ಪರಿಷತ್ ಶಾಕ್ - ಬಿಜೆಪಿ ಸ್ವಾರ್ಥ ರಾಜಕಾರಣಕ್ಕೆ ಮತ್ತೆ ಕೈಕೊಟ್ಟ ಬೆಳಗಾವಿ ; ಒಳಸುಳಿ ಅರಿಯದೆ ಕೈಸುಟ್ಟುಕೊಂಡ ಕೇಸರಿ ನಾಯಕರು! ಮತ್ತೊಬ್ಬ ಯುವ ನಾಯಕನ ಬಲಿಕೊಟ್ಟ ದಂಗಲ್ ರಾಜಕೀಯ !

16-06-22 10:49 pm       Bengalore Correspondent   ಕರ್ನಾಟಕ

ಬೆಳಗಾವಿ ನಾಯಕರು ಮನಸ್ಸು ಮಾಡಿದರೆ, ಸರಕಾರವನ್ನು ಕೆಡವಬಲ್ಲರು. ಮತ್ತೊಂದು ಸರಕಾರವನ್ನು ಎತ್ತಿ ಕಟ್ಟಬಲ್ಲರು ಎನ್ನುವುದನ್ನು ಮತ್ತೆ ತೋರಿಸಿಕೊಟ್ಟಿದ್ದಾರೆ.

ಬೆಂಗಳೂರು, ಜೂನ್ 16: ಬೆಳಗಾವಿ ನಾಯಕರು ಮನಸ್ಸು ಮಾಡಿದರೆ, ಸರಕಾರವನ್ನು ಕೆಡವಬಲ್ಲರು. ಮತ್ತೊಂದು ಸರಕಾರವನ್ನು ಎತ್ತಿ ಕಟ್ಟಬಲ್ಲರು ಎನ್ನುವುದನ್ನು ಮತ್ತೆ ತೋರಿಸಿಕೊಟ್ಟಿದ್ದಾರೆ. ಬಿಜೆಪಿ ನಾಯಕರ ನಿರ್ಲಕ್ಷ್ಯ, ಹೇಗೂ ನಡೆಯುತ್ತೆ ಅನ್ನುವ ಅಹಂಕಾರಕ್ಕೆ ಬೆಳಗಾವಿಯಲ್ಲಿ ಮತ್ತೊಬ್ಬ ಯುವ ನಾಯಕನನ್ನು ಬಲಿ ಕೊಟ್ಟಿದ್ದಾರೆ. ಮುದಿ ಎತ್ತು ಎಂದೇ ಗೇಲಿಗೆ ಒಳಗಾದ ಕಾಂಗ್ರೆಸಿನ ಮೀಸೆ ಮಾವ ಪ್ರಕಾಶ್ ಹುಕ್ಕೇರಿ ಮುಂದೆ ಯುವ ನಾಯಕ, ಹಾಲಿ ಎಂಎಲ್ಸಿಯಾಗಿದ್ದ ಅರುಣ ಶಹಾಪುರ ಹೀನಾಯ ಸೋಲು ಕಂಡಿದ್ದು ಬಿಜೆಪಿಯಂಥ ಬಿಜೆಪಿ ಪಾಲಿಗೆ ದೊಡ್ಡ ಶಾಕ್ ನೀಡಿದೆ.

