ಆಂಧ್ರ - ಬೆಂಗಳೂರು ಖಾಸಗಿ ಬಸ್ ಪಲ್ಟಿ ; ಸ್ಥಳದಲ್ಲೇ ಇಬ್ಬರ ಸಾವು, ಹಲವರಿಗೆ ಗಾಯ ! 

17-08-22 11:41 am       HK News Desk   ಕರ್ನಾಟಕ

ಚಾಲಕನ ನಿಯಂತ್ರಣದ ತಪ್ಪಿದ ಖಾಸಗಿ ಬಸ್​ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ದುರಂತ ಸಾವಿಗೀಡಾಗಿ, 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಳಬಾಗಿಲು ತಾಲೂಕಿನ ರಾಷ್ಟ್ರೀಯ ಹೆದ್ದಾರಿ-75ರ ವಿರುಪಾಕ್ಷಿ ಗೇಟ್ ಬಳಿ ಇಂದು ಮುಂಜಾನೆ ನಡೆದಿದೆ.

ಕೋಲಾರ, ಆಗಸ್ಟ್ 17: ಚಾಲಕನ ನಿಯಂತ್ರಣದ ತಪ್ಪಿದ ಖಾಸಗಿ ಬಸ್​ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ದುರಂತ ಸಾವಿಗೀಡಾಗಿ, 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಳಬಾಗಿಲು ತಾಲೂಕಿನ ರಾಷ್ಟ್ರೀಯ ಹೆದ್ದಾರಿ-75ರ ವಿರುಪಾಕ್ಷಿ ಗೇಟ್ ಬಳಿ ಇಂದು ಮುಂಜಾನೆ ನಡೆದಿದೆ.

ಖಾಸಗಿ ಬಸ್​ ಆಂಧ್ರ ಪ್ರದೇಶದ ಗುಂಟೂರಿನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಚಾಲಕ ಅತಿಯಾದ ವೇಗದಲ್ಲಿ ಬಸ್​ ಚಲಾಯಿಸಿಕೊಂಡು ಬರುತ್ತಿದ್ದದ್ದೇ ಈ ದುರ್ಘಟನೆಗೆ ಕಾರಣ ಎಂದು ಹೇಳಲಾಗಿದೆ. ವೇಗದ ಚಾಲನೆ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್​, ರಸ್ತೆಯನ್ನು ಬಿಟ್ಟು ಪಕ್ಕದ ಹಳ್ಳದ ಜಾಗದಲ್ಲಿ ಪಲ್ಟಿ ಹೊಡೆದಿದೆ.

ಬಸ್​ನಲ್ಲಿ 30 ಜನರಿದ್ದರು. ಆಂಧ್ರ ಮೂಲದ‌ ಇಬ್ಬರು ಮೃತಪಟ್ಟಿದ್ದಾರೆ. ಬಸ್​ ಆಂಧ್ರದ ನಲ್ಲೂರಿನ ವೇಮೂರಿ-ಕಾವೇರಿ ಟ್ರಾವಲ್​ಗೆ ಸೇರಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತದ ಬೆನ್ನಲ್ಲೇ ಚಾಲಕ ಮತ್ತು ನಿರ್ವಾಹಕ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಚಾಲಕ ಮತ್ತು ನಿರ್ವಾಹಕ ಪತ್ತೆಗೆ ಬಲೆ ಬೀಸಿದ್ದಾರೆ. ಪಲ್ಟಿಯಾಗಿದ್ದ ಬಸ್​ ಅನ್ನು ತೆರುವುಗೊಳಿಸಲಾಗಿದೆ.

Andhra Bangalore Kaveri Bus topples due to over speed two dead on spot many injured.