ಸಾಮಾಜಿಕ ಹೋರಾಟಗಾರ, ಕೆಪಿಸಿಸಿ ಮಾಜಿ ವಕ್ತಾರ ಜಾಫರ್ ಮೊಹಿಯುದ್ದೀನ್ ಆಮ್ ಆದ್ಮಿ ಸೇರ್ಪಡೆ ; ಭ್ರಷ್ಟಾಚಾರ ವಿರುದ್ಧ ಸೆಣಸಾಡಲು ಪಣ 

11-11-22 09:42 pm       Bangalore Correspondent   ಕರ್ನಾಟಕ

ಸಾಮಾಜಿಕ ಹೋರಾಟಗಾರ ಹಾಗೂ ಮಾಜಿ ಕೆಪಿಸಿಸಿ ವಕ್ತಾರ ಜಾಫರ್‌ ಮೊಹಿಯುದ್ದೀನ್ ಆಮ್‌ ಆದ್ಮಿ ಪಾರ್ಟಿ ಸೇರಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಸಮ್ಮುಖದಲ್ಲಿ ಸೇರ್ಪಡೆಯಾಗಿದ್ದಾರೆ. 

ಬೆಂಗಳೂರು, ನ.11 : ಸಾಮಾಜಿಕ ಹೋರಾಟಗಾರ ಹಾಗೂ ಮಾಜಿ ಕೆಪಿಸಿಸಿ ವಕ್ತಾರ ಜಾಫರ್‌ ಮೊಹಿಯುದ್ದೀನ್ ಆಮ್‌ ಆದ್ಮಿ ಪಾರ್ಟಿ ಸೇರಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಸಮ್ಮುಖದಲ್ಲಿ ಸೇರ್ಪಡೆಯಾಗಿದ್ದಾರೆ. 

ರಾಯಚೂರು ಮೂಲದ ಜಾಫರ್‌ ಮೊಹಿಯುದ್ದೀನ್‌ ಎಂಜಿನಿಯರಿಂಗ್‌ ಶಿಕ್ಷಣ ಪಡೆಯುತ್ತಿದ್ದಾಗಲೇ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುತ್ತಿದ್ದರು. ಭಾರತೀಯ ವಾಯುಪಡೆಯಲ್ಲಿ ಡೆಪ್ಯುಟಿ ಆರ್ಕಿಟೆಕ್ಟ್‌ ಆಗಿ ಸುಮಾರು ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 1997ರಲ್ಲಿ ರಾಯಚೂರಿನಲ್ಲಿ ಜಾಫರ್‌ ಅಸೋಸಿಯೇಟ್ಸ್‌ ಎಂಬ ಸ್ವಂತ ಸಂಸ್ಥೆ ಕಟ್ಟಿದ್ದಾರೆ. ಕತ್ಪುಟ್ಲಿಯಾನ್‌ ಥಿಯೇಟರ್‌ ಗ್ರೂಪ್‌ ಎಂಬ ಎನ್‌ಜಿಒ ಅಧ್ಯಕ್ಷರಾಗಿ ರಂಗಭೂಮಿ, ಕಲೆ, ಸಂಗೀತವನ್ನು ಪ್ರೋತ್ಸಾಹಿಸುತ್ತಿದ್ದಾರೆ. ಫುವಾಕ್ ಎಂಬ ಎನ್‌ಜಿಒ ಅಧ್ಯಕ್ಷರಾಗಿ ಉರ್ದು ಲೇಖಕರು ಹಾಗೂ ಕಲಾವಿದರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.

ಜಾಫರ್‌ ಅವರು ಸಾಮಾಜಿಕ, ರಾಜಕೀಯ, ಆರ್ಥಿಕ ವಿಷಯಗಳ ಬಗ್ಗೆ ದೃಶ್ಯಮಾಧ್ಯಮಗಳ ಹಲವು ಚರ್ಚಗಳಲ್ಲಿ ಭಾಗವಹಿಸಿದ ಅನುಭವ ಹೊಂದಿದ್ದಾರೆ. ಮಾನವ ಹಕ್ಕುಗಳು ಹಾಗೂ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಕಂಡುಬಂದಾಗಲೆಲ್ಲ ಪ್ರತಿಭಟಿಸುವ ಮನೋಭಾವ ಇವರದ್ದು. 2009ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2021ರಲ್ಲಿ ಆಮ್‌ ಆದ್ಮಿ ಪಾರ್ಟಿ ಸೇರಿ 2014ರ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರದಲ್ಲಿ ಭಾಗಿಯಾಗಿದ್ದರು. 2015ರ ನಂತರ ಆಮ್‌ ಆದ್ಮಿ ಪಾರ್ಟಿಯಿಂದ ದೂರವಾಗಿ, 2016ರಲ್ಲಿ ಕಾಂಗ್ರೆಸ್‌ ಸೇರಿದ್ದರು. 2019ರ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರರಾಗಿ ಕಾರ್ಯ ನಿರ್ವಹಿಸಿದ್ದರು. ಈಗ ಇವರು ಮತ್ತೆ ಎಎಪಿಗೆ ವಾಪಸಾಗುತ್ತಿರುವುದು ನಮಗೆಲ್ಲ ಸಂತಸ ಉಂಟುಮಾಡಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು. 

ಮೊಹಿಯುದ್ದೀನ್‌ ಮಾತನಾಡಿ, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯ ಕ್ಷೇತ್ರದ ಸುಧಾರಣೆಯಲ್ಲಿ ಆಮ್‌ ಆದ್ಮಿ ಪಾರ್ಟಿಗಿರುವ ಬದ್ಧತೆ ಪ್ರಶಂಸನೀಯ. ಪ್ರಸ್ತುತ ರಾಜಕೀಯದಲ್ಲಿ ಭ್ರಷ್ಟಾಚಾರದ ವಿರುದ್ಧ ಕಠಿಣ ನಿಲುವನ್ನು ಆಮ್‌ ಆದ್ಮಿ ಪಾರ್ಟಿ ಮಾತ್ರ ತೆಗೆದುಕೊಳ್ಳಬಹುದು. ದೆಹಲಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರವು ಹೊಸ ಹೊಸ ಜನಪರ ಯೋಜನೆಗಳನ್ನು ನಿರಂತರವಾಗಿ ಜಾರಿಗೆ ತರುತ್ತಿದೆ. ಗುಣಮಟ್ಟದ ಆಡಳಿತ ಹೇಗಿರುತ್ತದೆ ಎಂಬುದನ್ನು ದೇಶಕ್ಕೆ ತೋರಿಸಿಕೊಡುತ್ತಿದೆ. ಭ್ರಷ್ಟ ಬಿಜೆಪಿಯನ್ನು ಮೂಲೆಗುಂಪು ಮಾಡುವ ಸಾಮರ್ಥ್ಯ ಎಎಪಿಗಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲಿ ಎಎಪಿಯನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ, ರಾಜ್ಯ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಹಾಗೂ ಇತರೆ ಮುಖಂಡರು ಉಪಸ್ಥಿತರಿದ್ದರು.

KPCC Spokesperson Jaffer Mohiuddin joins AAP.