ಗೋಹತ್ಯೆ ನಿಷೇಧ ಕಾಯ್ದೆ ಮತ್ತಷ್ಟು ಬಿಗಿ ; ಗೋವು ಸಾಗಣೆಗೆ ಬೇಕು ಪಶು ವೈದ್ಯರ ಸರ್ಟಿಫಿಕೇಟ್ ! ಒಮ್ಮೆಗೆ ಎರಡು ಗೋವನ್ನಷ್ಟೆ ಸಾಗಿಸಲು ಅವಕಾಶ !

28-06-22 02:52 pm       Bangalore Correspondent   ಕರ್ನಾಟಕ

ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲು ಬಿಜೆಪಿ ಸರಕಾರ ಮುಂದಾಗಿದೆ. ಇದರಂತೆ, ಪರವಾನಗಿ ಪಡೆಯದೆ ಯಾವುದೇ ಉದ್ದೇಶಕ್ಕೂ ವಾಹನದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಜಾನುವಾರುಗಳನ್ನು ಸಾಗಿಸುವಂತಿಲ್ಲ.

ಬೆಂಗಳೂರು, ಜೂನ್ 28: ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲು ಬಿಜೆಪಿ ಸರಕಾರ ಮುಂದಾಗಿದೆ. ಇದರಂತೆ, ಪರವಾನಗಿ ಪಡೆಯದೆ ಯಾವುದೇ ಉದ್ದೇಶಕ್ಕೂ ವಾಹನದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಜಾನುವಾರುಗಳನ್ನು ಸಾಗಿಸುವಂತಿಲ್ಲ. ಜಾನುವಾರು ಸಾಗಿಸೋದಕ್ಕೂ ಮುನ್ನ ಆನ್ಲೈನ್ ಅರ್ಜಿ ಸಲ್ಲಿಸಿ ಅನುಮತಿ ಪಡೆದಿರಬೇಕು.

ರೈತರು ಅಥವಾ ಇನ್ನಾವುದೇ ವ್ಯಕ್ತಿಗಳು ಜಾನುವಾರುಗಳನ್ನು ಅತ್ತಿತ್ತ ಸಾಗಿಸಬೇಕಿದ್ದರೆ ಇನ್ನು ಮೊದಲೇ ಪಶು ಸಂಗೋಪನಾ ಇಲಾಖೆಯಿಂದ ಅನುಮತಿ ಪಡೆಯಬೇಕು. ಅಲ್ಲದೆ, ಪಶು ಚಿಕಿತ್ಸಾಲಯದ ವೈದ್ಯರಿಂದ ಸರ್ಟಿಫಿಕೇಟನ್ನೂ ಪಡೆಯಬೇಕು. ಅಲ್ಲದೆ, ಸಾಗಣೆ ಮಾಡಬೇಕೂಂತಿದ್ದರೆ ದನದ ಫೋಟೋ, ಅದರ ಮಾಲೀಕನ ಫೋಟೋ ಮತ್ತು ಆತನ ಆಧಾರ್ ಕಾರ್ಡನ್ನು ಆನ್ಲೈನಲ್ಲಿ ಅಪ್ಲೋಡ್ ಮಾಡಿರಬೇಕು. ಅಲ್ಲದೆ ಸಾಗಣೆ ಮಾಡುವುದಕ್ಕೆ ಇಂತಿಷ್ಟು ಶುಲ್ಕವನ್ನೂ ಪಾವತಿ ಮಾಡಬೇಕು.

