ಬೆಂಗಳೂರಿಗೆ ಬಂದಿಳಿಯಲಿದೆ ವಿಶ್ವದ ಅತಿ ದೊಡ್ಡ ವಿಮಾನ   ಏರ್‌ಬಸ್‌ ; 853 ಮಂದಿ ಪ್ರಯಾಣಿಸುವ ಡಬಲ್ ಡೆಕ್ಕರ್ ಫ್ಲೈಟ್ ! 

17-08-22 10:58 pm       Bangalore Correspondent   ಕರ್ನಾಟಕ

ವಿಶ್ವದ ಅತಿ ದೊಡ್ಡ ವಿಮಾನ ಏರ್‌ಬಸ್‌ ಎ-380 ಸೂಪರ್‌ಜಂಬೋ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರುವ ಅಕ್ಟೋಬರ್​ 30ರಂದು ಲ್ಯಾಂಡ್‌ ಆಗಲಿದೆ.

ಬೆಂಗಳೂರು, ಆಗಸ್ಟ್ 17: ವಿಶ್ವದ ಅತಿ ದೊಡ್ಡ ವಿಮಾನ ಏರ್‌ಬಸ್‌ ಎ-380 ಸೂಪರ್‌ಜಂಬೋ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರುವ ಅಕ್ಟೋಬರ್​ 30ರಂದು ಲ್ಯಾಂಡ್‌ ಆಗಲಿದೆ.

ಈ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅತಿ ದೊಡ್ಡ ಏರ್ ಬಸ್ ಭೂಸ್ವರ್ಶ ಮಾಡಲಿದೆ. ಒಟ್ಟು 72.75 ಮೀಟರ್‌ ಉದ್ದ, 24.45 ಮೀಟರ್‌ ಎತ್ತರ ಹೊಂದಿರುವ ಈ ವಿಮಾನದಲ್ಲಿ ಒಂದು ಬಾರಿ ಗರಿಷ್ಠ 853 ಮಂದಿ ಪ್ರಯಾಣಿಸಬಹುದಾಗಿದೆ. ಒಂದು ಬಾರಿಗೆ 3 ಸಾವಿರ ಸೂಟ್‌ಕೇಸ್‌ಗಳನ್ನು ತೆಗದುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ.

ಈ ಕುರಿತು ಯುಎಇ ವಿಮಾನಯಾನ ಸಂಸ್ಥೆ ಎಮಿರೇಟ್ಸ್‌ ಹೇಳಿಕೆ ಬಿಡುಗಡೆ ಮಾಡಿದೆ. ಅಕ್ಟೋಬರ್‌ 30 ರಿಂದ ಪ್ರತಿನಿತ್ಯ ಬೆಂಗಳೂರಿನಿಂದ ದುಬೈಗೆ ಸೇವೆ ನೀಡಲಾಗುವುದು ಎಂದು ಅದು ತಿಳಿಸಿದೆ. ಎಮಿರೇಟ್ಸ್‌ ಸಂಸ್ಥೆಯ ಏರ್‌ಬಸ್‌ ಎ-380 ವಿಮಾನ ಲ್ಯಾಂಡ್‌ ಆಗುವ ಎರಡನೇ ನಿಲ್ದಾಣ ಬೆಂಗಳೂರು ಆಗಲಿದೆ. ಈ ಮೊದಲು 2014ರಲ್ಲಿ ಎಮಿರೇಟ್ಸ್‌ ಸಂಸ್ಥೆ ಮುಂಬೈನಿಂದ ದುಬೈಗೆ ಈ ಸೇವೆಯನ್ನು ನೀಡಿತ್ತು.

ದುಬೈನಿಂದ ಟೇಕ್ ಆಫ್ ಆದ ಏರ್ ಬಸ್ ಆಕ್ಟೋಬರ್ 30 ರಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ. ಈ ಡಬ್ಬಲ್‌ ಡೆಕ್ಕರ್‌ ವಿಮಾನದಲ್ಲಿ ಮೂರು ದರ್ಜೆಯಲ್ಲಿ ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ. ಎಕಾನಮಿ, ಬಿಸಿನೆಸ್‌, ಫಸ್ಟ್‌ ಕ್ಲಾಸ್‌ ಟಿಕೆಟ್‌ ಲಭ್ಯವಿದೆ.

ಬೋಯಿಂಗ್‌ 777 ಹೋಲಿಕೆ ಮಾಡಿದರೆ ಶೇ.45 ರಷ್ಟು ಹೆಚ್ಚು ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ. ವಿಶ್ವದ 30 ವಿಮಾನ ನಿಲ್ದಾಣಗಳಿಗೆ ಏರ್‌ಬಸ್‌ 380 ವಿಮಾನ ಸೇವೆಯನ್ನು ಎಮಿರೇಟ್ಸ್‌ ನೀಡುತ್ತಿದೆ. 1985ರಿಂದ ಎಮಿರೇಟ್ಸ್‌ ಭಾರತದಲ್ಲಿ ಸೇವೆ ನೀಡಲು ಆರಂಭಿಸಿದೆ. 2003 ರಲ್ಲಿ ಏರ್‌ಬಸ್‌ ಕಂಪನಿ ಈ ವಿಮಾನವನ್ನು ನಿರ್ಮಾಣ ಮಾಡಿದೆ. ಇಲ್ಲಿಯವರೆಗೆ 3 ಪರೀಕ್ಷಾರ್ಥ ವಿಮಾನ ಸೇರಿದಂತೆ ಒಟ್ಟು 254 ವಿಮಾನಗಳನ್ನು ಉತ್ಪಾದನೆ ಮಾಡಲಾಗಿದೆ.

Emirates airline on Tuesday announced to put the world’s largest commercial airplane A380 into service for flights between Dubai and Bengaluru from October 30. So far, the service between the two destinations was offered by the airline through Boeing 777.