ಹಾಗೆ ನೋಡಿದರೆ, ಬೆಳಗಾವಿಯಲ್ಲಿ ಸೋಲಿನ ಏಟು ಸಿಕ್ಕಿದ್ದು ಬೆನ್ನು ಬೆನ್ನಿಗೆ ಇದು ಎರಡನೇ ಬಾರಿ. ಬೆಳಗಾವಿ ಅಂದರೆ ಮೇಲ್ನೋಟಕ್ಕೆ ಬಿಜೆಪಿ ಪಾಲಿನ ಪ್ರಬಲ ಕೋಟೆ. ಮೂರು ಜಿಲ್ಲೆಗಳ 33 ವಿಧಾನಸಭೆ ಕ್ಷೇತ್ರಗಳಲ್ಲಿ 22 ಸದಸ್ಯರು ಬಿಜೆಪಿ ಮಂದಿ ಇದ್ದಾರೆ. ಆರು ಮಂದಿ ಸಂಸದರಿದ್ದಾರೆ. ನಾಲ್ವರು ಬಲಾಢ್ಯ ಎನ್ನುವ ರಾಜ್ಯದ ಸಚಿವರಿದ್ದಾರೆ. ಮೇಲಾಗಿ ಲಿಂಗಾಯತ, ಪಂಚಮಸಾಲಿ ಎನ್ನುವ ಮುಂಚೂಣಿ ವರ್ಗದ, ಹಿಂದಿನಿಂದಲೂ ಬಿಜೆಪಿ ಕೈ ಹಿಡ್ಕೊಂಡು ಬಂದಿದ್ದ ಸಮುದಾಯದ ಜನರೇ ಹೆಚ್ಚಿರುವ ಜಿಲ್ಲೆಗಳು. ಮಾಜಿ ಸಿಎಂ ಯಡಿಯೂರಪ್ಪ, ಹಾಲಿ ಸಿಎಂ ಬೊಮ್ಮಾಯಿ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡಿದ್ರೂ ಬಿಜೆಪಿ ಗೆಲುವನ್ನು ದಕ್ಕಿಸಿಕೊಳ್ಳದೇ ಇರುವುದು ಹಿನ್ನಡೆಯೇ ಸರಿ.

Will Continue To Work As Chief Minister For Next 2 Years: BS Yediyurappa

Karnataka on high alert, says CM Bommai | Cities News,The Indian Express

ಬೆಳಗಾವಿ ರಾಜಕಾರಣದ ಒಳಸುಳಿಗೆ ಸಿಕ್ಕ ಬಿಜೆಪಿ ಮತ್ತೊಮ್ಮೆ ಪರಿಷತ್ತಿನಲ್ಲಿ ಸೋಲು ಕಂಡಿರುವುದು ನಾಯಕರ ಪಾಲಿಗೆ ನುಂಗಲಾರದ ತುತ್ತು. ಯಾಕಂದ್ರೆ, ಕಳೆಡ ಡಿಸೆಂಬರ್ ನಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ಶಾಕ್ ಟ್ರೀಟ್ಮೆಂಟ್ ಸಿಕ್ಕಿತ್ತು. ಬಿಜೆಪಿ ಅಧಿಕೃತ ಅಭ್ಯರ್ಥಿ ಇದ್ದರೂ, ರೆಬಲ್ ಸ್ಟಾರ್ ರಮೇಶ್ ಜಾರಕಿಹೊಳಿ ಸೋದರ ಲಖನ್ ಜಾರಕಿಹೊಳಿ ಪಕ್ಷೇತರನಾಗಿ ನಿಂತು ಗೆದ್ದು ಬೀಗಿದ್ದು ಬಿಜೆಪಿ ಪಾಳಯಕ್ಕೇ ಶಾಕ್ ನೀಡಿತ್ತು. ಮಹಾಂತೇಶ ಕವಟಗಿಮಠ ಹೀನಾಯ ಸೋಲು ಕಂಡಿದ್ದಕ್ಕೆ ಉತ್ತರವಾಗಿ, ಸೋಲಿಗೆ ಕಾರಣವಾದ ನಾಯಕರ ವಿರುದ್ಧ ಕ್ರಮ ಜರುಗಿಸಬೇಕಾಗಿತ್ತು. ಆದರೆ ರಾಜ್ಯ ನಾಯಕರು ತಮ್ಮ ಒಳಗಿನ ನೋವಿಗೆ ಮೇಲಿನಿಂದ ಮುಲಾಮು ಹಚ್ಚಿದರೆ ವಿನಾ, ಒಳಗಿನ ಬೇಗುದಿಯನ್ನು ನಿವಾರಿಸಲು ಹೋಗಿರಲಿಲ್ಲ.

