಜೂಮ್‌ಗಾಗಿ 52 ಎಂಎಂ ಫೋಕಲ್ ಲೆಂಗ್ತ್ ಟೆಲಿಫೋಟೋ ಸೆನ್ಸಾರ್‌ ಅನ್ನು ಒಳಗೊಂಡಿದೆ. ಐಫೋನ್ 12 ಪ್ರೊ ಮ್ಯಾಕ್ಸ್ ಟೆಲಿಫೋಟೋ ಕ್ಯಾಮೆರಾದೊಂದಿಗೆ ಉತ್ತಮವಾದ ಕ್ಯಾಮೆರಾ ಸೆಟ್ ಹೊಂದಿದ್ದು, ಇದು 65 ಎಂಎಂ ಫೋಕಲ್ ಉದ್ದವನ್ನು ಹೊಂದಿದ್ದು ಅದು ನಿಮಗೆ 2.5x ಆಪ್ಟಿಕಲ್ ಜೂಮ್ ಮತ್ತು 5x ಜೂಮ್ ಶ್ರೇಣಿಯನ್ನು ಅನುಮತಿಸುತ್ತದೆ. ಸುಧಾರಿತ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಕೂಡ ಹೊಂದಿದೆ. ಡಾಲ್ಬಿ ಸಪೋರ್ಟ್‌ ಸಹ ಪಡೆದಿದೆ.



ಬ್ಯಾಟರಿ ಸಾಮರ್ಥ್ಯ

ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ 20 ಗಂಟೆಗಳ ವೀಡಿಯೊ ಪ್ಲೇಬ್ಯಾಕ್‌ ಅನ್ನು ಹೊಂದಿದ್ದು, "ಐಫೋನ್‌ನಲ್ಲಿ ಅತಿ ಉದ್ದದ ಬ್ಯಾಟರಿ ಅವಧಿಯನ್ನು" ಹೊಂದಿವೆ. ಇನ್ನು ಈ ಐಫೋನ್‌ಗಳ ಬ್ಯಾಟರಿ 15W ವರೆಗೆ ಮ್ಯಾಗ್‌ಸೇಫ್ ವೈರ್‌ಲೆಸ್ ಚಾರ್ಜಿಂಗ್ ಮತ್ತು 7.5W ವರೆಗೆ Qi ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಆಪಲ್ ಐಫೋನ್ 12 ಸರಣಿಯಲ್ಲಿ ನವೀಕರಿಸಿದ ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಸಹ ನೀಡಿದೆ, ಇದು ಮ್ಯಾಗ್‌ಸೇಫ್ ಬ್ರ್ಯಾಂಡಿಂಗ್ ಅನ್ನು ಹೊತ್ತ ಮ್ಯಾಗ್ನೆಟಿಕ್ ಚಾರ್ಜರ್‌ಗಳನ್ನು ಬೆಂಬಲಿಸುತ್ತದೆ.