ಬಡಗುತಿಟ್ಟಿನ ಯಕ್ಷಗಾನಕ್ಕೆ ಮಾರುಹೋದ ಆರೋಗ್ಯ ಸಚಿವ, ತಾನೇ ಪೋಷಾಕು ಧರಿಸಿ ಪೋಸು ! 

12-10-22 04:44 pm       HK News Desk   ಕರ್ನಾಟಕ

​​​​​ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ‌ ಬೆಳೆಸಿದ್ದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ರಾತ್ರಿ ವೇಳೆ ಭಟ್ಕಳದಲ್ಲಿ  ತಂಗಿ ಯಕ್ಷಗಾನ ವೀಕ್ಷಿಸಿದ್ದಲ್ಲದೇ, ಯಕ್ಷಗಾನ ಪೋಷಾಕು ಧರಿಸಿ ಮಿಂಚಿದ್ದಾರೆ.

ಕಾರವಾರ, ಅ.12 : ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ‌ ಬೆಳೆಸಿದ್ದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ರಾತ್ರಿ ವೇಳೆ ಭಟ್ಕಳದಲ್ಲಿ  ತಂಗಿ ಯಕ್ಷಗಾನ ವೀಕ್ಷಿಸಿದ್ದಲ್ಲದೇ, ಯಕ್ಷಗಾನ ಪೋಷಾಕು ಧರಿಸಿ ಮಿಂಚಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ಸುಧಾಕರ್ ಗೆ ಯಕ್ಷಗಾನ ಹೊಸತು.‌ ಹೀಗಾಗಿ ಕರಾವಳಿಯ ಗಂಡುಕಲೆಯ ಬಗ್ಗೆ ಮೆಚ್ಚುಗೆ ತೋರಿದ್ದಲ್ಲದೆ ತಾನೇ ವೇಷ ಧರಿಸಿ ವರಸೆ ನೋಡಿದ್ದಾರೆ. 

ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ವೀಕ್ಷಣೆಗಾಗಿ ಆರೋಗ್ಯ ಸಚಿವ ಡಾ.‌‌ ಕೆ. ಸುಧಾಕರ್ ಮತ್ತು ಅಧಿಕಾರಿಗಳು ಕಾರವಾರ, ಕುಮಟಾ ಹಾಗೂ ಭಟ್ಕಳಕ್ಕೆ ಭೇಟಿ ನೀಡಿದ್ದರು. ಭಟ್ಕಳದಲ್ಲಿ ಸಮುದಾಯ ಆಸ್ಪತ್ರೆಯ ವೀಕ್ಷಣೆ ಬಳಿಕ ನೇರವಾಗಿ ಭಟ್ಕಳ ಶಾಸಕ ಸುನಿಲ್ ನಾಯ್ಕ ಅವರ ಫಾರ್ಮ್‌ ಹೌಸ್‌ಗೆ ತೆರಳಿದ್ದರು. ಸಚಿವರಿಗೆ ಭರ್ಜರಿ ಸ್ವಾಗತ ನೀಡಿದ್ದ ಸುನಿಲ್ ನಾಯ್ಕ, ಸಚಿವರಿಗೆಂದೇ ಕರಾವಳಿಯ ಗಂಡು ಕಲೆಯಾದ ಯಕ್ಷಗಾನ ಆಯೋಜಿಸಿದ್ದರು. 

ರಾತ್ರಿ ವೇಳೆ ಬಿರುಸಾದ ಮಳೆಯ ನಡುವೆಯೂ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನಿಲ್ ನಾಯ್ಕರ ಜೊತೆ ಬಡಗುತಿಟ್ಟು ಶೈಲಿಯಲ್ಲಿ "ಭೀಷ್ಮ ವಿಜಯ" ಯಕ್ಷಗಾನ ನೋಡಿದ ಸಚಿವರು ಸಂತೋಷಪಟ್ಟರು. ಯಕ್ಷಗಾನ ನೋಡಿದ ಬಳಿಕ ಕಲಾವಿದರ ಪೋಷಾಕು ಧರಿಸಿ ಸಚಿವರು ಖುಷಿಪಟ್ಟರು.‌ ಕಲಾವಿದರ ಅನುಭವ ಪಡೆದುಕೊಂಡಿದ್ದಲ್ಲದೆ, ಯಕ್ಷಗಾನ ಧಿರಿಸಿನಲ್ಲೇ ಸಚಿವ ಡಾ. ಸುಧಾಕರ್ ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ವೇದಿಕೆಯಲ್ಲಿ ಬಡಗುತಿಟ್ಟು ಶೈಲಿಯ ಪೋಷಾಕು ಧರಿಸಿ ಮಿಂಚಿದ ಆರೋಗ್ಯ ಸಚಿವ ಡಾ.‌ಸುಧಾಕರ್ ಅವರನ್ನು ಕಂಡು ಪಕ್ಷದ ಕಾರ್ಯಕರ್ತರು ಕೊಂಡಾಡಿದರಲ್ಲದೇ, ಹಲವರು ಸಚಿವರ ಜೊತೆ ಫೋಟೊ ಕ್ಲಿಕ್ಕಿಸಿಕೊಂಡರು.‌

Karwar Minister Sudhakar in Yakshagana costume.