ಜನವರಿ 1ರಿಂದಲೇ ಕರಾವಳಿ ಜಿಲ್ಲೆಗಳಿಗೆ ಕುಚಲಕ್ಕಿ ಪೂರೈಕೆ, ಕ್ವಿಂಟಲ್ ಗೆ 2540 ರೂ. ನೀಡಿ ಭತ್ತ ಖರೀದಿ ; ಸಚಿವ ಕೋಟ

10-11-22 07:15 pm       Bangalore Correspondent   ಕರ್ನಾಟಕ

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜನವರಿ ಒಂದರಿಂದಲೇ ಕುಚಲಕ್ಕಿ ಪಡಿತರ ಇಲಾಖೆಯಿಂದ ಪೂರೈಕೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬೆಂಗಳೂರು, ನ.10: ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜನವರಿ ಒಂದರಿಂದಲೇ ಕುಚಲಕ್ಕಿ ಪಡಿತರ ಇಲಾಖೆಯಿಂದ ಪೂರೈಕೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವರು, ಈ ಮೂರು ಜಿಲ್ಲೆಗಳಲ್ಲಿ ಕುಚಲಕ್ಕಿ ವಿತರಿಸಲು ಒಟ್ಟು 13 ಲಕ್ಷ ಕ್ವಿಂಟಾಲ್ ಅಕ್ಕಿಯ ಅಗತ್ಯವಿದೆ ಎಂದು ಹೇಳಿದರು. ಇದಕ್ಕಾಗಿ ಡಿಸೆಂಬರ್ 1ರಿಂದಲೇ ಕರಾವಳಿ ಜಿಲ್ಲೆಗಳಲ್ಲಿ ಭತ್ತ ಖರೀದಿಗೆ ತೊಡಗಲಾಗುವುದು. ಸ್ಥಳೀಯವಾಗಿ ಕೆಂಪಕ್ಕಿ ಭತ್ತ ಖರೀದಿಸಿ ಸಂಸ್ಕರಣೆ ಮಾಡಲಾಗುವುದು. ಇದಕ್ಕಾಗಿ ಭತ್ತ ಖರೀದಿ ಕೇಂದ್ರ ತೆರೆಯಲಿದ್ದು, 2540 ರೂ. ಬೆಂಬಲ ಬೆಲೆಗೆ ಭತ್ತ ಖರೀದಿಸಲಾಗುವುದು ಎಂದು ತಿಳಿಸಿದ್ದಾರೆ.

Parboiled Rice - Boiled | Meaning | What is Kuchalakki Rice?

ಪ್ರತಿ ಕುಟುಂಬಕ್ಕೆ ಐದು ಕಿಲೋ ಕುಚಲಕ್ಕಿ ಪಡಿತರ ಮೂಲಕ ವಿತರಿಸಲಾಗುವುದು. ನಮ್ಮಲ್ಲಿ ಸಿಗುವ ಕುಚಲಕ್ಕಿ ಪಡಿತರ ಇಲಾಖೆಯಿಂದ ನೀಡುವುದಕ್ಕೆ ಸಾಕಾಗದು. ಅದಕ್ಕಾಗಿ ಬೇರೆ ರಾಜ್ಯಗಳಿಂದಲೂ ಕುಚಲಕ್ಕಿ ಖರೀದಿ ಮಾಡಲಾಗುವುದು ಎಂದರು. ನಾವು ಊಟ ಮಾಡುವ ಅಕ್ಕಿಯನ್ನು ಪಡಿತರದಲ್ಲಿ ನೀಡಬೇಕೆಂದು ಕರಾವಳಿ ಜಿಲ್ಲೆಗಳ ಜನರು ಬೇಡಿಕೆ ಇರಿಸಿದ್ದರು. ನಾನಾ ಕಾರಣಗಳಿಂದ ಅಕ್ಕಿ ಪೂರೈಕೆ ಸಾಧ್ಯವಾಗಿರಲಿಲ್ಲ. ಮುಖ್ಯಮಂತ್ರಿ ಕುಚಲಕ್ಕಿ ಬೇಡಿಕೆಗೆ ಒಪ್ಪಿಗೆ ನೀಡಿದ್ದು, ಕೂಡಲೇ ಭತ್ತ ಖರೀದಿಯನ್ನು ಮಾಡಲಾಗುವುದು. ಬೆಂಬಲ ಬೆಲೆ ಕೊಟ್ಟು ಭತ್ತ ಖರೀದಿಸಿ, ಸರಕಾರದ ಕಡೆಯಿಂದಲೇ ಸಂಸ್ಕರಿಸಿ ಪಡಿತರ ನೀಡಲಾಗುವುದು ಎಂದು ಹೇಳಿದರು.

ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 13 ಲಕ್ಷ ಕ್ವಿಂಟಾಲ್ ಭತ್ತ ಖರೀದಿಸುವ ಗುರಿಯಿದ್ದು, ಅದರಲ್ಲಿ 8.50 ಲಕ್ಷ ಕ್ವಿಂಟಾಲ್ ಅಕ್ಕಿ ಸಂಗ್ರಹದ ಅಂದಾಜಿದೆ. ಕೇಂದ್ರ ಸರಕಾರ ಕೊಡುವ ಬೆಂಬಲ ಬೆಲೆಗೆ ಭತ್ತ ಸಿಗದೇ ಇರುವುದರಿಂದ ಪ್ರತೀ ಕ್ವಿಂಟಾಲ್ ಗೆ 500 ರೂ. ಹೆಚ್ಚುವರಿ ಕೊಟ್ಟು ರಾಜ್ಯ ಸರಕಾರದಿಂದ ಖರೀದಿಸಲಾಗುವುದು. ಇದಕ್ಕೆ 132 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಈ ಕುರಿತು ಆಹಾರ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Boiled rice supply in Karvalai districts from Jan 1st 2023, 2450 per quintal.