ರೇಣುಕಾಚಾರ್ಯ ಸೋದರನ ಪುತ್ರ ನಿಗೂಢ ಸಾವು ; 100 ಕಿಮೀ ವೇಗದಲ್ಲಿ ಚಲಿಸಿದ್ದ ಕಾರು ಅಪಘಾತ ಶಂಕೆ, ಕುಟುಂಬಸ್ಥರಿಂದ ಕೊಲೆ ಸಂಶಯ, ತಲೆಗೆ ಪೆಟ್ಟು, ಹಿಂದಿನ ಸೀಟಲ್ಲಿತ್ತು ಶವ!  

04-11-22 03:03 pm       Bangalore Correspondent   ಕರ್ನಾಟಕ

​​​​​​​ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್(25) ಸಾವು ಹತ್ತು ಹಲವು ಅನುಮಾನಗಳನ್ನು ಹುಟ್ಟು ಹಾಕಿರುವಂತೆಯೇ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಶಂಕೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು, ನ.4: ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್(25) ಸಾವು ಹತ್ತು ಹಲವು ಅನುಮಾನಗಳನ್ನು ಹುಟ್ಟು ಹಾಕಿರುವಂತೆಯೇ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಶಂಕೆಯಲ್ಲಿ ಪ್ರಕರಣ ದಾಖಲಾಗಿದೆ. ನ.3ರಂದು ಕಾಲುವೆಯಲ್ಲಿ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಚಂದ್ರಶೇಖರ್ ಕೊಲೆಯಾಗಿರುವ ಶಂಕೆಯಲ್ಲಿ ಪೊಲೀಸ್ ದೂರು ನೀಡಿದ್ದಾರೆ.

ಹೊನ್ನಾಳಿ ತಾಲೂಕಿನ ನ್ಯಾಮತಿ ಬಳಿಯ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಚಂದ್ರಶೇಖರ್ ಪ್ರಯಾಣಿಸುತ್ತಿದ್ದ ಬಿಳಿ ಬಣ್ಣದ ಕ್ರೆಟ್ಟಾ ಕಾರು ಗುರುವಾರ ಸಂಜೆ ಪತ್ತೆಯಾಗಿತ್ತು. ಕಾರಿನ ಒಳಗಡೆ ಚಂದ್ರಶೇಖರ್ ಶವ ಪತ್ತೆಯಾಗಿದ್ದು, ಭಾರೀ ಅನುಮಾನಕ್ಕೂ ಕಾರಣವಾಗಿದೆ. ತಂದೆ ಎಂ.ಪಿ.ರಮೇಶ್ ನೀಡಿರುವ ದೂರಿನ ಪ್ರಕಾರ, ಕಾರಿನ ಹಿಂಬದಿ ಸೀಟಿನಲ್ಲಿ ಶವ ಪತ್ತೆಯಾಗಿದೆ. ಅಲ್ಲದೆ, ತಲೆಯ ಭಾಗಕ್ಕೆ ಬಲವಾದ ಹೊಡೆತ ಬಿದ್ದಿರುವಂತೆ ಕಂಡುಬಂದಿದೆ. ಕೈ, ಕಾಲುಗಳನ್ನು ಬಟ್ಟೆಯಲ್ಲಿ ಕಟ್ಟಿರುವಂತೆ ತೋರುತ್ತಿದೆ. ಇದರಿಂದಾಗಿ ಯಾರೋ ದುಷ್ಕರ್ಮಿಗಳು ಚಂದ್ರಶೇಖರ್ ನನ್ನು ಸಾಯಿಸಿ ಅಪಘಾತ ಆಗಿರುವಂತೆ ಬಿಂಬಿಸಿದ್ದಾರೆ ಎಂದು ಅನುಮಾನ ಹೇಳಿಕೊಂಡಿದ್ದಾರೆ.

