ಮಾಂಸ ತಿಂದು ದೇಗುಲಕ್ಕೆ ಸಿ ಟಿ ರವಿ ಭೇಟಿ, ತಿರುಗಿ ಬಿದ್ದ ಸಿದ್ದರಾಮಯ್ಯ ಬೆಂಬಲಿಗರು  ; ನಾನು ಹುಟ್ಟಿರೋದೆ ಮಾಂಸ ತಿನ್ನೋ ಜಾತಿಯಲ್ಲಿ ಎಂದ ಸೀಟಿ !

22-02-23 05:28 pm       HK News Desk   ಕರ್ನಾಟಕ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸದ ವೇಳೆ ಭಟ್ಕಳದ ಶಿರಾಲಿಯಲ್ಲಿ ಶಾಸಕ ಸುನೀಲ್ ನಾಯ್ಕ ಮನೆಯಲ್ಲಿ ಮೀನೂಟ ಸವಿದು ದೇವರ ದರ್ಶನ ಮಾಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದೆ.

ಕಾರವಾರ, ಫೆ.22: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸದ ವೇಳೆ ಭಟ್ಕಳದ ಶಿರಾಲಿಯಲ್ಲಿ ಶಾಸಕ ಸುನೀಲ್ ನಾಯ್ಕ ಮನೆಯಲ್ಲಿ ಮೀನೂಟ ಸವಿದು ದೇವರ ದರ್ಶನ ಮಾಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದೆ.

ಫೆ.19ರ ಭಾನುವಾರದಂದು ಉತ್ತರ ಕನ್ನಡ ಜಿಲ್ಲೆಗೆ  ಆಗಮಿಸಿದ್ದ ಸಿ.ಟಿ ರವಿ ಕಾರವಾರದ ಶಿವಾಜಿ ಜಯಂತಿಯಲ್ಲಿ ಭಾಗವಹಿಸಿ ನಂತರ ಭಟ್ಕಳಕ್ಕೆ ಆಗಮಿಸಿದ್ದರು. ಈ ವೇಳೆ ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ ಮನೆಯಲ್ಲಿ ಮೀನೂಟ ಸೇವಿಸಿದ್ದ ಸಿ.ಟಿ ರವಿ ಭಟ್ಕಳ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭಟ್ಕಳ ಶಾಸಕ ಸುನಿಲ್ ನಾಯ್ಕ ಹಾಗೂ ದೇವಸ್ಥಾನದ ಕಮಿಟಿ ಸದಸ್ಯರೊಂದಿಗೆ ಭೇಟಿ ನೀಡಿದ್ದಾರೆ.

ಈ ವೇಳೆ ದೇವಸ್ಥಾನದ ಬಾಗಿಲಲ್ಲೇ ಶಾಸಕ ಸುನಿಲ್ ನಾಯ್ಕ್‌  ಹಾಗೂ ಕಮಿಟಿ ಸದಸ್ಯರಿಂದ ಸನ್ಮಾನ ಸಹ ಮಾಡಿದ್ದು, ಶಾಸಕರ ಜೊತೆ ಮೀನೂಟ ಸವಿಯುವ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿದ್ದರಾಮಯ್ಯ ಮಾಂಸ ತಿಂದು ಧರ್ಮಸ್ಥಳ ದೇವಸ್ಥಾನಕ್ಕೆ ಹೋದರು ಎಂದು ವಿವಾದ ಮಾಡಿದ ಬಿಜೆಪಿಗರು ಈಗೆಲ್ಲಿ ಹೋದರು ಎಂದು ಕಾಂಗ್ರಸಿಗರು ಪ್ರಶ್ನೆ ಮಾಡಿದ್ದು ಜಿಲ್ಲೆಯ ಸಾತ್ವಿಕ ಜನರು ಸಹ ಸಿಟಿ ರವಿ ವರ್ತನೆಗೆ ಕಿಡಿಕಾರಿದ್ದಾರೆ.

ನಾನು ಹುಟ್ಟಿರೋದೆ ಮಾಂಸ ತಿನ್ನುವ ಜಾತಿಯಲ್ಲಿ ; 

ನಾನು ಹುಟ್ಟಿರೋದೆ ಮಾಂಸ ತಿನ್ನುವ ಜಾತಿಯಲ್ಲಿ, ಆದರೆ ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದರು.

ವೈರಲ್ ಆಗಿದ್ದ ಫೋಟೋ ಕುರಿತು ಮಂಡ್ಯದಲ್ಲಿ ಸ್ಪಷ್ಟನೆ ನೀಡಿದ ಅವರು, ಭಟ್ಕಳಕ್ಕೆ ಹೋದಾಗ ನಾಗಬನ ನೋಡಲು ಕರೆದಿದ್ದರು. ಹೊಸದಾಗಿ ದೇವಾಲಯ ಕಟ್ಟಲಾಗಿತ್ತು. 45 ದಿನಗಳು ಓಪನ್ ಇರಲಿಲ್ಲ. ನಾಗಬನದ ಹೊರಾವರಣದಲ್ಲಿ ನಿಂತು ದರ್ಶನ ಪಡೆದಿದ್ದೇವೆ ಎಂದು ಹೇಳಿದರು.

ನನಗೆ ದೇವರ ಬಗ್ಗೆ ಶ್ರದ್ಧೆ ಇದೆ, ದೇವಾಲಯಕ್ಕೆ ನಾನ್ ವೆಜ್ ತಿಂದು ಹೋಗಿಲ್ಲ. ನಾನು ಹುಟ್ಟಿರೋದೆ ಮಾಂಸ ತಿನ್ನೋ ಜಾತಿಯಲ್ಲಿ. ಆದರೆ ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ. ಸುಮ್ಮನೆ ವಿವಾದ ಹುಟ್ಟಹಾಕಲು ಕೆಲವರು ಹೀಗೆ ಮಾಡುತ್ತಿದ್ದಾರೆ. ವ್ರತ ಪೂಜೆಗಳನ್ನು ಆಚರಿಸುವವನು ನಾನು, ನನಗೆ ದೇವರ ಬಗ್ಗೆ ಶ್ರದ್ಧೆ ಇದೆ. ಮಾಂಸ ತಿನ್ನುತ್ತೇನೆ ಹಾಗಂತ ತಿಂದು ದಾಸ್ಟ್ಯ ತೋರಿಸಲ್ಲ. ಮಾಂಸ ತಿಂದು ದೇವಾಲಯಕ್ಕೆ ಹೋಗ್ತೀನಿ ಏನಿವಾಗ, ಯಾರು ಏನ್ ಮಾಡ್ತಾರೆ ಅಂತ ಸಿದ್ದು ರೀತಿ ಹೇಳಲ್ಲ ಎಂದರು.

Ct Ravi visits temple after eating non veg in Bhatkal, sparks controversy.