ಪಾಳುಬಾವಿಯಲ್ಲಿ ನವಜಾತ ಶಿಶು ಪತ್ತೆ ; 30 ಅಡಿ ಆಳಕ್ಕೆ ಬಿದ್ದರೂ ಪವಾಡಸದೃಶ ಬದುಕುಳಿದ ಮಗು ! 

18-09-22 12:10 pm       HK News Desk   ಕರ್ನಾಟಕ

ನವಜಾತ ಶಿಶುವೊಂದು ಪಾಳು ಬಾವಿಯಲ್ಲಿ ಪತ್ತೆಯಾಗಿದ್ದು 30 ಅಡಿ ಆಳದ ಬಾವಿಗೆ ಬಿದ್ದರೂ ಪವಾಡ ಸದೃಶ ಬದುಕುಳಿದ ಘಟನೆ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ನಡೆದಿದೆ. 

ಮಂಡ್ಯ, ಸೆ.17 : ನವಜಾತ ಶಿಶುವೊಂದು ಪಾಳು ಬಾವಿಯಲ್ಲಿ ಪತ್ತೆಯಾಗಿದ್ದು 30 ಅಡಿ ಆಳದ ಬಾವಿಗೆ ಬಿದ್ದರೂ ಪವಾಡ ಸದೃಶ ಬದುಕುಳಿದ ಘಟನೆ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ನಡೆದಿದೆ. 

ರಸ್ತೆ ಬದಿಯ ಪಾಳುಬಾವಿಯಲ್ಲಿ ಅಳುತ್ತಿದ್ದ ಮಗುವಿನ ಶಬ್ದ ಕೇಳಿ ರೈತ ಮಹಿಳೆಯರು ಬಂದು ಇಣುಕಿದಾಗ ಬಾವಿಯಲ್ಲಿ ಮಗು ಕಂಡುಬಂದಿದೆ. ‌ತಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.‌ ಮಗುವನ್ನು ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಕಸ ಕಡ್ಡಿಯೇ ತುಂಬಿದ್ದ ಪಾಳುಬಾವಿಯಲ್ಲಿ ಬಿದ್ದಿದ್ದರೂ ಪವಾಡ ಸದೃಶ ರೀತಿಯಲ್ಲಿ ಶಿಶು ಬದುಕುಳಿದಿದೆ. ಆಗ ತಾನೇ ಜನಿಸಿರುವ ಗಂಡು ಮಗು ಇದಾಗಿದ್ದು ಅದನ್ನು ಪಾಳು ಬಾವಿಗೆ ಎಸೆದವರು ಯಾರು ಎಂಬ ಬಗ್ಗೆ ತನಿಖೆ ಆರಂಭಗೊಂಡಿದೆ. ಶಿಶುವಿನ ಮುಖ ಮತ್ತು ದೇಹದ ಕೆಲವು ಭಾಗಗಳಲ್ಲಿ ಇರುವೆ ಕಚ್ಚಿರುವ ಗುರುತುಗಳಿವೆ. ಬಾವಿಯಲ್ಲಿ ಪ್ಲಾಸ್ಟಿಕ್, ಪೇಪರ್ ಇನ್ನಿತರ ಕಸಗಳನ್ನು ಎಸೆಯಲಾಗಿದ್ದು ಹೀಗಾಗಿ ಕೆಳಕ್ಕೆ ಬಿದ್ದ ಮಗುವಿಗೆ ಹೆಚ್ಚೇನು ಗಾಯಗಳಾಗದೆ ಬದುಕುಳಿದಿದೆ. ಬೆಳಗ್ಗಿನ ಹೊತ್ತಿಗೆ ಮಗುವನ್ನು ಬಾವಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೃತ್ಯ ಎಸಗಿದವರ ಬಗ್ಗೆ ಹುಡುಕಾಟ ನಡೆದಿದೆ.

Newborn baby thrown into 30 feet well in Mandya, luckily survives.