ಕೋಲಾರ ಬಿಟ್ಟು ಕುಷ್ಟಗಿ ಕ್ಷೇತ್ರದತ್ತ ಚಿತ್ತ ; ಮುನಿಯಪ್ಪ ಮುನಿಸಿನಿಂದ ಬೇಸತ್ತರಾ ಸಿದ್ದರಾಮಯ್ಯ?! 

18-02-23 10:51 pm       Bangalore Correspondent   ಕರ್ನಾಟಕ

ಇತ್ತೀಚೆಗಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಲ್ಲಿಯೇ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದರೆ ಕೋಲಾರದಲ್ಲಿ ಪಕ್ಷದ ನಾಯಕರ ಬಣ ಜಗಳದಿಂದಾಗಿ ಮತ್ತೆ ವಿಚಲಿತರಾಗಿದ್ದಾರೆ ಎನ್ನುವ ಸುದ್ದಿಗಳಿವೆ.

ಬೆಂಗಳೂರು, ಫೆ.18 : ಇತ್ತೀಚೆಗಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಲ್ಲಿಯೇ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದರೆ ಕೋಲಾರದಲ್ಲಿ ಪಕ್ಷದ ನಾಯಕರ ಬಣ ಜಗಳದಿಂದಾಗಿ ಮತ್ತೆ ವಿಚಲಿತರಾಗಿದ್ದಾರೆ ಎನ್ನುವ ಸುದ್ದಿಗಳಿವೆ. ಹೀಗಾಗಿ ಮತ್ತೆ ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿ ತೊಡಗಿದ್ದಾರೆ ಎನ್ನುವ ವದಂತಿ ಹರಡಿದೆ. 

ಕೋಲಾರ ಕಾಂಗ್ರೆಸ್ ನಲ್ಲಿ ರಮೇಶ್ ಕುಮಾರ್ ಮತ್ತು ಮುನಿಯಪ್ಪ ಬಣದ ನಡುವಿನ ಮುನಿಸು ತಣ್ಣಗಾಗದ್ದರಿಂದ ಸಿದ್ದರಾಮಯ್ಯ ಬೆಂಬಲಿಗರು ಅಲ್ಲಿನ ಉಸಾಬರಿ ಬೇಡವೆಂದು ಮತ್ತೊಂದು ಸುರಕ್ಷಿತ ಕ್ಷೇತ್ರವನ್ನು ಹುಡುಕಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ಕ್ಷೇತ್ರದಿಂದ ಸಿದ್ದರಾಮಯ್ಯ ಅವರನ್ನು ಸ್ಪರ್ಧೆಗಿಳಿಸಲು ಕಸರತ್ತು ನಡೆಸಿದ್ದಾರೆ ಎಂಬ ಬಗ್ಗೆ ಭಾರೀ ಚರ್ಚೆ ಆರಂಭಗೊಂಡಿದೆ. ಸಿದ್ದರಾಮಯ್ಯ ಓಕೆ ಅಂದಲ್ಲಿ ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಲು ಕೊಪ್ಪಳ ಜಿಲ್ಲೆಯ ನಾಯಕರು ರೆಡಿ ಮಾಡ್ಕೊಂಡಿದ್ದಾರೆ ಎನ್ನಲಾಗುತ್ತಿದೆ. 

ಕುಷ್ಟಗಿ ವಿಧಾನಸಭೆ ಕ್ಷೇತ್ರದಲ್ಲಿ ಕುರುಬ ಸಮುದಾಯದ ಮತಗಳು ನಿರ್ಣಾಯಕವಾಗಿರುವುದೇ  ಸಿದ್ದರಾಮಯ್ಯ ಅವರಿಗೆ ಪ್ಲಸ್ ಪಾಯಿಂಟ್. ಈ ಹಿಂದೆ ಇಲ್ಲಿ ಸ್ಪರ್ಧಿಸಿದ್ದ ಅಮರೇಗೌಡ ಬಯ್ಯಾಪುರ ಬದಲಿಗೆ ಸಿದ್ದರಾಮಯ್ಯ ಅವರನ್ನು ಚುನಾವಣಾ ಕಣಕ್ಕೆ ತರಲು ತೆರಮರೆಯಲ್ಲಿ ಬೆಂಬಲಿಗರು ಸಿದ್ಧತೆ ನಡೆಸಿದ್ದಾರೆ. ಸಿದ್ದರಾಮಯ್ಯ ಸ್ಪರ್ಧಿಸಲು ಒಪ್ಪಿದರೆ ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್ ಹಾಲಿ ಶಾಸಕ ಅಮರೇಗೌಡ ಬಯ್ಯಾಪುರ ಸ್ಥಾನ ಬಿಟ್ಟು ಕೊಡಬೇಕಾಗುತ್ತದೆ. ಆದರೆ ಕುಷ್ಟಗಿಯಲ್ಲಿ ಸತತ ಎರಡನೇ ಬಾರಿ ಯಾವುದೇ ಶಾಸಕ ಗೆದ್ದಿರುವ ಇತಿಹಾಸ ಇಲ್ಲ. ಈ ನೆಲೆಯಲ್ಲಿ ನೋಡಿದರೆ ಕಾಂಗ್ರೆಸ್ ಶಾಸಕ ಅಮರೇಗೌಡ ಅವರು ಮತ್ತೆ ಗೆಲ್ಲುತ್ತಾರಾ ಅನ್ನುವ ಶಂಕೆ ಇರುವಾಗಲೇ ಸಿದ್ದರಾಮಯ್ಯ ಬೆಂಬಲಿಗರು ಹೊಸ ವರಸೆ ಆರಂಭಿಸಿದ್ದಾರೆ.

ಇದೇ ವೇಳೆ, ಸಿದ್ದರಾಮಯ್ಯ ಸ್ಪರ್ಧೆ ಖಚಿತವಾದ್ರೆ ಬಿಜೆಪಿ ನಾಯಕರು ಪ್ರಭಾವಿ ವ್ಯಕ್ತಿಯನ್ನೇ ಇಲ್ಲಿ ಕಣಕ್ಕಿಳಿಸುವ ಸಾಧ್ಯತೆ ಇದೆ. ಹಾಗಾದಲ್ಲಿ ಇಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ದೊಡ್ಡನಗೌಡ‌ ಪಾಟೀಲ್ ಗೆ ಟಿಕೆಟ್ ಕೈತಪ್ಪಲಿದೆ.  ಸಿದ್ದರಾಮಯ್ಯ ಸೋಲಿಸಿಯೇ ಸಿದ್ಧ ಎನ್ನುತ್ತಿರುವ ಬಿಜೆಪಿ ನಾಯಕರು ಮತ್ತೆ ರಾಮುಲು ಅವರನ್ನೇ ಸ್ಪರ್ಧೆಗೆ ಇಳಿಸುವ ಸಾಧ್ಯತೆಯಿದೆ. ಮೈಸೂರಿನ ವರುಣಾ ಬಳಿಕ ಕಳೆದ ಬಾರಿ ಬಾದಾಮಿ,‌ ಈ ಬಾರಿ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡ್ತಾರೆ ಎಂಬ ಮಾತುಗಳಿದ್ದವು. ಆದರೆ ಈಗ ಕುಷ್ಟಗಿ ಕ್ಷೇತ್ರದತ್ತ ಸಿದ್ದರಾಮಯ್ಯ ಚಿತ್ತ ಹರಿಸಿದ್ದಾರೆಯೇ ಎಂಬ ವದಂತಿ ಹರಡಿದೆ.

Siddaramaiah plans to contest from kustagi.