ಕೂಲಿ ಕಾರ್ಮಿಕರನ್ನು ಒಯ್ಯುತ್ತಿದ್ದ ಕ್ರೂಸರ್ ಪಲ್ಟಿ ; ಏಳು ಮಂದಿ ರೈಲ್ವೇ ಗುತ್ತಿಗೆ ಕಾರ್ಮಿಕರು ಸ್ಥಳದಲ್ಲೇ ಸಾವು ! 5 ಲಕ್ಷ ಪರಿಹಾರ ಘೋಷಣೆ 

26-06-22 03:02 pm       HK News Desk   ಕರ್ನಾಟಕ

ಚಾಲಕನ ನಿಯಂತ್ರಣ ತಪ್ಪಿ ಕೂಲಿ ಕಾರ್ಮಿಕರನ್ನು ಒಯ್ಯುತ್ತಿದ್ದ ಕ್ರೂಸರ್‌ ವಾಹನ ಕಣಬರಗಿ ಬಳಿ ಪಲ್ಟಿಯಾಗಿ ಬಿದ್ದಿದ್ದು ಸ್ಥಳದಲ್ಲೇ ಏಳು ಜನ ದುರಂತ ಸಾವು ಕಂಡಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದು ಬೆಳಗಾವಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಬೆಳಗಾವಿ, ಜೂನ್ 26 : ಚಾಲಕನ ನಿಯಂತ್ರಣ ತಪ್ಪಿ ಕೂಲಿ ಕಾರ್ಮಿಕರನ್ನು ಒಯ್ಯುತ್ತಿದ್ದ ಕ್ರೂಸರ್‌ ವಾಹನ ಕಣಬರಗಿ ಬಳಿ ಪಲ್ಟಿಯಾಗಿ ಬಿದ್ದಿದ್ದು ಸ್ಥಳದಲ್ಲೇ ಏಳು ಜನ ದುರಂತ ಸಾವು ಕಂಡಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದು ಬೆಳಗಾವಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಅಡಿವೆಪ್ಪ ಚಿಲಬಾಂವಿ (27), ಬಸವರಾಜ್ ದಳವಿ (30), ಬಸವರಾಜ ಹನಮನ್ನವರ (51), ಆಕಾಶ ಗಸ್ತಿ (22), ಫಕಿರಪ್ಪ ಹರಿಜನ (55), ಮಲ್ಲಪ್ಪ ದಾಸನಟ್ಟಿ (30) ಮೃತರು ಎಂದು ಪೊಲೀಸರು ಗುರುತಿಸಿದ್ದು ಮತ್ತೋರ್ವನ ಗುರುತು ಪತ್ತೆಯಾಗಿಲ್ಲ. ಗೋಕಾಕ್ ತಾಲೂಕಿನ ಅಕ್ಕ ತಂಗಿಯರ ಹಾಳದಿಂದ 18 ಕಾರ್ಮಿಕರನ್ನು ಹೊತ್ತು ಬೆಳಗಾವಿ ನಗರಕ್ಕೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. 

ದುರಂತ ಪ್ರಕರಣದ ಬಗ್ಗೆ ಬೆಳಗಾವಿ ಪ್ರವಾಸದಲ್ಲಿರುವ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಅಪಘಾತ ಆಗಿದ್ದು ಅತ್ಯಂತ  ದುಃಖದ ಸಂಗತಿ. ಮೃತ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ, ಬೆಳಗಾವಿ ಜಿಲ್ಲಾಡಳಿತದ ವತಿಯಿಂದ ತಲಾ 2 ಲಕ್ಷ ಪರಿಹಾರ ನೀಡಲಿದ್ದು ಗಾಯಾಳುಗಳ ಚಿಕಿತ್ಸಾ ವೆಚ್ಚ ಸಂಪೂರ್ಣ ಜಿಲ್ಲಾಡಳಿತ  ನೋಡಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ. 

ಗೋಕಾಕ್‌ ತಾಲೂಕಿನ ಅಕ್ಕತಂಗಿಯರ ಹಾಳದಿಂದ ಬೆಳಗ್ಗೆ 7.30 ರ ಸುಮಾರಿಗೆ ಸುಮಾರು 18 ಮಂದಿ ಕಾರ್ಮಿಕರು ಬೆಳಗಾವಿಗೆ ಹೊರಟಿದ್ದರು. ದಿನವೂ ಗುತ್ತಿಗೆ ಕಾರ್ಮಿಕರು ಇದೇ ಕ್ರೂಸರ್ ವಾಹನದಲ್ಲಿ ತೆರಳುತ್ತಿದ್ದರು. ಕ್ರೂಸರ್ ವಾಹನ ಬೆಳಗಾವಿ - ಗೋಕಾಕ್‌ ಮುಖ್ಯ ರಸ್ತೆಯ ಕಣಬರಗಿ ತಲುಪುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಬಳ್ಳಾರಿ ನಾಲಾಕ್ಕೆ ಉರುಳಿ ಬಿದ್ದಿದೆ. ಅಪಘಾತದಿಂದ ಸ್ಥಳದಲ್ಲಿಯೇ ಏಳು ಮಂದಿ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಮೃತಪಟ್ಟವರೆಲ್ಲರೂ ಕೂಡ ರೈಲ್ವೆ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ನಿತ್ಯವೂ ಕ್ರೂಸರ್‌ ಮೂಲಕ ಒಟ್ಟು 18 ಮಂದಿ ಬೆಳಗಾವಿಗೆ ಪ್ರಯಾಣಿಸುತ್ತಿದ್ದರು. ಕ್ರೂಸರ್‌ ಚಾಲಕ ವೇಗವಾಗಿ ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಮೂರರಿಂದ ನಾಲ್ಕು ಬಾರಿ ಪಲ್ಟಿಯಾಗಿದ್ದು, ಕ್ರೂಸರ್‌ ಸಂಪೂರ್ಣವಾಗಿ ಜಖಂ ಆಗಿದೆ.

Seven labourers were killed and 10 others injured when a multi-utility vehicle (MUV) overturned in Kanabaragi village near Belagavi on Sunday. The injured were admitted to a hospital in Belagavi.