ವಾಟ್ಸಾಪ್‌ಗೆ ಸೆಡ್ಡು ಹೊಡೆಯಲು ಹೊಸ ಅಪ್ಡೇಟ್‌ ಪರಿಚಯಿಸಿದ ಟೆಲಿಗ್ರಾಮ್‌!

21-09-21 11:51 am       Gizbot, Mutthuraju H M   ಡಿಜಿಟಲ್ ಟೆಕ್

ಹಲವು ಆಕರ್ಷಕ ಫೀಚರ್ಸ್‌ ಪರಿಚಯಿಸಿರುವ ಟೆಲಿಗ್ರಾಮ್‌ ಇದೀಗ ಹೊಸ ಅಪ್ಡೇಟ್‌ ಅನ್ನು ಲಾಂಚ್‌ ಮಾಡಲು ಸಿದ್ಧತೆ ನಡೆಸಿದೆ.

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಟೆಲಿಗ್ರಾಮ್‌ ಕೂಡ ಒಂದಾಗಿದೆ. ವಾಟ್ಸಾಪ್‌ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಹಲವು ಮಾದರಿಯ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇತ್ತೀಚಿಗೆ ಹಲವು ಆಕರ್ಷಕ ಫೀಚರ್ಸ್‌ ಪರಿಚಯಿಸಿರುವ ಟೆಲಿಗ್ರಾಮ್‌ ಇದೀಗ ಹೊಸ ಅಪ್ಡೇಟ್‌ ಅನ್ನು ಲಾಂಚ್‌ ಮಾಡಲು ಸಿದ್ಧತೆ ನಡೆಸಿದೆ. ಈ ಹೊಸ ಫೀಚರ್ಸ್‌ ಆಪ್ಲಿಕೇಶನ್‌ನಲ್ಲಿಯೇ ಲೈವ್ ಸ್ಟ್ರೀಮ್ ಮತ್ತು ವಿಡಿಯೋ ಚಾಟ್ ಗಳನ್ನು ರೆಕಾರ್ಡ್ ಮಾಡಲು ಬಳಕೆದಾರರಿಗೆ ಅವಕಾಶ ನೀಡಲಿದೆ.

ಹೌದು, ಟೆಲಿಗ್ರಾಮ್‌ ಲೈವ್‌ ಸ್ಟ್ರೀಮ್‌ ಮತ್ತು ವಿಡಿಯೋ ಚಾಟ್‌ ರೆಕಾರ್ಡ್‌ ಮಾಡುವ ಹೊಸ ಅಪ್ಡೇಟ್‌ ಮಾಡಿದೆ. ಜೊತೆಗೆ ಎಂಟು ಹೊಸ ಚಾಟ್ ಥೀಮ್‌ಗಳನ್ನು ಸಹ ಸೇರಿಸಿದೆ. ಇದರಲ್ಲಿ ಪ್ರತಿಯೊಂದು ಥೀಮ್ ಅನ್ನು ಹಗಲು ಮತ್ತು ರಾತ್ರಿ ಆವೃತ್ತಿಯಲ್ಲಿ ನೀಡಲಾಗುವುದು ಎಂದು ಹೇಳಿದೆ. ಇದರೊಂದಿಗೆ ಗ್ರೂಪ್‌ಗಳಲ್ಲಿ ಡಿಟೈಲ್ಡ್‌ ರೀಡಿಂಗ್‌ ರೆಸಿಪ್ಟ್‌ಗಳನ್ನು ಪರಿಚಯಿಸುತ್ತಿದೆ. ಈ ಹೊಸ ಅಪ್‌ಡೇಟ್‌ನ ಭಾಗವಾಗಿ ಬಳಕೆದಾರರು ಫುಲ್‌ ಸ್ಕ್ರೀನ್‌ ಎಫೆಕ್ಟ್‌ ನೀಡುವ ಹೊಸ ಸಂವಾದಾತ್ಮಕ ಎಮೋಜಿಗಳನ್ನು ಸಹ ಪಡೆಯಲಿದ್ದಾರೆ. ಹಾಗಾದ್ರೆ ಟೆಲಿಗ್ರಾಮ್‌ನ ಹೊಸ ಅಪ್ಡೇಟ್‌ನಲ್ಲಿ ಹೊಸದಾಗಿ ಸೇರಿರುವ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.



