ಮಗುವನ್ನು ಟಬ್ ನಲ್ಲಿ ಮುಳುಗಿಸಿ ಹತ್ಯೆಗೈದು ನೇಣಿಗೆ ಯತ್ನಿಸಿದ ತಾಯಿ ; ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ ! ರಾಜಧಾನಿಯಲ್ಲಿ ಮತ್ತೊಂದು ಕರಾಳ ಕೃತ್ಯ

23-08-22 12:06 pm       Bangalore Correspondent   ಕರ್ನಾಟಕ

ವಾರದ ಅಂತರದಲ್ಲಿ ಮತ್ತೊಂದು ದುರಂತಕ್ಕೆ ರಾಜಧಾನಿ ಬೆಂಗಳೂರು ಸಾಕ್ಷಿಯಾಗಿದೆ. ನೀರಿನ ಟಬ್ ನಲ್ಲಿ ಹಾಲುಗಲ್ಲದ‌‌ ಮಗುವನ್ನ ಮುಳುಗಿಸಿ ಹತ್ಯೆಗೈದ ತಾಯಿ ಆತ್ಮಹತ್ಯೆಗೆ ಯತ್ನಿಸಿ ಕೋಮಾ ಸ್ಥಿತಿಗೆ ಹೋಗಿರುವ ಘಟನೆ ಬೆಳಕಿಗೆ ಬಂದಿದೆ. 

ಬೆಂಗಳೂರು, ಆಗಸ್ಟ್ 23 : ವಾರದ ಅಂತರದಲ್ಲಿ ಮತ್ತೊಂದು ದುರಂತಕ್ಕೆ ರಾಜಧಾನಿ ಬೆಂಗಳೂರು ಸಾಕ್ಷಿಯಾಗಿದೆ. ನೀರಿನ ಟಬ್ ನಲ್ಲಿ ಹಾಲುಗಲ್ಲದ‌‌ ಮಗುವನ್ನ ಮುಳುಗಿಸಿ ಹತ್ಯೆಗೈದ ತಾಯಿ ಆತ್ಮಹತ್ಯೆಗೆ ಯತ್ನಿಸಿ ಕೋಮಾ ಸ್ಥಿತಿಗೆ ಹೋಗಿರುವ ಘಟನೆ ಬೆಳಕಿಗೆ ಬಂದಿದೆ. 

ಸೋಮವಾರ ಬೆಳಗ್ಗೆ ಎಚ್ ಎಎಲ್ ಠಾಣೆ ವ್ಯಾಪ್ತಿಯ ವಿಭೂತಿಪುರ ಎಂಬಲ್ಲಿ ಘಟನೆ ನಡೆದಿದೆ. ಮೂರು ವರ್ಷದ ಮಗು ಸಂಯುಕ್ತಾಳನ್ನ ನೀರಿನ ಟಬ್ ನಲ್ಲಿ ಮುಳುಗಿಸಿ ಸಾಯಿಸಿದ ತಾಯಿ ಗಾಯತ್ರಿದೇವಿ ಬಳಿಕ ಫ್ಯಾನಿಗೆ ನೇಣು ಹಾಕ್ಕೊಂಡಿದ್ದಾಳೆ.‌ ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ತಮಿಳುನಾಡು ಮೂಲದ ನರೇಂದ್ರನ್ ಮತ್ತು ಗಾಯತ್ರಿದೇವಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ನರೇಂದ್ರನ್ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಿಕೊಂಡಿದ್ದರು.‌ ಕುಟುಂಬ ಕಲಹದಿಂದ 20 ದಿನಗಳ ಹಿಂದೆ ನರೇಂದ್ರನ್ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಮಿಳುನಾಡಿನ ಈರೋಡ್ ನಲ್ಲಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು. 

ಇದರ ಕಾರ್ಯ ನಿಮಿತ್ತ ಊರಿಗೆ ಹೋಗಿದ್ದ ನರೇಂದ್ರನ್, ನಿನ್ನೆ ಬೆಳಗ್ಗೆ ವಾಪಸ್ ಆಗಿದ್ದರು.‌ ಮನೆಯಲ್ಲಿ ಮಗು ಮತ್ತು ಪತ್ನಿ ಮಾತ್ರ ಇದ್ದರು. ಮನೆಗೆ ಬಂದು ಎಷ್ಟೇ ಮನೆ ಬಾಗಿಲು ತಟ್ಟಿದರೂ ಬಾಗಿಲು ತೆರೆಯದ್ದರಿಂದ ಆತಂಕಗೊಂಡು ಡೋರ್ ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮೂರುವರೆ ವರ್ಷದ ಮಗುವನ್ನ ನೀರಿನ ಬಕೆಟ್ ನಲ್ಲಿ‌ ಮುಳುಗಿಸಿ ಹತ್ಯೆ ಮಾಡಿದ್ದ ಪತ್ನಿ ಗಾಯತ್ರಿ ಫ್ಯಾನಿಗೆ ನೇಣು ಬಿಗಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಗಾಯತ್ರಿಯನ್ನು ಬಳಿಕ ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. 

ಮನೆಯಲ್ಲಿ ಡೆತ್ ನೋಟ್ ಪತ್ತೆ 

ಮಗುವನ್ನ ಹತ್ಯೆ ಮಾಡೋದಕ್ಕೂ ಮುನ್ನ ಗಾಯತ್ರಿದೇವಿ ಡೆತ್ ನೋಟ್ ಬರೆದಿಟ್ಟಿದ್ದಾಳೆ. ತನಗೆ ಬಂದಿರುವ ಸಂಕಷ್ಟವನ್ನ‌ ನಿಭಾಯಿಸುವ ಶಕ್ತಿ ನನ್ನಲ್ಲಿ‌ ಇಲ್ಲ. ನಾನು ಸತ್ತರೆ ಮಗುವನ್ನು ನೋಡಿಕೊಳ್ಳಲು ಯಾರು ಇಲ್ಲ.. ಹೀಗಾಗಿ ಮಗುವನ್ನ ಸಾಯಿಸಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ. ಹೆಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bangalore Mother kills baby by drowning it in the water filled bucket, attempts suicide. Mother is said to be in comma.