ಬಸ್ ನಿಲ್ದಾಣ ಗುಂಬಜ್ ಮಾದರಿ ಇದ್ದರೆ ಒಡೆದು ಹಾಕುತ್ತೇವೆ ; ಸಂಸದ ಪ್ರತಾಪಸಿಂಹ ಕಿಡಿ 

14-11-22 01:24 pm       HK News Desk   ಕರ್ನಾಟಕ

ಮಸೀದಿ ಗುಂಬಜ್ ಮಾದರಿಯಲ್ಲಿ ಬಸ್​ ನಿಲ್ದಾಣ ಮಾಡಿದರೆ ಅಂತಹ ನಿಲ್ದಾಣಗಳನ್ನು ನಾವೇ ಒಡೆದು ಹಾಕುತ್ತೇವೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರು, ನ.14 : ಮಸೀದಿ ಗುಂಬಜ್ ಮಾದರಿಯಲ್ಲಿ ಬಸ್​ ನಿಲ್ದಾಣ ಮಾಡಿದರೆ ಅಂತಹ ನಿಲ್ದಾಣಗಳನ್ನು ನಾವೇ ಒಡೆದು ಹಾಕುತ್ತೇವೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರಿನ ರಂಗಾಯಣದಲ್ಲಿ 'ಟಿಪ್ಪು ನಿಜ ಕನಸುಗಳು' ನಾಟಕ ಕೃತಿ ಬಿಡುಗಡೆ ವೇಳೆ ಸಂಸದ ಪ್ರತಾಪ್ ಸಿಂಹ ಮಾಡಿದ್ದ ಭಾಷಣ ವೈರಲ್ ಆಗಿದ್ದು, ಭಾಷಣದಲ್ಲಿ ಗುಂಬಜ್ ಮಾದರಿಯಲ್ಲಿ ಬಸ್​ ನಿಲ್ದಾಣ ನಿರ್ಮಿಸುವಂತಿಲ್ಲ. ಒಂದು ವೇಳೆ ನಿರ್ಮಿಸಿದರೆ ಒಡೆದು ಹಾಕುವುದು ನಿಶ್ಚಿತ ಎಂದು ಹೇಳಿದ್ದಾರೆ. ಬಸ್​ ನಿಲ್ದಾಣಗಳ ಮೇಲೆ ಗುಂಬಜ್​​ ಇರುವುದನ್ನ ಕೆಲವು ಕಡೆ ಗಮನಿಸಿದ್ದೇನೆ. ಅಂತಹ ಗುಂಬಜ್ ಇರುವ ಬಸ್​ ನಿಲ್ದಾಣ ತೆರವಿಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮಧ್ಯದಲ್ಲಿ ದೊಡ್ಡ ಗುಂಬಜ್ ಹಾಗೂ ಅಕ್ಕ ಪಕ್ಕ ಚಿಕ್ಕ ಗುಂಬಜ್ ಗಳಿದ್ರೆ ಅದು ಮಸೀದಿನೇ. ಕೆಆರ್ ಐಡಿಎಲ್ ಇಂಜಿನಿಯರ್ ಗಳಿಗೆ 3-4 ದಿನದಲ್ಲಿ ಗುಂಬಜ್​ ತೆರವುಗೊಳಿಸಲು ಸೂಚಿಸಿದ್ದೇನೆ. ಇಲ್ಲವಾದರೆ ಜೆಸಿಬಿ ತಂದು ನಾನೇ ಒಡೆದು ಹಾಕುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರು ವಿಮಾನ ನಿಲ್ದಾಣಕ್ಕೆ ಒಡೆಯರ್‌ ಹೆಸರು 

ಇದೇ ವೇಳೆ ಈಗಾಗಲೇ ಮೈಸೂರು ರೈಲಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರು ನಾಮಕರಣ ಮಾಡಿದಂತೆ, ಮೈಸೂರು ವಿಮಾನ ನಿಲ್ದಾಣಕ್ಕೂ ಅವರದೇ ಹೆಸರಿಡಲಾಗುವುದು ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು. ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಯ ಒಡೆಯರ್‌ ಹೆಸರಿಡುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವುದಷ್ಟೇ ಬಾಕಿ ಇದೆ ಎಂದರು.

Mp Pratap Simha warns of demolishing bus stands with the model of Gumbaz in Mysuru