council member lakhan jarkiholi statement in athani | ರಮೇಶ್ ಜಾರಕಿಹೊಳಿ  ಆದಷ್ಟು ಬೇಗನೆ ಮಂತ್ರಿ ಆಗುತ್ತಾರೆ : ಲಖನ್ ಜಾರಕಿಹೊಳಿ Karnataka News in Kannada

MLC Mahantesh Kavatagimath appears as BJP favourite for Lok Sabha ticket-  The New Indian Express

ಒಂದು ಕಡೆ ರಾಜ್ಯ ನಾಯಕರ ಈ ರೀತಿಯ ವರ್ತನೆಯಿಂದಾಗಿ ತೀವ್ರ ನಿರಾಸೆ ಅನುಭವಿಸಿದ್ದು ಮಹಾಂತೇಶ ಕವಟಗಿಮಠ.  ರಮೇಶ್ ಜಾರಕಿಹೊಳಿ ಮತ್ತು ಸೋದರರು ಲಂಗು ಲಗಾಮಿಲ್ಲದ ರೀತಿ ವರ್ತಿಸುತ್ತಿದ್ದರೆ, ಬಿಜೆಪಿ ನಾಯಕರು ಅತ್ತ ನುಂಗಲೂ ಆಗದೆ, ಉಗಿಯಲೂ ಆಗದೆ ಬೇಸತ್ತಿದ್ದಾರೆ. ಇನ್ನೊಂದು ಕಡೆ ಲಿಂಗಾಯತರಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರಬಲರಾಗಿರುವ ಪಂಚಮಸಾಲಿಗಳ ಆಕ್ರೋಶ ಈ ಬಾರಿಯ ಚುನಾವಣೆಯಲ್ಲಿ ಪ್ರತಿಧ್ವನಿಸಿದೆ ಎನ್ನಲಾಗುತ್ತಿದೆ. ಲಿಂಗಾಯತ ಪ್ರಕಾಶ್ ಹುಕ್ಕೇರಿಯನ್ನು ದಲಿತ ವರ್ಗದ ಗೋವಿಂದ ಕಾರಜೋಳ ಮುದಿ ಎತ್ತು ಎಂದು ಮೂದಲಿಸಿದ್ದೂ ಮುಳುವಾಗಿ ಪರಿಣಮಿಸಿತ್ತು. ಎದುರಾಳಿ ಅರುಣ ಶಹಾಪುರ ಯುವಕನಾಗಿದ್ದರೂ ಮೂರು ಜಿಲ್ಲೆಗಳನ್ನು ಒಳಗೊಂಡ ಬೃಹತ್ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯನ್ನು ಸುತ್ತಲಾಗದೇ ಇದ್ದುದು, ಬಿಜೆಪಿ ಶಾಸಕರಿದ್ದಾರೆ ಎಂಬ ಹುಂಬತನ ತೋರಿದ್ದು, ಜಿಲ್ಲೆಯ ಕೆಲವು ರಾಜಕಾರಣಿಗಳ ಸ್ವಾರ್ಥ, ದ್ವೇಷ, ಸ್ವಯಂಕೃತ ಅಪರಾಧಗಳ ಕಾರಣಕ್ಕೆ ಬಿಜೆಪಿ ಬೆಲೆ ತೆತ್ತಿದೆ. ಇತ್ತ ಲಿಂಗಾಯತನೇ ಆಗಿದ್ದರೂ, ಸ್ವಂತ ವರ್ಚಸ್ಸೇ ಇಲ್ಲದ ವ್ಯಕ್ತಿಯನ್ನು ಎರಡನೇ ಬಾರಿಗೆ ಪರಿಷತ್ತಿಗೆ ನೇಮಕ ಮಾಡಿದ್ದು ಬೆಳಗಾವಿಯ ದೊಡ್ಡ ನಾಯಕರನ್ನು ಸಿಟ್ಟಾಗಿಸಿತ್ತು. ಪ್ರಭಾಕರ ಕೋರೆ ತಮ್ಮನ್ನು ಬಿಜೆಪಿ ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಸಿಟ್ಟಲ್ಲಿದ್ದರೆ, ಅದೇ ಸಂದರ್ಭದಲ್ಲಿ ಅಥಣಿಯಲ್ಲಿ ಸೋಲುಂಡಿದ್ದ ಸವದಿಯನ್ನು ಮತ್ತೊಮ್ಮೆ ಪರಿಷತ್ತಿಗೆ ಆಯ್ಕೆ ಮಾಡಿದ್ದು ಸಿಟ್ಟು ತರಿಸಿತ್ತು. ಇವೆಲ್ಲ ಅಸಮಾಧಾನ, ಬೇಗುದಿಗಳು ಪಕ್ಷದ ಪಾಲಿಗೆ ಗೆಲುವನ್ನು ದೂರಕ್ಕೆ ತಳ್ಳಿಬಿಟ್ಟಿದೆ.

