ಬಿಜೆಪಿ ವಿರುದ್ಧ ಸಿಡಿದು ನಿಂತ ಪಂಚಮಸಾಲಿ ಲಿಂಗಾಯತರು ; ಮೀಸಲು ನೀಡದೇ ಇದ್ದರೆ ಬೃಹತ್ ಪ್ರತಿಭಟನೆ ಎಚ್ಚರಿಕೆ, ಮುಖ್ಯಮಂತ್ರಿ ತವರಲ್ಲೇ 25 ಲಕ್ಷ ಜನ ಸೇರಿಸಲು ಸಿದ್ಧತೆ

24-08-22 08:34 pm       Bangalore Correspondent   ಕರ್ನಾಟಕ

ಮೀಸಲಾತಿ ಬಗ್ಗೆ ನಿರ್ಧಾರ ಪ್ರಕಟಿಸದೇ ಇದ್ದರೆ, ಸೆಪ್ಟಂಬರ್ 26ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರ ಶಿಗ್ಗಾಂವಿಯಲ್ಲೇ ಬೃಹತ್ ಪ್ರತಿಭಟನೆ ನಡೆಸುವುದಾಗಿ ಲಿಂಗಾಯತ ಸಮಾಜದ ಸ್ವಾಮೀಜಿಗಳು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು, ಆಗಸ್ಟ್ 24: ಚುನಾವಣೆಗೆ ಕೆಲವೇ ತಿಂಗಳಿರುವಾಗ ಪಂಚಮಸಾಲಿ ಲಿಂಗಾಯತರು ಮೀಸಲಾತಿ ಆಗ್ರಹಿಸಿ ಪ್ರತಿಭಟನೆಗಿಳಿದಿರುವುದು ಆಡಳಿತಾರೂಢ ಬಿಜೆಪಿಯನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ. ಮೀಸಲಾತಿ ಬಗ್ಗೆ ನಿರ್ಧಾರ ಪ್ರಕಟಿಸದೇ ಇದ್ದರೆ, ಸೆಪ್ಟಂಬರ್ 26ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರ ಶಿಗ್ಗಾಂವಿಯಲ್ಲೇ ಬೃಹತ್ ಪ್ರತಿಭಟನೆ ನಡೆಸುವುದಾಗಿ ಲಿಂಗಾಯತ ಸಮಾಜದ ಸ್ವಾಮೀಜಿಗಳು ಎಚ್ಚರಿಕೆ ನೀಡಿದ್ದಾರೆ.

ಪಂಚಮಸಾಲಿ ಲಿಂಗಾಯತರ ಕೂಡಲಸಂಗಮ ಮಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬಿಜೆಪಿ ಸರಕಾರಕ್ಕೆ ಬಹಿರಂಗ ಎಚ್ಚರಿಕೆ ನೀಡಿದ್ದು, ಪಂಚಮಸಾಲಿ ಸಮುದಾಯವನ್ನು 2ಎ ಮೀಸಲು ವರ್ಗಕ್ಕೆ ಸೇರಿಸದೇ ಇದ್ದರೆ ಶಿವಮೊಗ್ಗದಿಂದಲೇ ಪ್ರತಿಭಟನೆ ಆರಂಭಿಸುವುದಾಗಿ ಹೇಳಿದ್ದಾರೆ. ಲಿಂಗಾಯತರು ಮೊದಲಿನಿಂದಲೂ ಬಿಜೆಪಿಯ ಪ್ರಬಲ ಮತಬ್ಯಾಂಕ್ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ, ಈ ಬಾರಿ ಬಿಜೆಪಿ ಸರಕಾರದ ಮುಂದೆ ತಮಗೆ ಹಿಂದುಳಿದ ವರ್ಗದ ಮೀಸಲಾತಿ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಕಳೆದ ಅಕ್ಟೋಬರ್ 23ರಂದು ಬೆಂಗಳೂರಿನಲ್ಲಿ ಪಂಚಮಸಾಲಿ ಪರವಾಗಿ ಉತ್ತರ ಕರ್ನಾಟಕ ಭಾಗದ ಸ್ವಾಮೀಜಿಗಳು ಪ್ರತಿಭಟನೆ ನಡೆಸಿದ್ದರು. ಸ್ವಾಮೀಜಿಗಳನ್ನು ಬಳಿಕ ಮಾತುಕತೆ ಮೂಲಕ ಪ್ರತಿಭಟನೆ ಹಿಂಪಡೆಯುವಂತೆ ಮಾಡಲು ಬಿಜೆಪಿ ನಾಯಕರು ಯಶಸ್ವಿಯಾಗಿದ್ದರು. ಆದರೆ ಈ ಬಾರಿ ಹಾವೇರಿ ಜಿಲ್ಲೆಯಲ್ಲಿ ಮಧ್ಯ ಕರ್ನಾಟಕದ 25 ಲಕ್ಷಕ್ಕೂ ಹೆಚ್ಚು ಜನರನ್ನು ಪ್ರತಿಭಟನೆಯಲ್ಲಿ ಸೇರಿಸುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

