ಹಣದ ವಹಿವಾಟಿನಲ್ಲಿ ತಕರಾರು ; ಮೊಮ್ಮಗನನ್ನೇ ಅಪಹರಿಸಿದ ಸೌದಿಯ ಅಜ್ಜ! ಕಿಡ್ನಾಪ್ ಆಗಿದ್ದ ಮಗು ಗೋವಾದಲ್ಲಿ ಪತ್ತೆ ! 

22-08-22 09:26 pm       HK News Desk   ಕರ್ನಾಟಕ

ಭಟ್ಕಳದ ಬಾಲಕನೊಬ್ಬನ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಗೋವಾದಲ್ಲಿ ಬಾಲಕ ಪತ್ತೆಯಾಗುತ್ತಿದ್ದಂತೆ ಕಿಡ್ನಾಪ್ ಪ್ರಕರಣದ ಅಸಲಿ ವಿಷಯ ಹೊರಬಿದ್ದಿದೆ. 

ಕಾರವಾರ, ಆಗಸ್ಟ್ 22 : ಭಟ್ಕಳದ ಬಾಲಕನೊಬ್ಬನ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಗೋವಾದಲ್ಲಿ ಬಾಲಕ ಪತ್ತೆಯಾಗುತ್ತಿದ್ದಂತೆ ಕಿಡ್ನಾಪ್ ಪ್ರಕರಣದ ಅಸಲಿ ವಿಷಯ ಹೊರಬಿದ್ದಿದೆ. 

ಸೌದಿ ಅರೇಬಿಯಾದಲ್ಲಿರುವ ಬಾಲಕನ ಅಜ್ಜನೇ ಮೊಮ್ಮಗನನ್ನು ಅಪಹರಣ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ಬಾಲಕನ ತಂದೆಗೂ, ತಾಯಿಯ ಮಾವನಾಗಿರುವ ಇನಾಯತುಲ್ಲಾಗೂ ಹಣದ ವಹಿವಾಟು ಇತ್ತು. ಅದಕ್ಕಾಗಿ ಸಂಬಂಧದಲ್ಲಿ ಮೊಮ್ಮಗನೇ ಆಗಿರುವ ಬಾಲಕನನ್ನು ಕಿಡ್ನ್ಯಾಪ್​ ಮಾಡಿ, ಹಣ ವಸೂಲಿ ಮಾಡುವ ಸ್ಕೆಚ್ ಹಾಕಲಾಗಿತ್ತು. 

ಪೊಲೀಸರು ಹುಡುಕಾಟ ನಡೆಸುತ್ತಿದ್ದಂತೆ ಸೋಮವಾರ ಗೋವಾದ ಕಲ್ಲಂಗೂಟ್​​ ಬೀಚ್ ಸಮೀಪ ಬಾಲಕ ಪತ್ತೆಯಾಗಿದ್ದ. ಬಾಲಕನ ಜೊತೆಗಿದ್ದ ಭಟ್ಕಳದ ಬದ್ರಿಯಾ ನಗರದಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಅನೀಸ್ ಭಾಷಾನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನ ಅಜ್ಜ ಇನಾಯತುಲ್ಲಾ ಸೂಚನೆಯಂತೆ ಅನೀಸ್ ಭಾಷಾ ಇತರ ಮೂವರೊಂದಿಗೆ ಸೇರಿ ಕಿಡ್ನ್ಯಾಪ್ ಮಾಡಿದ್ದ ಎನ್ನುವ ಮಾಹಿತಿ ಲಭಿಸಿದೆ. 

ಆಗಸ್ಟ್​ 20 ರಂದು ಸಂಜೆ ವೇಳೆಗೆ ಅಂಗಡಿಗೆ ತೆರಳಿದ್ದ ಎಂಟು ವರ್ಷದ ಬಾಲಕನನ್ನು ಭಟ್ಕಳದಲ್ಲಿ ಕಿಡ್ನ್ಯಾಪ್ ಮಾಡಲಾಗಿತ್ತು. ಒಟ್ಟು ನಾಲ್ವರು ಕಾರಿನಲ್ಲಿ ಬಂದು ಬಾಲಕನನ್ನು ಅಪಹರಿಸಿದ್ದರು. ಭಟ್ಕಳ ನಗರ ಠಾಣೆಯಲ್ಲಿ ಈ ಬಗ್ಗೆ ಅದೇ ದಿನ ಮಧ್ಯರಾತ್ರಿ ಪ್ರಕರಣ ದಾಖಲಾಗಿತ್ತು. ಬಾಲಕನ ಹುಡುಕಾಟಕ್ಕಾಗಿ ಪೊಲೀಸರ ಐದು ತಂಡಗಳನ್ನು ರಚಿಸಲಾಗಿತ್ತು.

ಈ ಬಗ್ಗೆ ಎಸ್ಪಿ ಡಾ.ಸುಮನ್ ಪೆನ್ನೇಕರ್ ಮಾಹಿತಿ ನೀಡಿದ್ದು, ಬಾಲಕನ ತಂದೆ ಮತ್ತು ಮಾವನ ನಡುವೆ ಹಣಕಾಸಿನ ವ್ಯವಹಾರವಿದ್ದು, ಇದೇ ಕಾರಣಕ್ಕೆ ಅಪಹರಣ ಆಗಿದೆ. ಈ ಹಿಂದೆ ಕೂಡ ಬಾಲಕನ ತಂದೆಗೆ ಬೆದರಿಕೆ ಬಂದಿತ್ತು. ಇನ್ನುಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ಮಾಹಿತಿ ನೀಡಿದರು. ಗೋವಾದಿಂದ ಕರೆತಂದ ಬಾಲಕನನ್ನು ಸೋಮವಾರ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆತಂದು ತಪಾಸಣೆ ನಡೆಸಲಾಯಿತು. ಬಳಿಕ ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ ನೇತೃತ್ವದಲ್ಲಿ ಬಾಲಕನನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ.

Bhatkal child kidnapping case, own grandfather involved, purely family personal enmity. Uttara Kannada Superintendent of Police Dr. Suman D. Pennekar on Monday assured the people of Bhatkal that there was no need to panic after the sensational kidnapping case of a kid on Saturday and added that the case was purely of personal enmity.