ಕೃಷಿ ಚಟುವಟಿಕೆ ಅಥವಾ ಹೈನುಗಾರಿಕೆ ಉದ್ದೇಶದಿಂದ ಮಾತ್ರ ಜಾನುವಾರು ಸಾಗಣೆ ಮಾಡಲು ಅವಕಾಶ ಇರುತ್ತದೆ. ಸಾಗಿಸುವುದಕ್ಕೂ ಮುನ್ನ ದನ, ಕೋಣ, ಎಮ್ಮೆಯ ಫೋಟೋವನ್ನೂ ಅರ್ಜಿ ಸಲ್ಲಿಸುವ ಸಂದರ್ಭದಲ್ಲೇ ಅಪ್ಲೋಡ್ ಮಾಡಿರಬೇಕು. ಅಲ್ಲದೆ, ಒಂದು ಬಾರಿಗೆ ಒಂದು ದನಕ್ಕೆ ಲೈಸನ್ಸ್ ಪಡೆದಲ್ಲಿ ಆನಂತರ ಹತ್ತು ಕಿಮೀ ವ್ಯಾಪ್ತಿಯಲ್ಲಿ ಅದನ್ನು ಸಾಗಿಸುವುದಕ್ಕೆ ಹೆಚ್ಚುವರಿ ಅರ್ಜಿ ಸಲ್ಲಿಸಬೇಕಿಲ್ಲ. ಯಾವುದೇ ಕಡೆಗೂ ಕೃಷಿ ಉದ್ದೇಶಕ್ಕೆ ಸಾಗಣೆ ಮಾಡಬಹುದು. ದನದ ಮಾಲೀಕ ಇರುವ ಜಾಗದಿಂದ ಹತ್ತು ಕಿಮೀ ಹೆಚ್ಚಿನ ದೂರಕ್ಕೆ ಸಾಗಿಸಿದಲ್ಲಿ ದಂಡ ತೆರಬೇಕಾಗುತ್ತದೆ.

ಯಾವುದೇ ಕಾರಣಕ್ಕೂ ದನ, ಎಮ್ಮೆ, ಕೋಣ ಇತ್ಯಾದಿ ಜಾನುವಾರುಗಳನ್ನು ವಧಾಗೃಹಕ್ಕೆ ಸಾಗಿಸಲು ಅವಕಾಶ ಇಲ್ಲ. ಕೃಷಿ ಉದ್ದೇಶಕ್ಕೆ ಸಾಗಿಸುವುದಿದ್ದರೂ, ಒಂದು ವಾಹನದಲ್ಲಿ ಎರಡು ದನಗಳನ್ನಷ್ಟೇ ಸಾಗಿಸಲು ಅವಕಾಶ. ಇವೆಲ್ಲದಕ್ಕಿಂತ ಮುಖ್ಯವಾಗಿ ಜಾನುವಾರುಗಳನ್ನು ಸಾಗಿಸುವ ವಾಹನ ಪಶು ಸಂಗೋಪನಾ ಇಲಾಖೆಯಲ್ಲಿ ರಿಜಿಸ್ಟರ್ ಆಗಿರಬೇಕು. ಅಲ್ಲದೆ, ವಾಹನದಲ್ಲಿ ಸಾಗಿಸುವ ಸಂದರ್ಭದಲ್ಲಿ ಗೋವುಗಳಿಗೆ ಆಹಾರವನ್ನೂ ಒದಗಿಸಲು ವ್ಯವಸ್ಥೆ ಮಾಡಿಕೊಂಡಿರಬೇಕು. ಒಂದ್ವೇಳೆ ಕಾನೂನು ಮೀರಿ ನಡೆದುಕೊಂಡಲ್ಲಿ ಆರೋಪಿಗಳಿಗೆ ಮೂರರಿಂದ ಏಳು ವರ್ಷದ ವರೆಗೆ ಜೈಲು ಶಿಕ್ಷೆ ಮತ್ತು 50 ಸಾವಿರದಿಂದ 5 ಲಕ್ಷದ ವರೆಗೆ ದಂಡ ವಿಧಿಸಬಹುದು.

The state BJP government has decided to implement the anti-cow slaughter law strictly. It made mandatory to apply online for transportation of cattle of any kind in the state.Farmers or those who rear cattle have to apply online to transport the cattle. In addition, they have to seek the permission of district deputy director of animal husbandry department and certificate from veterinary doctor. The farmers have to upload the photo of cow and Aadhar card of concerned farmer or owner of the cattle.