ಪ್ರೇಮಿಗಳ ದಿನಕ್ಕೆ ಕಾಂಗ್ರೆಸ್ ಟ್ವೀಟ್ ಪಂಚ್ ; ಕಮಿಷನ್ ಪ್ರೀತಿ, ಡಾಕ್ಟರ್ ಲವ್ವು ರೇಣುಕಾ ಪ್ರೇಮ ವೈಫಲ್ಯ, ಈಶ್ವರಪ್ಪ ಕುರ್ಚಿ ವಿರಹ, ಯತ್ನಾಳ್ ಸೀಡಿ !

14-02-23 02:44 pm       Bangalore Correspondent   ಕರ್ನಾಟಕ

ಪ್ರೇಮಿಗಳ ದಿನಕ್ಕೆ ರಾಜ್ಯ ಕಾಂಗ್ರೆಸ್ ಘಟಕ ಟ್ವಿಟರ್ ವಿಶೇಷವಾಗಿ ಸ್ಪಂದಿಸಿದೆ. ಮುಖ್ಯಮಂತ್ರಿ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಸಚಿವ ಅಶ್ವತ್ಥ್ ನಾರಾಯಣ, ಸಚಿವ ಸ್ಥಾನ ಕಳಕೊಂಡ ಈಶ್ವರಪ್ಪ, ಸಚಿವ ಸ್ಥಾನಕ್ಕಾಗಿ ಆಸೆಗಣ್ಣಿನಿಂದ ನೋಡುತ್ತಿರುವ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರ ಕುರಿತಂತೆ ಟ್ವೀಟರ್ ನಲ್ಲಿ ವ್ಯಂಗ್ಯ ಚಿತ್ರ ಮತ್ತು ಸಾಂದರ್ಭಿಕ ಪ್ರೇಮದ ಬರಹಗಳ ಮೂಲಕ ವಿಡಂಬನೆ ಮಾಡಿದೆ. 

ಬೆಂಗಳೂರು, ಫೆ.14 : ಪ್ರೇಮಿಗಳ ದಿನಕ್ಕೆ ರಾಜ್ಯ ಕಾಂಗ್ರೆಸ್ ಘಟಕ ಟ್ವಿಟರ್ ವಿಶೇಷವಾಗಿ ಸ್ಪಂದಿಸಿದೆ. ಮುಖ್ಯಮಂತ್ರಿ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಸಚಿವ ಅಶ್ವತ್ಥ್ ನಾರಾಯಣ, ಸಚಿವ ಸ್ಥಾನ ಕಳಕೊಂಡ ಈಶ್ವರಪ್ಪ, ಸಚಿವ ಸ್ಥಾನಕ್ಕಾಗಿ ಆಸೆಗಣ್ಣಿನಿಂದ ನೋಡುತ್ತಿರುವ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರ ಕುರಿತಂತೆ ಟ್ವೀಟರ್ ನಲ್ಲಿ ವ್ಯಂಗ್ಯ ಚಿತ್ರ ಮತ್ತು ಸಾಂದರ್ಭಿಕ ಪ್ರೇಮದ ಬರಹಗಳ ಮೂಲಕ ವಿಡಂಬನೆ ಮಾಡಿದೆ. 

ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಒಬ್ಬೊಬ್ಬರ ವ್ಯಂಗ್ಯಚಿತ್ರಕ್ಕೂ ಒಂದೊಂದು ಮಾರ್ಮಿಕ ಬರಹಗಳನ್ನು ಮುಂದಿಟ್ಟಿದೆ. ಮುಖ್ಯಮಂತ್ರಿ ಬೊಮ್ಮಾಯಿ ಕುರಿತ ಫೋಟೊದಲ್ಲಿ, ಬಿಜೆಪಿಗರು ಶುದ್ಧ 40% ಪ್ರೇಮಿಗಳು, 40% ಕಮಿಷನ್ ಮೇಲಿನ ಅವರ ಪ್ರೀತಿ ರೋಮಿಯೋ ಜ್ಯುಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು. ಪ್ರಿಯಕರನ ಕನಸು, ಮನಸಲ್ಲೂ ಪ್ರಿಯತಮೆ ಕಾಣುವಂತೆ, ಬಿಜೆಪಿಗರ ಕನಸು ಮನಸ್ಸಿನಲ್ಲೂ 40 ಪರ್ಸೆಂಟಿನದ್ದೇ ಧ್ಯಾನ…..!! ಎಂದು ಕಟಕಿಯಾಡಿದೆ. 

ಸಚಿವ ಅಶ್ವತ್ಥ ನಾರಾಯಣ ಕುರಿತ ಟೀಕೆಯಲ್ಲಿ, ಈ ಸ್ಪೆಷಲ್ ಡಾಕ್ಟರ್‌ಗೆ ಹೃದಯ ಬಡಿತವೂ ತಿಳಿಯುತ್ತದೆ. ಲೂಟಿ ಹೊಡೆತವೂ ತಿಳಿದಿದೆ! ಈ ಡಾಕ್ಟರ್‌ಗೂ ಲವ್ವಾಗಿದೆ - PSI ಹುದ್ದೆಗಳ ಮೇಲೆ ಎಂದು ವ್ಯಂಗ್ಯವಾಡಿದೆ. ಪ್ರೀತಿಯ ಪಯಣದ ಹಾದಿಯಲ್ಲಿ ಕೇವಲ ಕಲ್ಲು ಮುಳ್ಳುಗಳಷ್ಟೇ ಇರುವುದಿಲ್ಲ.. ರಸ್ತೆ ಗುಂಡಿಗಳು, ಕಿತ್ತು ಹೋದ ಡಾಂಬರು ಕೂಡ ಇರುತ್ತವೆ! ಏಕೆಂದರೆ ಅದು - 40 ಪರ್ಸೆಂಟ್ ಲವ್ ಎಂಬುದು ಇನ್ನೊಂದು ಕಮೆಂಟ್. 

