ನಾನು ಆರೋಗ್ಯವಾಗಿದ್ದೇನೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ; ಸಿಎಂ ಯಡಿಯೂರಪ್ಪ ವಿಡಿಯೋ ಸಂದೇಶ

03-08-20 09:30 am       Bangalore Correspondent   ಕರ್ನಾಟಕ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆಸ್ಪತ್ರೆಗೆ ದಾಖಲಾದ ಬಳಿಕ ಮೊದಲ ವಿಡಿಯೋ ಸಂದೇಶ ಕಳುಹಿಸಿದ್ದು, ಯಾರಿಗೂ ಆತಂಕ ಬೇಡ, ಆರೋಗ್ಯವಾಗಿದ್ದೇನೆ. ಬೇಗ ಗುಣಮುಖನಾಗುತ್ತೇನೆಂದು ವೈದ್ಯರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಬೆಂಗಳೂರು (ಆ. 3): ವೈದ್ಯಕೀಯ ತಪಾಸಣೆ ವೇಳೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ವಿಡಿಯೋ ಸಂದೇಶ ರವಾನಿಸಿರುವ ಸಿಎಂ ಯಡಿಯೂರಪ್ಪ, ವೈದ್ಯರು ತಪಾಸಣೆ ಮಾಡಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.

ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿರುವ ಎಲ್ಲರಿಗೂ ಧನ್ಯವಾದ. ರಾಜ್ಯದ ಜನರೆಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ನಿಮ್ಮ ಸುರಕ್ಷತೆಯ ಬಗ್ಗೆ ಗಮನಹರಿಸಿ ಎಂದು ಮನವಿ ಮಾಡಿದ್ದಾರೆ.

ನಿನ್ನೆ ರಾತ್ರಿ 8ರಿಂದ 9 ಗಂಟೆಗೆ ನನಗೆ ಕೊರೋನಾ ಪಾಸಿಟಿವ್ ಇದು ಎಂದು ತಿಳಿಯಿತು. ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದೇನೆ. ವೈದ್ಯರು ರಾತ್ರಿಯಿಂದ ಪರೀಕ್ಷೆ ಮಾಡಿದ್ದಾರೆ. ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ. ಬೇಗ ಗುಣಮುಖರಾಗಿ ಮನೆಗೆ ಹೋಗುತ್ತೀರಿ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ, ಯಾರೂ ಚಿಂತಿಸಬೇಕಾದ ಅಗತ್ಯವಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

 

ಈಗಾಗಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ಅನೇಕ ಮಠಾಧೀಶರು ಕರೆ ಮಾಡಿ ಆರೋಗ್ಯ ವಿಚಾರಿಸಿ, ಬೇಗ ಗುಣಮುಖರಾಗಿ ಬನ್ನಿ ಎಂದು ಹಾರೈಸಿದ್ದಾರೆ ಎಂದು ತಿಳಿಸಿದ್ದಾರೆ.