ಪರಿಷತ್ ಸ್ಥಾನ ಸಿಗದ ಬೇಸರ ; ಕಡೆಗೂ ಕಾಂಗ್ರೆಸ್ ತ್ಯಜಿಸಿದ ಮುಖ್ಯಮಂತ್ರಿ ಚಂದ್ರು, ಮುಂದಿನ ನಿಲ್ದಾಣ ಎಲ್ಲಿ ? 

30-05-22 10:23 am       Bengalore Correspondent   ಕರ್ನಾಟಕ

ಹಿರಿಯ ನಟ, ಮುಖ್ಯಮಂತ್ರಿ ಚಂದ್ರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. 

ಬೆಂಗಳೂರು, ಮೇ 30 : ಹಿರಿಯ ನಟ, ಮುಖ್ಯಮಂತ್ರಿ ಚಂದ್ರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ರಾಜಿನಾಮೆ ನೀಡಿರುವ ಮುಖ್ಯಮಂತ್ರಿ ಚಂದ್ರು, ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್​ ಪಕ್ಷಕ್ಕೆ ಜನಸೇವೆ ಮಾಡುವ ಆಶಯದಿಂದ ಸೇರ್ಪಡೆಯಾಗಿದ್ದೆ. ಅಂದಿನಿಂದಲೂ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿಯಿದೆ. ಸದ್ಯ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ಪಕ್ಷದ ಸಾಂಸ್ಕೃತಿಕ ಘಟಕದ ಅಧ್ಯಕ್ಷರನ್ನಾಗಿ ಪ್ರಕಟಿಸಿರುವ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಪ್ರಮೇಯವೇ ಉದ್ಭವಿಸುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಸಂದರ್ಭದಲ್ಲಿ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. 2018 ರಲ್ಲಿ ವಿಧಾನ ಪರಿಷತ್ತಿಗೆ ನಾಮಕರಣ ಮಾಡಲು ಹೆಸರನ್ನು ಅಂತಿಮಗೊಳಿಸಲಾಗಿತ್ತು. ಕೊನೆಗೆ ಪ್ರಭಾವಿ ನಾಯಕರೊಬ್ಬರ ಹಸ್ತಕ್ಷೇಪದಿಂದ ಬದಲಾವಣೆ ಮಾಡಲಾಗಿತ್ತು. ಇದು ನನಗೆ ನೋವುಂಟು ಮಾಡಿತ್ತು. 

ಅತಿ ಹಿಂದುಳಿದ ಸಮುದಾಯಗಳ ಪರವಾಗಿ ನನ್ನ ಹೋರಾಟ ಮುಂದುವರಿಯುತ್ತದೆ. ಯಾವ ಪಕ್ಷ ಸೇರಬೇಕು ಎಂಬ ಬಗ್ಗೆ ನಿರ್ಧರಿಸಿಲ್ಲ. ರಾಜ್ಯಸಭೆ ಸ್ಥಾನದ ಬೇಡಿಕೆ ಮುಂದಿಟ್ಟು ರಾಜಿನಾಮೆ ನೀಡಿದ್ದೇನೆ ಎನ್ನುವುದು ಸುಳ್ಳು. ಅಂತಹ ಯಾವುದೇ ಬೇಡಿಕೆಯನ್ನು ಇಟ್ಟಿಲ್ಲ ಎಂದರು. ಆಮ್ ಆದ್ಮಿ ಪಕ್ಷ ಸೇರುತ್ತಾರೋ, ಬಿಜೆಪಿ ಸೇರುತ್ತಾರೋ ಎನ್ನುವ ಕುತೂಹಲ ಉಂಟಾಗಿದೆ.

Disappointed over being denied the party’s nomination for the Legislative Council, popular Kannada actor and former MLC Mukhyamantri Chandru on Sunday resigned from the primary membership of the Congress.