ಬೆಂಗಳೂರಿನಲ್ಲಿ ರಣಮಳೆ ; ರಸ್ತೆಗಳೇ ಮಾಯ, ತಗ್ಗು ಪ್ರದೇಶಗಳು ಜಲಮಯ, ಸವಾರರು ಹೈರಾಣ ! 

30-08-22 07:04 pm       Bangalore Correspondent   ಕರ್ನಾಟಕ

ಬೆಂಗಳೂರಿನ ಹಲವು ಭಾಗಗಳಲ್ಲಿ ಸೋಮವಾರ ರಾತ್ರಿಯಿಡೀ ಸುರಿದ ಮಳೆಗೆ ನಗರದ ಪ್ರಮುಖ ರಸ್ತೆಗಳು ಮುಳುಗಡೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. 

ಬೆಂಗಳೂರು, ಆ 30: ಬೆಂಗಳೂರಿನ ಹಲವು ಭಾಗಗಳಲ್ಲಿ ಸೋಮವಾರ ರಾತ್ರಿಯಿಡೀ ಸುರಿದ ಮಳೆಗೆ ನಗರದ ಪ್ರಮುಖ ರಸ್ತೆಗಳು ಮುಳುಗಡೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. 

ಭಾರಿ ಮಳೆ ಎಚ್ಚರಿಕೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

ನಗರದ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಜನರು ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು. ನಗರದ ಬೆಳ್ಳಂದೂರು, ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್, ಹೊರ ವರ್ತುಲ ರಸ್ತೆ ಮತ್ತು ಬಿಇಎಂಎಲ್ ಲೇಔಟ್‌ ಪ್ರದೇಶ ಮಳೆಯಿಂದಾಗಿ ಹೆಚ್ಚಿನ ತೊಂದರೆ ಅನುಭವಿಸಿದೆ.

ಬೆಳ್ಳಂದೂರು ಹೊರ ವರ್ತುಲ ರಸ್ತೆಯ ಇಕೋ ಸ್ಪೇಸ್ ಬಳಿ ಮಳೆ ನೀರು ತುಂಬಿ ರಸ್ತೆಗೆ ಹರಿಯಿತು. ಪರಿಣಾಮವಾಗಿ, ಬೆಂಗಳೂರಿನ ಹೊರವಲಯದಲ್ಲಿರುವ ಟೆಕ್ ಪಾರ್ಕ್‌ಗಳಿಗೆ ನಗರವನ್ನು ಸಂಪರ್ಕಿಸುವ ಹೊರ ವರ್ತುಲ ರಸ್ತೆ ಮುಳುಗಡೆಯಾಗಿದ್ದು ಭಾರಿ ಟ್ರಾಫಿಕ್ ಉಂಟಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಟ್ರಾಫಿಕ್ ಕಡಿಮೆ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಆಗಸ್ಟ್ 30ರಂದು ಕೂಡ ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.

ಎಚ್‌ಎಸ್‌ಆರ್‌ ಕಡೆಗೆ ಸಾಗುವ ಮಾರ್ಗದಲ್ಲಿ ಎಕೋ ವರ್ಲ್ಡ್‌ ಬಳಿ ಭಾರಿ ನೀರು ತುಂಬಿಕೊಂಡಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು, ಎಕೋವರ್ಲ್ಡ್‌ ಕ್ಯಾಂಪಸ್ ಒಳಗಿನಿಂದಲೇ ಸರ್ಜಾಪುರ ಮುಖ್ಯರಸ್ತೆಗೆ ಹೋಗಬಹುದು ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಎಕೋ ವರ್ಲ್ಡ್ ಬಳಿ ಭಾರಿ ನೀರು ನಿಂತಿದ್ದು, ಇಂದು ಟ್ರಾಫಿಕ್ ಜಾಸ್ತಿಯಾಗುತ್ತಿದೆ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಟ್ರಾಫಿಕ್ ತೆರವುಗೊಳಿಸಲು ಪ್ರಯತ್ನಿಸುತ್ತಿದ್ದಾರೆ, ಸಾಧ್ಯವಾದರೆ ದಯವಿಟ್ಟು ಈ ಮಾರ್ಗವನ್ನು ತಪ್ಪಿಸಿ ಎಂದು ಎಚ್‌ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಪ್ರಕಾರ ಬೆಂಗಳೂರು ನಗರದಲ್ಲಿ ಆಗಸ್ಟ್ 29ರಿಂದ ಸೋಮವಾರ ಬೆಳಿಗ್ಗೆ 8.30ರಿಂದ ಆಗಸ್ಟ್ 30 ಎ ಬೆಳಿಗ್ಗೆ 8.30 ರರವರೆಗೆ 24 ಗಂಟೆಗಳಲ್ಲಿ ಬೆಂಗಳೂರು ನಗರ ಭಾಗದಲ್ಲಿ 109 ಮಿಲಿ ಮೀಟರ್ ಮಳೆಯಾಗಿದೆ ಎಂದು ಹೇಳಿದೆ.