Davanagere: BJP MLA's nephew found dead in car that plunged into canal

ಅತಿ ವೇಗದಿಂದ ಅಪಘಾತದ ಶಂಕೆ

ಇದರ ನಡುವಲ್ಲೇ ಚಂದ್ರಶೇಖರ್ ಅವರಿದ್ದ ಕ್ರೆಟ್ಟಾ ಕಾರು ನ್ಯಾಮತಿಯಲ್ಲಿ ರಾತ್ರಿ 12 ಗಂಟೆ ವೇಳೆಗೆ ಕಂಡುಬಂದಿದ್ದು, ಅತಿ ವೇಗದಲ್ಲಿ ಬರುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. 11.58ಕ್ಕೆ ಕಾರು ನ್ಯಾಮತಿ ಬಳಿ ಕಾಣಿಸಿಕೊಂಡಿದ್ದು, ಅಲ್ಲಿಂದ ಅತ್ಯಂತ ವೇಗದಲ್ಲಿ ಕಾರು ಧಾವಿಸಿ ಬಂದಿದೆ. ಕೇವಲ ಏಳು ನಿಮಿಷದಲ್ಲಿ ಕಾರು ನ್ಯಾಮತಿಯಿಂದ 15 ಕಿಮೀ ದೂರದ ಕಡದಕಟ್ಟೆಯ ತುಂಗಾ ಕಾಲುವೆಯ ಬಳಿ ಬಂದಿದ್ದು, ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿರುವ ಸಾಧ್ಯತೆಯೂ ಕಂಡುಬಂದಿದೆ. ಕಾರು 100-120 ಕಿಮೀ ವೇಗದಲ್ಲಿ ಬಂದಿರುವ ಸಾಧ್ಯತೆಯಿದ್ದು, ಸೇತುವೆಯ ಪಕ್ಕದ ಕಿಮೀ ತೋರಿಸುವ ಚಪ್ಪಡಿ ಕಲ್ಲಿಗೆ ಡಿಕ್ಕಿಯಾಗಿ ಕಾಲುವೆಗೆ ಪಲ್ಟಿಯಾಗಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಕಾರು ಪಲ್ಟಿಯಾಗಿರುವ ಜಾಗದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ನಾನಾ ಆಯಾಮಗಳಲ್ಲಿ ತನಿಖೆ ಸಾಗಿದೆ. ಅಪಘಾತಕ್ಕೆ ಪುಷ್ಟಿ ನೀಡುವಂತೆ ಕಾರು ಮುಂಭಾಗ ಮತ್ತು ಹಿಂಭಾಗ ನಜ್ಜುಗುಜ್ಜಾಗಿದ್ದು ಸೇತುವೆಯಿಂದ ಪಲ್ಟಿಯಾಗಿ ಬಿದ್ದಿರುವಂತೆ ತೋರಿದೆ.

ಎಲ್ಲ ಆಯಾಮಗಳಿಂದಲೂ ತನಿಖೆ –ಎಡಿಜಿಪಿ  

ಇದೇ ವೇಳೆ, ಹೊನ್ನಾಳಿಗೆ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಆಗಮಿಸಿದ್ದು, ಎಲ್ಲ ರೀತಿಯ ತನಿಖೆಯನ್ನೂ ನಡೆಸಲಾಗುವುದು. ಕುಟುಂಬಸ್ಥರ ಶಂಕೆ, ಅನುಮಾನಗಳ ಬಗ್ಗೆ ತನಿಖೆಯ ಬಳಿಕ ಉತ್ತರ ಸಿಗಲಿದೆ. 100 ಕಿಮೀ ವೇಗದಲ್ಲಿ ಕಾರು ಚಲಾವಣೆ ಆಗಿರುವುದು ಕಂಡುಬಂದಿದೆ. ಭಾನುವಾರ ಮಧ್ಯರಾತ್ರಿ 12.6 ನಿಮಿಷಕ್ಕೆ ಕಾರು ಪಲ್ಟಿಯಾಗಿದೆ. ಸಿಸಿಟಿವಿ, ಮೊಬೈಲ್ ಕರೆಯನ್ನು ಆಧರಿಸಿ ತನಿಖೆ ನಡೆಸಲಾಗುವುದು ಎಂದಿದ್ದಾರೆ.

ಹೋಗುವಾಗ ಜಾಗ್ರತೆ ಎಂದಿದ್ದ ವಿನಯ್ ಗುರೂಜಿ

ಅಕ್ಟೋಬರ್ 30ರಂದು ಸಂಜೆ ವೇಳೆಗೆ ಹೊನ್ನಾಳಿಯ ಮನೆಯಿಂದ ತೆರಳಿದ್ದ ಚಂದ್ರಶೇಖರ್ ಶಿವಮೊಗ್ಗಕ್ಕೆ ಹೋಗಿ ಬರುವುದಾಗಿ ಹೇಳಿದ್ದ. ಆದರೆ ಅಂದು ರಾತ್ರಿ 9.40ಕ್ಕೆ ಚಿಕ್ಕಮಗಳೂರಿನ ವಿನಯ್ ಗುರೂಜಿ ಆಶ್ರಮಕ್ಕೆ ಚಂದ್ರಶೇಖರ್ ಬಂದು ಹೋಗಿರುವುದು ದೃಢಪಟ್ಟಿದೆ. ತನ್ನ ಸ್ನೇಹಿತ ಕಿರಣ್ ಎಂಬಾತನ ಜೊತೆಗೆ ವಿನಯ್ ಗುರೂಜಿ ಆಶ್ರಮಕ್ಕೆ ಬಂದಿದ್ದ ಚಂದ್ರಶೇಖರ್, ಗುರುಗಳ ಆಶೀರ್ವಾದ ಪಡೆದು ತೆರಳಿದ್ದ. ಗುರೂಜಿ, ಜಾಗ್ರತೆ ಎಂದು ಹೇಳಿ ಚಂದ್ರಶೇಖರ್ ನನ್ನು ರಾತ್ರಿ ಬಿಟ್ಟು ಕಳುಹಿಸಿದ್ದರು. ರಾತ್ರಿ ಹತ್ತು ಗಂಟೆ ವೇಳೆಗೆ ಕೊಪ್ಪ ಬಸ್ ನಿಲ್ದಾಣದಲ್ಲಿ ಚಂದ್ರಶೇಖರ್ ಪ್ರಯಾಣಿಸುತ್ತಿದ್ದ ಕ್ರೆಟಾ ಕಾರು ಶಿವಮೊಗ್ಗಕ್ಕೆ ವಾಪಸ್ ಆಗುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಸ್ನೇಹಿತ ಕಿರಣ್ ಬಳಿ ವಿಚಾರಿಸಿದಾಗ ತನ್ನನ್ನು ನಡುವೆ ಇಳಿಸಿ ನ್ಯಾಮತಿ ಮೂಲಕ ಹೊನ್ನಾಳಿಗೆ ತೆರಳಿದ್ದ ಅನ್ನುವುದನ್ನು ತಿಳಿಸಿದ್ದಾನೆ. ಚಂದ್ರಶೇಖರ್ ಈ ಹಿಂದೆಯೂ ವಿನಯ್ ಗುರೂಜಿ ಬಳಿಗೆ ಬರುವುದನ್ನು ರೂಢಿಸಿಕೊಂಡಿದ್ದ.

