38 ಮಂದಿ ಶ್ರೀಲಂಕಾ ಪ್ರಜೆಗಳಿಗೆ ಬೆಂಗಳೂರಿನಲ್ಲಿ ಜೈಲು, ಪೊಲೀಸರ ಕ್ರಮ ಪ್ರಶ್ನಿಸಿ ಹೈಕೋರ್ಟಿಗೆ ಅಪೀಲು, ರಾಜ್ಯ- ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್

02-08-22 09:47 pm       Bangalore Correspondent   ಕರ್ನಾಟಕ

ಮಂಗಳೂರಿನಲ್ಲಿ ಬಂಧಿಸಲ್ಪಟ್ಟ 38 ಮಂದಿ ಶ್ರೀಲಂಕಾ ನಿವಾಸಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಇಟ್ಟಿರುವುದನ್ನು ಪ್ರಶ್ನಿಸಿ ಹೈಕೋರ್ಟಿಗೆ ಪಿಐಎಲ್ ಸಲ್ಲಿಕೆಯಾಗಿದ್ದು, ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ನೋಟೀಸ್ ಜಾರಿಗೊಳಿಸಿದೆ.

ಬೆಂಗಳೂರು, ಆಗಸ್ಟ್ 2: ಮಂಗಳೂರಿನಲ್ಲಿ ಬಂಧಿಸಲ್ಪಟ್ಟ 38 ಮಂದಿ ಶ್ರೀಲಂಕಾ ನಿವಾಸಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಇಟ್ಟಿರುವುದನ್ನು ಪ್ರಶ್ನಿಸಿ ಹೈಕೋರ್ಟಿಗೆ ಪಿಐಎಲ್ ಸಲ್ಲಿಕೆಯಾಗಿದ್ದು, ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ನೋಟೀಸ್ ಜಾರಿಗೊಳಿಸಿದೆ.

ಮುಖ್ಯ ನ್ಯಾಯಾಧೀಶ ಅಲೋಕ್ ಅರಾಧೆ ಮತ್ತು ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠವು ರಾಜ್ಯ ಮತ್ತು ಕೇಂದ್ರ ಗೃಹ ಸಚಿವಾಲಯ, ಎನ್ಐಎ ತನಿಖಾ ದಳ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಮತ್ತು ಬೆಂಗಳೂರು ಜಿಲ್ಲಾಧಿಕಾರಿಗೆ ನೋಟೀಸ್ ಜಾರಿ ಮಾಡಿದ್ದು, ನಿರಾಶ್ರಿತರನ್ನು ಇಡಬಲ್ಲ ಕೇಂದ್ರವನ್ನು ಮಾಡದೇ ಇರುವ ಬಗ್ಗೆ ಪ್ರಶ್ನೆ ಮಾಡಿದೆ. ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ವಕೀಲರೊಬ್ಬರು ಜೈಲಿನಲ್ಲಿ ಇಟ್ಟಿರುವ ಶ್ರೀಲಂಕಾ ಪ್ರಜೆಗಳನ್ನು ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರ ಮಾಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೇಳಿಕೊಂಡಿದ್ದಾರೆ. ಅಲ್ಲದೆ, ಎನ್ಐಎ ವಿಶೇಷ ಕೋರ್ಟ್ ಸೂಚನೆಯ ಪ್ರಕಾರ, ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ನಿರಾಶ್ರಿತರ ಕೇಂದ್ರ ಆರಂಭಿಸುವಂತೆ ಆದೇಶ ನೀಡಲು ಒತ್ತಾಯಿಸಿದ್ದಾರೆ. ಶ್ರೀಲಂಕಾ ಪ್ರಜೆಗಳ ಹೇಳಿಕೆಯನ್ನು ಎನ್ಐಎ ಕೋರ್ಟಿನಲ್ಲಿ ದಾಖಲಿಸಲು ಅವಕಾಶ ನೀಡಬೇಕೆಂದೂ ಕೇಳಿಕೊಂಡಿದ್ದಾರೆ.

2021ರ ಜೂನ್ 10ರಂದು ಮಂಗಳೂರು ಪೊಲೀಸರು ಬಂದರು ದಕ್ಕೆ ಬಳಿಯ ವಸತಿ ಗೃಹದಲ್ಲಿ ಅಕ್ರಮವಾಗಿ ಉಳಿದುಕೊಂಡಿದ್ದ 38 ಮಂದಿ ಶ್ರೀಲಂಕಾ ಪ್ರಜೆಗಳನ್ನು ಬಂಧಿಸಿದ್ದರು. ಆನಂತರ, ಎನ್ಐಎ ಅಧಿಕಾರಿಗಳು ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸಿದ್ದರು. ಖಾಸಗಿ ಏಜನ್ಸಿಯವರು ಲಂಕಾದ ಪ್ರಜೆಗಳನ್ನು ಭಾರತ ಮೂಲಕ ಕೆನಡಾಕ್ಕೆ ಉದ್ಯೋಗಕ್ಕಾಗಿ ಕರೆತಂದಿದ್ದರು. ಅವರೇನು ಉದ್ದೇಶಪೂರ್ವಕ ಭಾರತಕ್ಕೆ ನುಸುಳಿ ಬಂದವರಲ್ಲ ಎನ್ನುವುದು ತನಿಖೆಯಲ್ಲಿ ಕಂಡುಬಂದಿತ್ತು. ಹೀಗಾಗಿ ಎನ್ಐಎ ಕೋರ್ಟ್, ಲಂಕಾ ಪ್ರಜೆಗಳ ಮೇಲೆ ದಾಖಲಿಸಿರುವ ಕೇಸುಗಳನ್ನು ವಜಾಗೊಳಿಸಿ, ಲಂಕಾಕ್ಕೆ ಗಡೀಪಾರು ಮಾಡುವ ವರೆಗೆ ನಿರಾಶ್ರಿತರ ಕೇಂದ್ರದಲ್ಲಿ ಇರಿಸುವಂತೆ ಸೂಚನೆ ನೀಡಿತ್ತು. ಆದರೆ ಕೋರ್ಟ್ ಸೂಚನೆ ಇನ್ನೂ ಪಾಲನೆಯಾಗಿಲ್ಲ. ಬದಲಿಗೆ, ಇನ್ನೂ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಜೈಲಿನಲ್ಲಿಯೇ ಇರಿಸಲಾಗಿದೆ.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು ಈ ಬಗ್ಗೆ ಮಾಹಿತಿ ತಿಳಿದು ಅಕ್ರಮವಾಗಿ ಜೈಲಿನಲ್ಲಿ ಬಂಧನ ಇಟ್ಟಿರುವುದನ್ನು ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಎನ್ಐಎ ಕೋರ್ಟ್ ಆದೇಶ ಮತ್ತು ಮಾನವ ಹಕ್ಕಿನ ಉಲ್ಲಂಘನೆಯಾಗಿರುವ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

The Karnataka High Court has issued notices to the state and central governments in connection with illegal detention of 38 Sri Lankan nationals in the central prison here.A division bench headed by Acting Chief Justice Alok Aradhe and Justice Vishwajith Shetty gave the order on Monday on a plea challenging lodging of Sri Lankans in the Central Prison of Parappana Agrahara in Bengaluru.