ರಾಜಾಜಿನಗರ, ವಿಜಯನಗರ, ಲಗ್ಗೆರೆ, ಮೆಜೆಸ್ಟಿಕ್, ಕಾರ್ಪೊರೇಷನ್ ಸರ್ಕಲ್, ಮಲ್ಲೇಶ್ವರಂ, ನಾಯಂಡಹಳ್ಳಿ, ಶ್ರೀರಾಂಪುರ, ಓಕಳೀಪುರಂ, ಎಚ್‌ಎಎಲ್, ಎಂಜಿ ರಸ್ತೆ, ಶಾಂತಿ ನಗರ ಸೇರಿದಂತೆ ನಗರದ ಬಹುತೇಕ ಕಡೆ ಭಾರಿ ಮಳೆ ಸುರಿದಿದೆ.

ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತ ;

ಸೋಮವಾರ ಬೆಂಗಳೂರು-ಮೈಸೂರು ಹೆದ್ದಾರಿ ಹಲವು ಭಾಗಗಳಲ್ಲಿ ಸಂಪೂರ್ಣ ಜಲಾವೃತವಾಗಿದ್ದು, ಪರ್ಯಾಯ ಮಾರ್ಗ ಬಳಸುವಂತೆ ಮನವಿ ಮಾಡಲಾಗಿದೆ. ರಾಮನಗರದ ಬಳಿ ಅಂಡರ್ ಪಾಸ್‌ನಲ್ಲಿ ನೀರು ನಿಂತು ಹಲವು ಲಾರಿ, ಬಸ್ಸು, ಕಾರುಗಳು ಮುಳುಗಡೆಯಾಗಿದ್ದವು. ರಸ್ತೆ ಜಲಾವೃತಗೊಂಡಿದ್ದರಿಂದ ಕನಕಪುರ ರಸ್ತೆಯತ್ತ ಸಂಚಾರ ಮಾರ್ಗ ಬದಲಿಸಲಾಗಿದೆ.

ಹಬ್ಬದ ಸಂಭ್ರಮ ಕಿತ್ತುಕೊಂಡ ಮಳೆ ; 

ಎಡೆಬಿಡದೆ ಸುರಿಯುತ್ತಿರುವ ಮಳೆ ರಾಜ್ಯದಲ್ಲಿ ಜನರ ಹಬ್ಬದ ವಾತಾವರಣವನ್ನೇ ಕಸಿದುಕೊಂಡಿದೆ. ಮಂಗಳವಾರ ಗೌರಿ ಹಬ್ಬ ಮತ್ತು ಬುಧವಾರ ವಿನಾಯಕ ಚತುರ್ಥಿಯನ್ನು ಬೆಂಗಳೂರು ಸೇರಿ ನಾಡಿನಾದ್ಯಂತ ಆಚರಣೆ ಮಾಡಲಾಗುತ್ತಿದೆ.

ಆದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಜನರಲ್ಲಿ ಹಬ್ಬದ ಸಂಭ್ರಮ ಮಾಯವಾಗಿದೆ. ಗಣೇಶನ ಮಾರಾಟ ಮಾಡುವವರ ಗೋಳಾಟವಂತೂ ಹೇಳತೀರದಾಗಿದೆ. ರಾಜ್ಯಾದ್ಯಂತ ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಜಲಾವೃತವಾಗಿದೆ.

Residents of the city woke up to heavy rains on Monday morning and after some respite during the day, showers lashed the city in the evening too. Residents faced heavy traffic snarls in various parts of the city during peak hours. Meanwhile, office goers had to face inundated and damaged roads leading to massive traffic jams in several parts of the city.