ಗಂಟೆಗಟ್ಟಲೆ ಕಾದರೂ ಸಿಗದ ಹಾಸನಾಂಬೆ ದರ್ಶನ ; ಮೈಸೂರಿನ ಶಾಸಕ ನಾಗೇಂದ್ರ ವಾಪಸ್, ಫೋನೆತ್ತದೆ ನಿರ್ಲಕ್ಷಿಸಿದ ಪ್ರೀತಂ ಗೌಡ ವಿರುದ್ಧ ಆಕ್ರೋಶ 

23-10-22 10:49 pm       HK News Desk   ಕರ್ನಾಟಕ

ಹಾಸನಾಂಬೆ ದರ್ಶನಕ್ಕೆ ಬಂದ ಮೈಸೂರು ಜಿಲ್ಲೆಯ ಚಾಮರಾಜನಗರ ಕ್ಷೇತ್ರದ ಶಾಸಕ ನಾಗೇಂದ್ರ, ಭಕ್ತರ ದಟ್ಟಣೆಯಿಂದಾಗಿ ಒಂದು ಗಂಟೆ ಕಾದರೂ ದರ್ಶನ ಸಾಧ್ಯವಾಗದೆ, ವಾಪಸ್ ಹೋದ ಘಟನೆ ನಡೆದಿದ್ದು ಈ ವೇಳೆ ಸ್ಥಳೀಯ ಶಾಸಕ ಪ್ರೀತಂ ಗೌಡ ಫೋನೆತ್ತದ ಕಾರಣ ಅವರ ಆಕ್ರೋಶ ತೋರಿದ ಪ್ರಸಂಗವೂ ನಡೆಯಿತು. 

ಹಾಸನ, ಅ.23 : ಹಾಸನಾಂಬೆ ದರ್ಶನಕ್ಕೆ ಬಂದ ಮೈಸೂರು ಜಿಲ್ಲೆಯ ಚಾಮರಾಜನಗರ ಕ್ಷೇತ್ರದ ಶಾಸಕ ನಾಗೇಂದ್ರ, ಭಕ್ತರ ದಟ್ಟಣೆಯಿಂದಾಗಿ ಒಂದು ಗಂಟೆ ಕಾದರೂ ದರ್ಶನ ಸಾಧ್ಯವಾಗದೆ, ವಾಪಸ್ ಹೋದ ಘಟನೆ ನಡೆದಿದ್ದು ಈ ವೇಳೆ ಸ್ಥಳೀಯ ಶಾಸಕ ಪ್ರೀತಂ ಗೌಡ ಫೋನೆತ್ತದ ಕಾರಣ ಅವರ ಆಕ್ರೋಶ ತೋರಿದ ಪ್ರಸಂಗವೂ ನಡೆಯಿತು. 

ನಾಗೇಂದ್ರ ಭಾನುವಾರ ಮಧ್ಯಾಹ್ನ ದೇಗುಲಕ್ಕೆ ಬಂದಿದ್ದು ಕಾದು ಕಾದು ಸುಸ್ತಾಗಿ ವಾಪಾಸ್ ಹೋಗಿದ್ದಾರೆ.‌ ವಾಪಸ್ ತೆರಳುವ ವೇಳೆ ಬಿಜೆಪಿ ಕಾರ್ಯಕರ್ತರ ಎದುರೇ ಶಾಸಕ ಪ್ರೀತಂಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ‌ ಎಂ.ಎಲ್.ಎ ಈ ಮಟ್ಟಕ್ಕೆ ನಡೆದುಕೊಳ್ತಾನಲ್ಲಾ.. ಒಂದು ಫೋನ್ ತೆಗೆಯೋ ಸೌಜನ್ಯ ಇಲ್ಲಾ.. ಅವನ‌ ನಿಧಿ ಕೇಳ್ತಾ ಇದೀವಾ, ಆಸ್ರಿ ಕೇಳ್ತಾ ಇದೀವಾ.. ಒಬ್ಬ ಶಾಸಕ ಬಂದ್ರೆ ಇನ್ನೊಬ್ಬ ಶಾಸಕ ಒಂದು ಫೋನ್‌ ತೆಗೆಯೋ ಸೌಜನ್ಯ ಇಲ್ವಾ ಅವನಿಗೆ ಎಂದು ಏಕ ವಚನದಲ್ಲಿ ತೀವ್ರ ಆಕ್ರೋಶ ತೋರಿದ್ದಾರೆ. 

