ರಾಜ್ಯಸಭೆ ನಾಲ್ಕನೇ ಸ್ಥಾನಕ್ಕೆ ಹಣಾಹಣಿ ; ಒಂದು ಸ್ಥಾನಕ್ಕಾಗಿ ಮೂರೂ ಪಕ್ಷಗಳ ಕದನ ಕಾಂಚಾಣ ! ಕುಪೇಂದ್ರ ರೆಡ್ಡಿಯೋ, ಲೆಹರ್ ಸಿಂಗೋ ? ಯಾರಿಗೆ ಜಯದ ಕಣ ?

31-05-22 03:27 pm       Bengalore Correspondent   ಕರ್ನಾಟಕ

ರಾಜ್ಯಸಭೆ ಚುನಾವಣೆ ಈ ಬಾರಿ ಮತ್ತಷ್ಟು ರಂಗೇರುವ ಲಕ್ಷಣ ಕಂಡುಬಂದಿದ್ದು, ಒಂದು ಸ್ಥಾನದ ಗೆಲುವಿಗಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ತೀವ್ರ ಹಣಾಹಣಿಗೆ ಮುಂದಾಗಿದೆ.

ಬೆಂಗಳೂರು, ಮೇ 31: ರಾಜ್ಯಸಭೆ ಚುನಾವಣೆ ಈ ಬಾರಿ ಮತ್ತಷ್ಟು ರಂಗೇರುವ ಲಕ್ಷಣ ಕಂಡುಬಂದಿದ್ದು, ಒಂದು ಸ್ಥಾನದ ಗೆಲುವಿಗಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ತೀವ್ರ ಹಣಾಹಣಿಗೆ ಮುಂದಾಗಿದೆ. ರಾಜ್ಯದಿಂದ ಆಯ್ಕೆಗೊಳ್ಳುವ ನಾಲ್ಕು ರಾಜ್ಯಸಭೆ ಸ್ಥಾನಗಳ ಪೈಕಿ ವಿಧಾನಸಭೆ ಸ್ಥಾನಗಳ ಬಲಾಬಲದಲ್ಲಿ ಎರಡು ಬಿಜೆಪಿ, ಕಾಂಗ್ರೆಸ್ ಒಂದು ಸ್ಥಾನವನ್ನು ಗೆಲ್ಲಲಿದೆ. ನಾಲ್ಕನೇ ಸ್ಥಾನ ಯಾರಿಗೆ ಅನ್ನುವುದು ಕುತೂಹಲಕ್ಕೀಡು ಮಾಡಿದೆ.

ಈ ನಡುವೆ, ಕಾಂಗ್ರೆಸ್ ತನ್ನಲ್ಲಿ ಅಗತ್ಯ ಸ್ಥಾನಗಳ ಬಲಾಬಲ ಇಲ್ಲದಿದ್ದರೂ ಮನ್ಸೂರ್ ಖಾನ್ ಅವರನ್ನು ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಅಧಿಕೃತ ಅಭ್ಯರ್ಥಿಯಾಗಿ ಜೈರಾಮ್ ರಮೇಶ್ ಅವರನ್ನು ಕಣಕ್ಕಿಳಿಸಿದ್ದರೂ, ಜೆಡಿಎಸ್ ಅನ್ನು ಕಟ್ಟಿಹಾಕುವ ಸಲುವಾಗಿ ಎರಡನೇ ಅಭ್ಯರ್ಥಿಯನ್ನು ಹಾಕಿತ್ತು ಎನ್ನಲಾಗಿದೆ. ಆಮೂಲಕ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣದಲ್ಲಿರಿಸಿ, ಜಾತ್ಯತೀತ ತತ್ವದಡಿ ಜೆಡಿಎಸ್ ಯಾರನ್ನು ಬೆಂಬಲಿಸುತ್ತದೆ ಅನ್ನುವುದನ್ನು ಕಾದು ನೋಡಲು ತಂತ್ರ ಹೆಣೆದಿತ್ತು.

RS polls: BJP announces third ticket from Karnataka to Lehar Singh |  udayavani

32 ಸ್ಥಾನಗಳನ್ನು ಹೊಂದಿರುವ ಜೆಡಿಎಸ್ ರಾಜ್ಯಸಭೆ ಸ್ಥಾನ ಗೆಲ್ಲಲು ಬೇಕಾದಷ್ಟು ಸ್ಥಾನಗಳನ್ನು ಹೊಂದಿಲ್ಲ. ಒಂದು ಸ್ಥಾನ ಗೆಲ್ಲಲು 45 ಸದಸ್ಯ ಸ್ಥಾನ ಇರಲೇಬೇಕು. 121 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ಎರಡು ಸ್ಥಾನ ಗೆಲ್ಲಲು 90 ಮತಗಳು ಸಾಕು. ಕಾಂಗ್ರೆಸ್ 2ನೇ ಅಭ್ಯರ್ಥಿ ಹಾಕಿದ ಬೆನ್ನಲ್ಲೇ, ಸೆಟೆದು ನಿಂತ ಬಿಜೆಪಿ ನಾಯಕರು ತಮ್ಮಲ್ಲಿ ಉಳಿಯುವ ಮತಗಳ ಜೊತೆಗೆ ಇತರೇ ಮತಗಳನ್ನು ಸೆಳೆಯುವ ತಂತ್ರಗಾರಿಕೆಯಿಂದ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಎಂದೇ ಗುರುತಿಸಲ್ಪಟ್ಟಿದ್ದ ಎರಡು ಅವಧಿಗೆ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಉದ್ಯಮಿ ಲೆಹರ್ ಸಿಂಗ್ ಅವರನ್ನು ಮೂರನೇ ಅಭ್ಯರ್ಥಿಯಾಗಿ ಕಣಕ್ಕೆ ದೂಡಿದ್ದು ಅದೃಷ್ಟದ ಪರೀಕ್ಷೆಗೆ ಇಳಿಸಿದೆ. ಬಿಜೆಪಿ ತನ್ನಲ್ಲಿ ಉಳಿಕೆಯಾಗುವ 31 ಸ್ಥಾನಗಳ ಜೊತೆಗೆ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ನೆಚ್ಚಿಕೊಂಡಿದೆ.