ಒಂದು ಮುತ್ತಿನ ಕತೆಯಲ್ಲಿ ಪ್ರೇಮಿಗೆ ಜಯ ಸಿಗಲಿಲ್ಲ! 'ಸಚಿವ ಹುದ್ದೆ' ಎಂಬ ಪ್ರೇಮ ವೈಫಲ್ಯದಿಂದ ಭಗ್ನಪ್ರೇಮಿಯಾಗಿ ತಿರುಗುತ್ತಿರುವವರ ನೋವು ಜಗತ್ತಿನ ಕಣ್ಣಿಗೆ ಕಾಣುವುದಿಲ್ಲ! ಎಂದು ರೇಣುಕಾಚಾರ್ಯ ಫೋಟೊ ಬಳಸಿ ಟೀಕಿಸಿದೆ.‌ 

ಪ್ರೇಮವಿರುವ ಕಡೆ ದ್ವೇಷಕ್ಕೆ ಜಾಗವಿಲ್ಲ. ಆದರೆ ಪ್ರೇಮವನ್ನೇ ದ್ವೇಷಿಸಿದರೆ.. ದ್ವೇಷವನ್ನೇ ಪ್ರೀತಿಸಿ, ದ್ವೇಷವನ್ನೇ ಧ್ಯಾನಿಸಿ ದ್ವೇಷದೊಂದಿಗೆ ರೊಮ್ಯಾನ್ಸ್ ಮಾಡುವ ವಿಶಿಷ್ಟ ಪ್ರೇಮಿ ಇವರು! ಎಂದು ನಳಿನ್ ಕುಮಾರ್ ಬಗ್ಗೆ ವ್ಯಂಗ್ಯ ಮಾತುಗಳಲ್ಲಿ ಚುಚ್ಚಿದೆ. 

'ಪ್ರೀತಿ ಮಧುರ, ತ್ಯಾಗ ಅಮರ' ಕುರ್ಚಿಯೊಂದಿಗಿನ ಪ್ರೇಮದ ಸವಿಗಳಿಗೆಯ ನೆನಪು, ವಿರಹದ ನೋವು ಸದಾ ಕಾಡುತ್ತಿರುತ್ತದೆ. ಈಶ್ವರಪ್ಪನವರೇ ತಮಗೆ ವಿರಹದ ನೋವು ಭರಿಸುವ ಶಕ್ತಿ ಸಿಗಲಿ ಎಂದು ಈಶ್ವರಪ್ಪ ಅವರ ಸ್ಥಿತಿಯನ್ನು ವಿಡಂಬಿಸಿದೆ. 

ಒಮ್ಮೆ ತಿರಸ್ಕಾರ ಭಾವ ಮೂಡಿದರೆ ಮತ್ತೆಂದೂ ಅಲ್ಲಿ ಪ್ರೀತಿಗೆ ಜಾಗವಿಲ್ಲ! ಮಂಡ್ಯದಲ್ಲಿ ತಿರಸ್ಕಾರದ ಪ್ರೇಮವೈಫಲ್ಯ ಅನುಭವಿಸಿ ನೋವಿನಲ್ಲಿರುವ ಭಗ್ನಪ್ರೇಮಿಗೆ ನಮ್ಮ ಸಾಂತ್ವಾನಗಳು! ಎಂದು ಸಚಿವ ಅಶೋಕ್, ಮಂಡ್ಯದಲ್ಲಿ ಉಸ್ತುವಾರಿಯಾಗಿ ಹೊರ ದಬ್ಬಲ್ಪಟ್ಟ ಸ್ಥಿತಿಯನ್ನು ವ್ಯಾಖ್ಯಾನಿಸಿದೆ. 

ಭಗ್ನ ಪ್ರೇಮಿಯೊಬ್ಬನ ಪ್ರಲಾಪಗಳು, ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವುದು. ಸಿಎಂ ಮನೆಗೆ ಕಲ್ಲು ಹೊಡೆಯುವುದು. ರೈತರಿಗೆ ಅವಮಾನಿಸುವುದು. ಪ್ರೀತಿ ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿರುವ ಈ ಭಗ್ನಪ್ರೇಮಿಗೆ ಕೌನ್ಸ್‌ಲಿಂಗ್ ಅಗತ್ಯವಿದೆ! ಎಂದು ತೇಜಸ್ವಿ ಸೂರ್ಯ ಬಗ್ಗೆ ಅಣಕ ಮಾಡಲಾಗಿದೆ. ‌

Valentines Day memes flood against BJP leaders on Karnataka congress twitter account.