CM BS Yediyurappa urges PM Narendra Modi to supply 5 lakh vaccine doses  daily

Karnataka Min Murugesh Nirani visits Delhi amid CM Yediyurappa's exit  rumours | The News Minute

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪಂಚಮಸಾಲಿಗಳಿಗೆ ಮೀಸಲಾತಿ ನೀಡುವ ಬಗ್ಗೆ ಭರವಸೆ ನೀಡಿದ್ದರು. ಸಚಿವ ಮುರುಗೇಶ್ ನಿರಾಣಿಯವರು ಮುಂಚೂಣಿಯಲ್ಲಿ ನಿಂತು ಪಂಚಮಸಾಲಿ ಸಮುದಾಯಕ್ಕೆ ಪ್ರತ್ಯೇಕ ಮಠ ಕಟ್ಟುವುದಕ್ಕೂ ಬೆಂಬಲ ನೀಡಿದ್ದರು. ರಾಜ್ಯ ಸರಕಾರ ಮೀಸಲು ನೀಡುವ ಬಗ್ಗೆ ಭರವಸೆ ಕೊಟ್ಟಿದ್ದರೂ ಅದನ್ನು ಈಡೇರಿಸದೇ ಇರುವುದು ಈಗ ಪೀಕಲಾಟಕ್ಕೆ ಸಿಲುಕುವಂತಾಗಿದೆ. ನಿರಾಣಿ, ಸಿಸಿ ಪಾಟೀಲ್, ಮುಖ್ಯಮಂತ್ರಿ ಬೊಮ್ಮಾಯಿ ಸ್ವಾಮೀಜಿಯವರನ್ನು ಭೇಟಿಯಾಗಿ ಮನವೊಲಿಕೆಗೆ ಮುಂದಾಗಿದ್ದರೂ, ಪ್ರತಿಭಟನೆ ಹಿಂಪಡೆಯಲ್ಲ ಎಂದು ಸ್ವಾಮೀಜಿ ಗುಡುಗಿದ್ದಾರೆ. ಇದೇ ವೇಳೆ, ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಲಿಂಗಾಯತರು ಮುನಿಸಿಕೊಂಡರೆ ಚುನಾವಣೆಯಲ್ಲಿ ತಮಗೆ ಲಾಭವಾದೀತು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಹಾಗಾಗಿ, ಈ ಬಗ್ಗೆ ಅಳೆದು ತೂಗಿ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ಭರವಸೆ ಕೊಟ್ಟು ಮಾತು ನಡೆಸಿಕೊಳ್ಳದೇ ಇರುವುದು ಈಗ ಪಕ್ಷಕ್ಕೇ ಮುಳುವಾಗಿ ಪರಿಣಮಿಸಿದೆ.

Panchamasali Lingayat seer all set for massive protest for the classification of the sect from 3B to 2A in the OBC list.