ಈ ದೌಲತ್ತು ಹೆಚ್ಚು ದಿನ ನಡೆಯೋದಿಲ್ಲ ಬಿಡಿ. ನನಗೆ ಗೊತ್ತಿದೆ, ನಾಳೆ ಜಿಲ್ಲಾಡಳಿತದ ಕಡೆಯಿಂದ ಬರ್ತೀನಿ ಬಿಡಿ ಎಂದು ಬೇಸರದಿಂದ ವಾಪಸ್ ಹೋಗಿದ್ದಾರೆ. ಇಷ್ಟೆಲ್ಲಾ ವ್ಯವಸ್ಥೆ ಮಾಡಿ ನಾವು ಬಂದ್ರೆ ಪೊಲೀಸರು ದರ್ಶನಕ್ಕೆ ಅವಕಾಶ ಕೊಡಲ್ಲ.‌ ಶಾಸಕನೊಬ್ಬ ಫೋನ್‌ ರಿಸೀವ್ ಕೂಡ ಮಾಡಲ್ಲ ಎಂದು ಕಿಡಿ ಕಿಡಿಯಾದರು. 

ಇದಕ್ಕೂ ಮುನ್ನ ಹಾಸನ ಹೆಚ್ಛುವರಿ ಎಸ್ಪಿ ವರ್ತನೆಗೆ ಶಾಸಕ ನಾಗೇಂದ್ರ ಕಿಡಿ ಕಾರಿದ್ದಾರೆ.‌ ಶಾಸಕರು ತಮ್ಮ ಬೆಂಬಲಿಗರ ಜೊತೆ ಹಾಸನಾಂಬೆ ದರ್ಶನಕ್ಕೆ ಬಂದಿದ್ದರು.‌ ಈ ವೇಳೆ ಶಾಸಕರು ಹಾಗು ನಿಮ್ಮ ಜೊತೆ ನಾಲ್ಕು ಜನ ಮಾತ್ರ ಬನ್ನಿ ಎಂದು ಎಎಸ್ಪಿ ಎಂ.ಕೆ.ತಮ್ಮಯ್ಯ ಹೇಳಿದ್ದರು.‌ ತಮ್ಮಯ್ಯ ವರ್ತನೆಗೆ ಶಾಸಕ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ಗೃಹ ಇಲಾಖೆಗೆ ಫೋನ್ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ. 

ನೋಡಿ ನಾನೊಬ್ಬ ಶಾಸಕ ಬಂದಿದೀನಿ, ನನ್ನ ಜೊತೆ ಒಳ ಹೋಗೋವಾಗ 25 ಜನ ನಿಂತಿದಾರೆ. ಇವನು ಬಂದು ಶಾಸಕರೆಂದು ಹೇಳಿದ್ರೂ ನೀವೊಬ್ಬರೇ ಬರೋದಾದ್ರೆ ಬನ್ನಿ ಅಂತಾನೆ. ನೋಡಿ ಅವನಿಗೆ ಡೈರೆಕ್ಷನ್ ಕೊಡಿ. ಅವನು ಈ ರೀತಿ ರೂಡಾಗಿ ನಡೆದುಕೊಳ್ತಾನೆ, ಡಿಪಾರ್ಟ್ಮೆಂಟ್ ಗೆ ಅವನು ನಾಲಾಯಕ್ ಎಂದು ಗೃಹ ಸಚಿವರಲ್ಲಿ ಕಿಡಿ ಕಾರಿದ್ದಾರೆ. ಇದೇ ಕಾರಣಕ್ಕೆ ಶಾಸಕ ಪ್ರೀತಂ ಗೌಡ ಫೋನ್ ಎತ್ತದೆ ನಿರ್ಲಕ್ಷ್ಯ ವಹಿಸಿದ್ದೋ ಗೊತ್ತಿಲ್ಲ.

Mysuru MLA Nagendra goes angry after he wasn't allowed for darshan at Hasanamba Temple.