ಸಚಿವ ಆನಂದ್ ಸಿಂಗ್ ಸುಟ್ಟು ಹಾಕುವ ಬೆದರಿಕೆ ; ಎಸ್ಪಿ ಕಚೇರಿ ಮುಂದೆ ಪೆಟ್ರೋಲ್ ಸುರಿದುಕೊಂಡ 9 ಜನರ ಕುಟುಂಬ ! 

30-08-22 09:23 pm       HK News Desk   ಕರ್ನಾಟಕ

ಸಚಿವ ಆನಂದ್ ಸಿಂಗ್ ತಮ್ಮನ್ನು ಬೆಂಕಿ ಹಚ್ಚಿ ಸುಡುವುದಾಗಿ ಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಿದ ಕುಟುಂಬವೊಂದು ತಾವೇ ಪೆಟ್ರೋಲ್ ಸುರಿದು ಸಾಮೂಹಿಕ ಆತ್ಮಹತ್ಯೆಗೆ ಮುಂದಾದ ಘಟನೆ ಹೊಸಪೇಟೆಯಲ್ಲಿ ನಡೆದಿದೆ. 

ಬಳ್ಳಾರಿ, ಆಗಸ್ಟ್ 30 : ಸಚಿವ ಆನಂದ್ ಸಿಂಗ್ ತಮ್ಮನ್ನು ಬೆಂಕಿ ಹಚ್ಚಿ ಸುಡುವುದಾಗಿ ಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಿದ ಕುಟುಂಬವೊಂದು ತಾವೇ ಪೆಟ್ರೋಲ್ ಸುರಿದು ಸಾಮೂಹಿಕ ಆತ್ಮಹತ್ಯೆಗೆ ಮುಂದಾದ ಘಟನೆ ಹೊಸಪೇಟೆಯಲ್ಲಿ ನಡೆದಿದೆ. 

ಹೊಸಪೇಟೆಯ 6ನೇ ವಾರ್ಡ್‌ ನಿವಾಸಿ ಡಿ.ಪೋಲಪ್ಪ ಮತ್ತು ಒಂಬತ್ತು ಜನರಿದ್ದ ಕುಟುಂಬದ ಸದಸ್ಯರು ವಿಜಯನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ತಾವೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಪ್ರತಿಭಟನೆ ನಡೆಸಿದರು. ಒಂದೇ ಕುಟುಂಬದ 9 ಜನರು ಪೆಟ್ರೋಲ್ ಸುರಿದುಕೊಂಡು ಪ್ರತಿಭಟನೆಗೆ ಮುಂದಾಗಿದ್ದು ಪೊಲೀಸರು ಒಂದು ಕ್ಷಣ ಆತಂಕಕ್ಕೆ ಈಡಾಗಿದ್ದರು. 

ಸಚಿವ ಆನಂದ್ ಸಿಂಗ್ ಅವರು ಬೆಂಕಿ ಹಾಕಿ ನಿಮ್ಮ ಮನೆ ಸುಡ್ತೀನಿ ಅಂತ ಬೆದರಿಸಿದ್ದಾರೆ. ಹೀಗಾಗಿ ನಾವೇ ಪೆಟ್ರೋಲ್ ಸುರಿದುಕೊಂಡಿದ್ದೇವೆ. ಸಚಿವ ಆನಂದ್ ಸಿಂಗ್ ಬಂದು ಬೆಂಕಿ ಹಚ್ಚಲಿ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿ.ಪೋಲಪ್ಪ ಹೊಸಪೇಟೆಯ 6ನೇ ವಾರ್ಡಿನ ಸುಣ್ಣದ ಬಟ್ಟಿ ಪ್ರದೇಶದ ನಿವಾಸಿಯಾಗಿದ್ದಾರೆ. ನೀವಿರೋದು ನಮ್ಮ ಜಾಗ. ಕೂಡಲೇ ಖಾಲಿ ಮಾಡಬೇಕು, ಇಲ್ಲವಾದಲ್ಲಿ ಬೆಂಕಿ ಹಚ್ಚಿ ಸುಡ್ತೀನಿ ಅಂತ ಆನಂದ್ ಸಿಂಗ್ ಬೆದರಿಕೆ ಒಡ್ಡಿದ್ದಾರೆಂದು ಪೋಲಪ್ಪ ಆರೋಪಿಸಿದ್ದಾರೆ. ಮಡಿವಾಳ ಸಮಾಜಕ್ಕೆ ಸೇರಿದ ಭೂಮಿ ಒತ್ತವರಿ ಮಾಡಿರುವ ಆರೋಪ ಪೋಲಪ್ಪ ಅವರ ಮೇಲಿದೆ. ಜಾಗ ತೆರವು ಮಾಡುವಂತೆ ಪೋಲಪ್ಪ ಅವರ ಮೇಲೆ ಒತ್ತಡ ಹಾಕಲಾಗಿದೆ. ಹೀಗಾಗಿ ಪೋಲಪ್ಪ ತಮ್ಮ ಕುಟುಂಬವನ್ನು ಕರ್ಕೊಂಡು ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪೊಲೀಸರು ಬಳಿಕ ಆತ್ಮಹತ್ಯೆಗೆ ಯತ್ನಿಸಿದವರನ್ನು ಆಸ್ಪತ್ರೆಗೆ ದಾಖಲಿಸಿ ವಿಚಾರಣೆ ನಡೆಸಿದ್ದಾರೆ.

Minister AnandSingh threatens family of setting them on fire, family of 9 pour petrol try to commit suicide in Bellari.