ಮೊದಲೇ ಮೊಬೈಲ್ ಸ್ವಿಚ್ ಆಫ್ ಆಗಿತ್ತೇ ?

ಚಂದ್ರಶೇಖರ್ ನಾಪತ್ತೆ ಬೆನ್ನಲ್ಲೇ ಪೊಲೀಸರು ಆತನ ಮೊಬೈಲ್ ಲೊಕೇಶನ್ ಆಧರಿಸಿ ತನಿಖೆ ಕೈಗೊಂಡಿದ್ದರು. ಆದರೆ ಚಂದ್ರು ಮೊಬೈಲ್ ನ್ಯಾಮತಿ ತೆರಳುವ ದಾರಿಯಲ್ಲೇ ಸ್ವಿಚ್ ಆಫ್ ಆಗಿರುವುದು ಕಂಡುಬಂದಿತ್ತು ಎನ್ನಲಾಗುತ್ತಿದೆ. ಹೀಗಾಗಿ ಆತನ ಮೊಬೈಲ್ ಮೊದಲೇ ಸ್ವಿಚ್ ಆಫ್ ಆಗಿತ್ತೇ ಎನ್ನುವ ಶಂಕೆಯಿದೆ. ಪೊಲೀಸರಿಗೂ ಮೊಬೈಲ್ ಲೊಕೇಶನ್ ಸಿಗದೆ ಕಾರು ಪತ್ತೆ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಮೊಬೈಲ್ ಲೊಕೇಶನ್ ಕಾರು ಪತ್ತೆಯಾದ ಕಡದಕಟ್ಟೆ ಗ್ರಾಮದಲ್ಲಿ ಸಿಕ್ಕಿರಲಿಲ್ಲ. ಲೊಕೇಶನ್ ಕೊನೆಯ ಬಾರಿಗೆ ಬೇರೆಲ್ಲೋ ತೋರಿಸಿದ್ದು ಪೊಲೀಸರನ್ನು ಯಾಮಾರಿಸಿತ್ತು. ಅಲ್ಲದೆ, ಇದೇ ವಿಚಾರ ಕುಟುಂಬಸ್ಥರು ಮತ್ತು ಪೊಲೀಸರನ್ನು ಬೇರೆ ಆಯಾಮದತ್ತ ಯೋಚಿಸುವಂತೆ ಮಾಡಿದೆ. ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದರಿಂದ ಈ ಆಯಾಮದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದೇ ಸಂದರ್ಭದಲ್ಲಿ ಶಾಸಕ ರೇಣುಕಾಚಾರ್ಯ ತನಗೆ ವಿದೇಶದಿಂದ ಬೆದರಿಕೆ ಕರೆಗಳು ಬರುತ್ತಿದ್ದವು. ಚಂದ್ರುವನ್ನು ಇದೇ ನೆಲೆಯಲ್ಲಿ ಯಾರೋ ಕೊಲೆ ಮಾಡಿರುವ ಶಂಕೆಯಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಬೆದರಿಕೆ ಕರೆಗಳ ವಿಚಾರದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಚಂದ್ರಶೇಖರ್ ಮೃತದೇಹದ ಅಂತಿಮ ದರ್ಶನಕ್ಕೆ ಮಾಜಿ ಸಿಎಂ ಯಡಿಯೂರಪ್ಪ, ಕೆಎಸ್ ಈಶ್ವರಪ್ಪ, ಜಿಎಂ ಸಿದ್ದೇಶ್ವರ್ ಸೇರಿದಂತೆ ಪ್ರಮುಖ ನಾಯಕರು ಆಗಮಿಸಿದ್ದಾರೆ. ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

The mystery surrounding the disappearance and death of Chandrashekar, nephew of Karnataka BJP MLA M P Renukacharya, remained unsolved even after his body was recovered Thursday from inside a car that had fallen into a canal.