ಬೆಂಗಳೂರಿನಲ್ಲಿ ಮೋದಿ ಮೇನಿಯಾ ; ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ, ಏರ್ಪೋರ್ಟ್ 2ನೇ ಟರ್ಮಿನಲ್ ಲೋಕಾರ್ಪಣೆ

11-11-22 03:30 pm       Bangalore Correspondent   ಕರ್ನಾಟಕ

ಪ್ರಧಾನಿ ಮೋದಿಯವರು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ಕೊಟ್ಟಿದ್ದಾರೆ. ಇದಲ್ಲದೆ, ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡರ ಕಂಚಿನ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿದ್ದಾರೆ.

ಬೆಂಗಳೂರು, ನ.11: ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಮೋದಿ ಮೇನಿಯಾ ಎಬ್ಬಿಸಿದ್ದಾರೆ. ಚುನಾವಣೆ ಕಾಲದಲ್ಲಿ ಬೆಂಗಳೂರಿಗೆ ಭೇಟಿಯಿತ್ತ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ, ಮೋದಿ ಮೋದಿ ಘೋಷಣೆಯ ಝೇಂಕಾರ ಸಿಕ್ಕಿದೆ. ಪ್ರಧಾನಿ ಮೋದಿಯವರು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ಕೊಟ್ಟಿದ್ದಾರೆ. ಇದಲ್ಲದೆ, ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡರ ಕಂಚಿನ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿದ್ದಾರೆ.

ನಾಲ್ಕು ಗಂಟೆಗಳ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿದ ಮೋದಿ, ಕೆಲವೇ ಸಮಯದ ಅಂತರದಲ್ಲಿ ಮಿಂಚಿನ ಸಂಚಾರ ಮಾಡಿದ್ದಾರೆ. ಮೊದಲಿಗೆ ಕೆಂಪೇಗೌಡರ ಪುತ್ಥಳಿ ಲೋಕಾರ್ಪಣೆ, ಆನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಉದ್ಘಾಟನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ವಂದೇ ಭಾರತ್ ರೈಲು ಮತ್ತು ಕಾಶಿ ದರ್ಶನ ಯಾತ್ರೆಯ ರೈಲಿಗೆ ಚಾಲನೆ ನೀಡಿದ್ದಾರೆ. ಆನಂತರ, ವಿಧಾನಸೌಧ ಬಳಿಗೆ ಬಂದು ಕನಕದಾಸ ಮತ್ತು ವಾಲ್ಮೀಕಿ ಪುತ್ಥಳಿಗೂ ಪುಷ್ಪ ಅರ್ಪಿಸಿ ನಮನ ಸಲ್ಲಿಸಿದ್ದಾರೆ.

ಕರ್ನಾಟಕದ ಸಮಸ್ತ ಜನತೆಗೆ ಕೋಟಿ ಕೋಟಿ ನಮನಗಳು ಎಂದು ಕನ್ನಡದಲ್ಲೇ ಹೇಳುವ ಮೂಲಕ ಹಿಂದಿಯಲ್ಲಿ ಭಾಷಣ ಆರಂಭಿಸಿದ ಮೋದಿಯವರಿಗೆ ಸೇರಿದ್ದ ಲಕ್ಷಾಂತರ ಜನರು ಕರತಾಡನ ನೀಡಿ ಗೌರವಿಸಿದ್ದಾರೆ. ಕನಕದಾಸ ಮತ್ತು ವಾಲ್ಮೀಕಿ ಜಯಂತಿಯ ವಿಶೇಷ ದಿನಕ್ಕೆ ಕರ್ನಾಟಕಕ್ಕೆ ಆಗಮಿಸಿದ್ದು ನನ್ನ ಸೌಭಾಗ್ಯ ಎಂದು ಸ್ಮರಿಸಿದ್ದಾರೆ. ಇವತ್ತು ಸಂಪರ್ಕ ಕ್ರಾಂತಿಯ ಯುಗ. ರೈಲು, ವಾಯುಯಾನ ಹೊಸ ಮನ್ವಂತರವನ್ನೇ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಓಡಲು ಆರಂಭಿಸಿದ್ದು ಉತ್ತರ – ದಕ್ಷಿಣವನ್ನು ಒಂದಕ್ಕೊಂದು ಬೆಸೆಯುತ್ತಿದೆ. ಚೆನ್ನೈ, ಮೈಸೂರು, ಅಯೋಧ್ಯೆ, ಪ್ರಯಾಗರಾಜ್ ನಗರಗಳನ್ನು ಈ ರೈಲು ಹತ್ತಿರವಾಗಿಸಿದೆ. ಹೊಸ ಏರ್ಪೋರ್ಟ್, ಹೊಸ ಟೆಕ್ನಾಲಜಿ ಆಧುನಿಕ ಭಾರತದ ಕೊಡುಗೆಯಾಗಿದೆ. ಎಂಟು ವರ್ಷಗಳ ಹಿಂದೆ ಇಂಥ ತಂತ್ರಜ್ಞಾನ ಊಹಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಇಂದು ನಾವು ದೇಶದ ಮೂಲೆ ಮೂಲೆಗೆ 5ಜಿ ಟೆಕ್ನಾಲಜಿ ನೀಡುವಷ್ಟರ ಮಟ್ಟಿಗೆ ಬೆಳೆದಿದ್ದೇವೆ.

ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಪರಿಕಲ್ಪನೆ ದೇಶಕ್ಕೆ ಹೊಸ ದೃಷ್ಟಿ ಕೊಟ್ಟಿದೆ. ಡಿಜಿಟಲ್ ಟೆಕ್ನಾಲಜಿಯ ಕಾರಣದಿಂದಾಗಿ ಪ್ರತೀ ಹಳ್ಳಿಯಲ್ಲಿ ಜನರು ಡಿಜಿಟಲ್ ಕ್ರಾಂತಿಯ ಅನುಭವ ಪಡೆಯುತ್ತಿದ್ದಾರೆ. ಸ್ಟಾರ್ಟ್ ಅಪ್ ವಲಯದಲ್ಲಿ ಬೆಂಗಳೂರು ಬಹು ಮುಂದೆ ಹೋಗಿದೆ. ಇದರಲ್ಲಿ ನಮ್ಮ ಯುವಕರ ಸಾಧನೆ, ಕೊಡುಗೆಗಳಿವೆ. ಬಯೋ ಟೆಕ್ನಾಲಜಿ, ಐಟಿ, ರಕ್ಷಣಾ ಉತ್ಪಾದನೆ ಕ್ಷೇತ್ರದಲ್ಲಿ ಬೆಂಗಳೂರಿನ ಕೊಡುಗೆ ಸ್ಮರಿಸಿದ ಮೋದಿ, ಬಯೋ ಟೆಕ್ನಾಲಜಿಯಲ್ಲಿ ಕರ್ನಾಟಕದ ಕೊಡುಗೆ 25 ಶೇಕಡಾ ಇದೆ. ಸ್ಟಾರ್ಟಪ್ ನಲ್ಲಿ ಕರ್ನಾಟಕ ಇಡೀ ದೇಶದಲ್ಲಿ ಅತಿ ಹೆಚ್ಚು ಕೊಡುಗೆ ನೀಡಿದೆ ಎಂದು ಸ್ಮರಿಸಿದರು.

ಇಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿಯೂ ಕರ್ನಾಟಕ ಮುಂದಿದೆ. ಪರಿಸರ ಸ್ನೇಹಿ ವಾಹನಗಳ ಉತ್ಪಾದನೆಯಿಂದ ಮಾಲಿನ್ಯ ಕಡಿಮೆಯಾಗುತ್ತದೆ ಎಂದು ಹೇಳಿದ ಮೋದಿ, ಇದೆಲ್ಲ ಸಾಧ್ಯವಾಗಿದ್ದು ಡಬಲ್ ಇಂಜಿನ್ ಸರಕಾರದಿಂದ ಎಂದು ಪರೋಕ್ಷವಾಗಿ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ಸಾಧನೆಯೆಂದು ಕೊಂಡಾಡಿದರು. ಮೋದಿ ಹೋದಲ್ಲಿ ಬಂದಲ್ಲೆಲ್ಲ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರು ಮೋದಿ ಮೋದಿ ಜೈಕಾರ ಕೂಗಿದರು. ಚುನಾವಣೆ ಕಾಲದಲ್ಲಿ ಬೆಂಗಳೂರಿನಲ್ಲಿ ಪ್ರಧಾನಿ ಭೇಟಿ ಮೋದಿ ಮೇನಿಯಾವನ್ನೇ ಸೃಷ್ಟಿ ಮಾಡಿದೆ.

PM Modi unveils the 108-feet bronze statue of Nadaprabhu Kempegowda. He has inaugurated Terminal 2 at Kempegowda International Airport. Soon after touching down in Bengaluru on Friday, PM Modi flagged off South India’s first Vande Bharat Express and Bharat Gaurav Kashi Darshan train at the KSR Bengaluru station.