Planning to abolish taluk panchayats says Govind Karjol | udayavani

Tipu cannot be erased from textbooks: BJP MLC - The Hindu

ಮತ್ತೊಂದು ಕಡೆ ದಕ್ಷಿಣ ಪದವೀಧರ ಕ್ಷೇತ್ರದಲ್ಲೂ ಜೆಡಿಎಸ್ ಕೋಟೆಯನ್ನು ಕಾಂಗ್ರೆಸ್ ಗಿಟ್ಟಿಸಿದ್ದು ಬಿಜೆಪಿ ಪಾಲಿಗೆ ಶಾಕ್ ನೀಡಿದ ಫಲಿತಾಂಶ. ಮೈಸೂರು, ಚಾಮರಾಜನಗರದಲ್ಲಿ ಬಿಜೆಪಿ ಸಂಸದರಿದ್ದರೂ, ಅರ್ಧಕ್ಕರ್ಧ ಭಾಗದಲ್ಲಿ ಶಾಸಕರಿದ್ದರೂ, ಮಂಡ್ಯ, ಮೈಸೂರಿನಲ್ಲಿ ಸಚಿವರಿದ್ದರೂ ಬಿಜೆಪಿ ಪಾಲಿಗೆ ಗೆಲುವು ದಕ್ಕಲಿಲ್ಲ. ಜೆಡಿಎಸ್ ಪ್ರಾಬಲ್ಯ ಇರುವ ಹಳೆ ಮೈಸೂರಿನಲ್ಲಿ ಕಾಂಗ್ರೆಸ್ ಇದೇ ಮೊದಲ ಬಾರಿಗೆ ಪರಿಷತ್ ಸ್ಥಾನ ಗಿಟ್ಟಿಸಿಕೊಂಡಿದೆ. ಬೆಳಗಾವಿ ಮತ್ತು ಮೈಸೂರಿನ ಪರಿಷತ್ ಚುನಾವಣೆಯ ಫಲಿತಾಂಶ ಬಿಜೆಪಿ ಪಾಲಿಗೆ ದೊಡ್ಡ ಹಿನ್ನಡೆಯೇ ಸರಿ. ಈ ಸೋಲನ್ನು ಹೇಗೆ ಅರಗಿಸಿಕೊಳ್ಳುತ್ತೋ ಗೊತ್ತಿಲ್ಲ, ಚುನಾವಣೆ ವರ್ಷದಲ್ಲಿ ಇವರ ಭಾನಗಡಿ ಕೆಲಸಗಳೇ ಇವರ ಪಾಲಿಗೆ ಎಡತಾಕಿ ಬರುತ್ತಿರುವುದಂತೂ ಸತ್ಯ.

A senior Congress leader Prakash Hukkeri registered a comfortable victory in the MLC elections held to North West Teachers Constituency bagging 11460 first preferential votes against 6405 taken by his nearest rival Arun Shahapur of the BJP.