ಮಲೆನಾಡಿನಲ್ಲಿ ಮಳೆ ಆರ್ಭಟ ; ಹೊಳೆಯಲ್ಲಿ ಕೊಚ್ಚಿ ಹೋದ ಒಂದನೇ ತರಗತಿ ವಿದ್ಯಾರ್ಥಿನಿ ! 

05-07-22 01:04 pm       HK News Desk   ಕರ್ನಾಟಕ

ಮಲೆನಾಡಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಹೊಳೆಗಳು ತುಂಬಿ ಹರಿಯತೊಡಗಿವೆ.

Photo credits : Representative

ಚಿಕ್ಕಮಗಳೂರು, ಜುಲೈ 5 : ಮಲೆನಾಡಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಹೊಳೆಗಳು ತುಂಬಿ ಹರಿಯತೊಡಗಿವೆ. ಈ ನಡುವೆ, ಶಾಲೆ ಬಿಟ್ಟು ತೆರಳುತ್ತಿದ್ದ ಒಂದನೇ ತರಗತಿ ಬಾಲಕಿ ಹೊಳೆ ದಾಟುವಾಗ ನೀರಿಗೆ ಬಿದ್ದು ಕೊಚ್ಚಿ ಹೋದ ಘಟನೆ ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ನಡೆದಿದೆ. 

ಹೊಸಪೇಟೆ ಕಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಸುಪ್ರೀತಾ ಸೋಮವಾರ ಸಂಜೆ ಅಣ್ಣನ ಜೊತೆ ಶಾಲೆ ಮುಗಿಸಿ ಬರುತ್ತಿದ್ದಾಗ ಹೊಳೆಗೆ ಬಿದ್ದು ಕೊಚ್ಚಿ ಹೋಗಿದ್ದಾಳೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಬಾಲಕಿಗಾಗಿ ಶೋಧ ನಡೆಸಿದ್ದಾರೆ. 

ಶೃಂಗೇರಿ, ಕೆರೆಕಟ್ಟೆ ಸುತ್ತಮುತ್ತ ಧಾರಾಕಾರ ಮಳೆಯಾಗಿದ್ದು ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಾಳೆ. ಮಳೆ ಅಬ್ಬರಿಸುತ್ತಿರುವ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಮೂರು ತಾಲೂಕಿನ ಶಾಲೆಗಳಿಗೆ ಜಿಲ್ಲಾಡಳಿತ ಎರಡು ದಿನ ರಜೆ ಘೋಷಣೆ ಮಾಡಿದೆ. ಶೃಂಗೇರಿ, ಕಳಸ ಹಾಗೂ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಶಾಲೆಗಳಿಗೆ ಜುಲೈ 5 ಮತ್ತು 6ರಂದು ರಜೆ ನೀಡಲಾಗಿದೆ. ಭಾರೀ ಮಳೆಯಾಗುತ್ತಿರುವುದರಿಂದ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ರಜೆ ನೀಡಿ ಆದೇಶ ಮಾಡಿದ್ದಾರೆ.

1st standard school boy swept away while crossing bridge due to heavy rains in Chikkamagaluru.