ಟೆಲಿಗ್ರಾಮ್‌ ತನ್ನ ಹೊಸ ಅಪ್ಡೇಟ್‌ನಲ್ಲಿ ಹಲವಾರು ಫೀಚರ್ಸ್‌ಗಳನ್ನು ಸೇರಿಸಿದೆ. ಇದರಲ್ಲಿ ಲೈವ್‌ ಸ್ಟ್ರೀಮ್‌ ಮತ್ತು ವಿಡಿಯೋ ಚಾಟ್‌ ರೇಕಾರ್ಡ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಇದರಿಂದಾಗಿ ಇನ್ಮುಂದೆ ಟೆಲಿಗ್ರಾಮ್‌ ಅಪ್ಲಿಕೇಶನ್‌ನಲ್ಲಿ ಲೈವ್‌ಸ್ಟ್ರೀಮ್‌ನಲ್ಲಿರುವಾಗ ವೀಡಿಯೊ ಚಾಟ್‌ ರೇಕಾರ್ಡ್‌ ಮಾಡಬಹುದು. ಇದಲ್ಲದೆ ಬಳಕೆದಾರರು ನಿರ್ದಿಷ್ಟ ಖಾಸಗಿ ಚಾಟ್‌ಗಳಿಗೆ ಕಸ್ಟಮೈಸ್ ಮಾಡಲು ಟೆಲಿಗ್ರಾಂನ ಹೊಸ ಚಾಟ್ ಥೀಮ್‌ಗಳನ್ನು ಅನ್ವಯಿಸಲು ಸಾಧ್ಯವಾಗಲಿದೆ. ಪ್ರತಿಯೊಂದು ಹೊಸ ಥೀಮ್‌ಗಳು ಗ್ರೇಡಿಯಂಟ್ ಮೆಸೇಜ್‌ ಬಬಲ್ಸ್‌, ಅನಿಮೇಟೆಡ್ ಬ್ಯಾಕ್‌ಗ್ರೌಂಡ್ಸ್‌ ಮತ್ತು ಯೂನಿಕ್‌ ಬ್ಯಾಕ್‌ಗ್ರೌಂಡ್‌ ಪ್ಯಾಟನರ್ಸ್‌ ಅನ್ನು ಒಳಗೊಂಡಿರುತ್ತವೆ. ಇದು ಬಳಕೆದಾರರಿಗೆ ತಮ್ಮ ಚಾಟ್‌ಗಳನ್ನು ಆಯೋಜಿಸಲು ಅನುವು ಮಾಡಿಕೊಡುತ್ತದೆ.



ಇನ್ನು ನೀವು ನಿಮ್ಮ ಡಿವೈಸ್‌ನಲ್ಲಿ ಥೀಮ್‌ಗಳನ್ನು ಸಕ್ರಿಯಗೊಳಿಸಲು ಬಯಸಿದರೆ, ಟೆಲಿಗ್ರಾಮ್‌ ಅನ್ನು ಅಪ್ಡೇಟ್‌ ಮಾಡಬೇಕಾಗಿದೆ. ಇದಾದ ನಂತರ ನೀವು ಚಾಟ್ ವಿಂಡೋದಲ್ಲಿ ಚಾಟ್ ಹೆಡರ್ ಬಾಕ್ಸ್ ಮೇಲೆ ಟ್ಯಾಪ್ ಮಾಡಬಹುದು. ಆದಾದ ಮೇಲೆ ಮೂರು-ಡಾಟ್ ಐಕಾನ್ ಮೇಲೆ ಕ್ಲಿಕ್ ಮಾಡಿ. ನಂತರ ಥೀಮ್ ಗಳನ್ನು ಎನೇಬಲ್ ಮಾಡಲು ಬಣ್ಣಗಳನ್ನು ಬದಲಾಯಿಸಿ ಆಯ್ಕೆ ಮಾಡಿ. ಹೀಗೆ ಮಾಡುವುದ ಮೂಲಕ ಹೊಸ ಚಾಟ್‌ ಥೀಮ್‌ಗಳನ್ನು ಬದಲಾಯಿಸಬಹುದಾಗಿದೆ.



ಇದಲ್ಲದೆ ಟೆಲಿಗ್ರಾಮ್‌ ಅಪ್ಲಿಕೇಶನ್ ಫುಲ್‌ ಸ್ಕ್ರೀನ್ ಎಫೆಕ್ಟ್‌ ನೀಡುವ ಹೊಸ ಅನಿಮೇಟೆಡ್ ಎಮೋಜಿಗಳನ್ನು ಸಹ ಸೇರಿಸಿದೆ. ಬಳಕೆದಾರರು ಚಾಟ್ ವಿಂಡೋ ತೆರೆದಿದ್ದರೆ ಅನಿಮೇಷನ್‌ಗಳು ಸ್ಮಾರ್ಟ್‌ಫೋನ್‌ಗಳಲ್ಲಿ ಪ್ಲೇ ಆಗುತ್ತವೆ. ಇನ್ನು ಇದರೊಂದಿಗೆ ಟೆಲಿಗ್ರಾಮ್‌ ಗ್ರೂಪ್‌ನ ಸದಸ್ಯರು ಕಳುಹಿಸಿರುವ ಸಂದೇಶವನ್ನು ಓದಿದ್ದಾರೆಯೇ ಎಂದು ಬಳಕೆದಾರರು ಈಗ ಪರಿಶೀಲಿಸಬಹುದು. ಇದಕ್ಕಾಗಿ ರೀಡಿಂಗ್‌ ರೆಸಿಪ್ಟ್‌ ಸ್ಟೇಟಸ್‌ ಅನ್ನು ಸೂಚಿಸಲು ಗುಂಪು ಸಂದೇಶಗಳನ್ನು ಎರಡು-ಚೆಕ್ ಐಕಾನ್ ನಿಂದ ಗುರುತಿಸಲಾಗುತ್ತದೆ.