ದತ್ತಪೀಠಕ್ಕೆ ನ.13, 14ರಂದು ಪ್ರವಾಸಿಗರಿಗೆ ನಿಷೇಧ, ದತ್ತಮಾಲೆ ಅಭಿಯಾನಕ್ಕೆ ಸಿದ್ಧತೆ ; ಹಿಂದು ಅರ್ಚಕರ ನೇಮಕಕ್ಕೆ ಶ್ರೀರಾಮ ಸೇನೆ ಗಡುವು

04-11-22 11:00 pm       HK News Desk   ಕರ್ನಾಟಕ

ದತ್ತಮಾಲಾ ಅಭಿಯಾನದ ಹಿನ್ನೆಲೆಯಲ್ಲಿ ದತ್ತಪೀಠ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ನ.

ಚಿಕ್ಕಮಗಳೂರು, ನ.4:ದತ್ತಮಾಲಾ ಅಭಿಯಾನದ ಹಿನ್ನೆಲೆಯಲ್ಲಿ ದತ್ತಪೀಠ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ನ.13 ಹಾಗೂ ನ.14 ರಂದು ಪ್ರವಾಸಿಗರ ಪ್ರವೇಶ ನಿಷೇಧಿಸಿ ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶ ಮಾಡಿದೆ.

ದತ್ತಮಾಲೆ ಅಭಿಯಾನ ಹಿನ್ನೆಲೆ ಶ್ರೀರಾಮ ಸೇನೆ ಕಾರ್ಯಕರ್ತರು ನ.13 ರಂದು ಶ್ರೀ ಗುರು ದತ್ತಾತ್ರೇಯ ಪೀಠಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಪ್ರವಾಸಿಗರ ಭೇಟಿಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಆದೇಶ ಹೊರಡಿಸಿದ್ದಾರೆ.

ನವೆಂಬರ್ 13 ರ ಬೆಳಗ್ಗೆ 6 ರಿಂದ ನ.14 ರ ಬೆಳಗ್ಗೆ 10 ಗಂಟೆ ವರೆಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಆದ್ದರಿಂದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗರಿ, ದತ್ತಪೀಠಕ್ಕೆ ಬರಲು ಪ್ಲ್ಯಾನ್ ಹಾಕಿಕೊಂಡವರು ಈ ಎರಡು ದಿನ ಭೇಟಿ ನೀಡದಿರುವುದು ಒಳ್ಳೆಯದು.

ದತ್ತಪೀಠದಲ್ಲಿ ಹಿಂದು ಅರ್ಚಕರ ನೇಮಕಕ್ಕೆ ಗಡುವು

ಇದೇ ನವೆಂಬರ್ 13 ರೊಳಗೆ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಮಾಡಬೇಕು, ಇಲ್ಲವಾದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಶ್ರೀರಾಮಸೇನೆ ಎಚ್ಚರಿಕೆ ನೀಡಿದೆ. ನ.13 ರಂದು ದತ್ತಪೀಠ ಅಭಿಯಾನಕ್ಕೆ ದಿನಾಂಕ ನಿಗದಿಪಡಿಸಿದ್ದು ಆ ದಿನದ ಒಳಗೆ ದತ್ತಪೀಠಕ್ಕೆ ಹಿಂದು ಅರ್ಚಕರ ನೇಮಕವಾಗಬೇಕು, ಇಲ್ಲವಾದಲ್ಲಿ ಪರಿಣಾಮ ನೆಟ್ಟಗಿರಲ್ಲ ಎಂದು ಶ್ರೀರಾಮ ಸೇನೆ ರಾಜ್ಯ ಸಂಚಾಲಕ ಗಂಗಾಧರ್ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ.

ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ

ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಪೂಜಾ ವಿಧಾನದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿತ್ತು.‌ ಎರಡೂ ಧರ್ಮದ ಸಂಪ್ರದಾಯಗಳ ಪ್ರಕಾರ ಪೂಜಾವಿಧಿ ನಡೆಸಲು ಮುಜಾವರ್ ಹಾಗೂ ಅರ್ಚಕರಿಗೆ ಅವಕಾಶ ನೀಡಲಾಗಿದೆ ಎಂದು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿತ್ತು. ಆದರೆ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸೈಯದ್ ಗೌಸ್ ಮೊಹಿಯುದ್ದೀನ್ ಶಾಖಾದ್ರಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಾಲಯವು ಮೇಲಿನಂತೆ ಆದೇಶ ಹೊರಡಿಸಿತ್ತು.

Chikmagaluru Dattatreya peeta entry restricted after Nov 13 and 14, preparation for Datamale