ಇದೇ ವೇಳೆ, ಜೆಡಿಎಸ್ ತನ್ನ ಅಭ್ಯರ್ಥಿಯಾಗಿ ಮಾಜಿ ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ಹೀಗಾಗಿ ನಾಲ್ಕನೇ ಸ್ಥಾನದ ಗೆಲುವಿಗಾಗಿ ಈ ಬಾರಿ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ಆಡಳಿತಾರೂಢ ಬಿಜೆಪಿ ಒಂದಷ್ಟು ಜೆಡಿಎಸ್ ಮತ್ತು ಕಾಂಗ್ರೆಸಿನ ಮತಗಳನ್ನು ಸೆಳೆಯಲು ಕಸರತ್ತು ನಡೆಸಲಿದೆ. 78 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್, ಎರಡನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳುವುದು ಕಷ್ಟದ ಮಾತು. ಆದರೂ, ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಕೊಂಡು ತನ್ನ ಮತಗಳನ್ನು ಬೇರೆಯವರಿಗೆ ಬಿಟ್ಟು ಕೊಡಲ್ಲ ಅನ್ನುವ ಸಂದೇಶ ರವಾನಿಸಿದೆ. ಜೊತೆಗೆ, ಜೆಡಿಎಸ್ ಅಭ್ಯರ್ಥಿ ಗೆಲ್ಲಬಾರದು ಅನ್ನುವ ತಂತ್ರಕ್ಕಿಳಿದಿದೆ. ಕಾಂಗ್ರೆಸ್ ತಂತ್ರಗಾರಿಕೆ ಹಿಂದೆ ಸಿದ್ದರಾಮಯ್ಯ ತಲೆ ಕೆಲಸ ಮಾಡಿದೆ ಎನ್ನಲಾಗುತ್ತಿದೆ.

Karnataka Rajya Sabha polls: Congress fields second candidate, JD(S)-BJP in  talks over fourth seat

ಕಾಂಗ್ರೆಸಿನ ಈ ತಂತ್ರಗಾರಿಕೆ ಅರಿತ ಬಿಜೆಪಿ ಕೊನೆಕ್ಷಣದಲ್ಲಿ ಅಭ್ಯರ್ಥಿಯನ್ನು ಹಾಕಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್- ಜೆಡಿಎಸ್ ಜಗಳದಲ್ಲಿ ದ್ವಿತೀಯ ಪ್ರಾಶಸ್ತ್ಯದ ಮತಗಳ ಆಧಾರದಲ್ಲಿ ಬಿಜೆಪಿಗೆ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಹಾಕಿದ್ದಕ್ಕೆ ಜೆಡಿಎಸ್ ನಾಯಕರು ಕಿಡಿಕಾರುತ್ತಿದ್ದಾರೆ. ಜೂನ್ 10ರಂದು ಚುನಾವಣೆ ನಡೆಯಲಿದ್ದು, ಮೇ 31 ನಾಮಪತ್ರ ಸಲ್ಲಿಕೆಗೆ ಕೊನೆ ದಿನ.

Rajya Sabha Elections: Nirmala Sitharaman from BJP, Kupendra Reddy from JDS  file nomination

ಬಿಜೆಪಿಯಿಂದ ಈಗಾಗಲೇ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಲಾಗಿತ್ತು. ಅದರ ಜೊತೆಗೆ, ಲೆಹರ್ ಸಿಂಗ್ ಅವರನ್ನು ಮೂರನೇ ಅಭ್ಯರ್ಥಿಯಾಗಿ ಸೋಮವಾರ ರಾತ್ರಿ ಘೋಷಣೆ ಮಾಡಲಾಗಿದೆ. ಬಿಜೆಪಿಯ ಈ ನಡೆಯಿಂದಾಗಿ ಜೆಡಿಎಸ್ ತೀವ್ರ ಇಕ್ಕಟ್ಟಿಗೆ ಸಿಲುಕಿದ್ದು, ಕುದುರೆ ವ್ಯಾಪಾರಕ್ಕೂ ಅವಕಾಶ ಕೊಟ್ಟಂತಾಗಿದೆ. ಬಿಜೆಪಿಯಿಂದ ಮೂರನೇ ಅಭ್ಯರ್ಥಿಯಾಗಿ ಕರಾವಳಿ ಮೂಲದ ಉದ್ಯಮಿ ಪ್ರಕಾಶ್ ಶೆಟ್ಟಿಯನ್ನು ಇಳಿಸಲಾಗುತ್ತೆ ಅನ್ನುವ ವದಂತಿಗಳಿದ್ದವು. ಆದರೆ, ಕೇಂದ್ರ ವರಿಷ್ಠರು ಪ್ರಕಾಶ್ ಶೆಟ್ಟಿ ಹೆಸರಿಗೆ ಮಣೆ ಹಾಕಿಲ್ಲ.

Bengaluru Jds Kupendra Reddy and Lehar Singh Siroya files nomination.