ಕಾಡಂಚಿನ ಜನರ ಕಷ್ಟ, ಕಾಡ್ಗಿಚ್ಚು, ಕಾಡಾನೆ ಹಾವಳಿ ; ಮುಖ್ಯಮಂತ್ರಿಗೆ ಮನವಿ ಕೊಟ್ಟ ಕಾಂತಾರ ನಟ ರಿಷಬ್ ಶೆಟ್ಟಿ 

08-03-23 06:20 pm       Bangalore Correspondent   ಕರ್ನಾಟಕ

'ಕಾಂತಾರ' ಸಿನಿಮಾದ ನೆಪದಲ್ಲಿ ಹಲವು ತಿಂಗಳು ಕಾಡಂಚಿನಲ್ಲಿ ದಿನ ಕಳೆದಿದ್ದ ನಟ ರಿಷಬ್‌ ಶೆಟ್ಟಿ, ಇದೀಗ ಕಾಡಂಚಿನ ಜನರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರು, ಮಾ.8: 'ಕಾಂತಾರ' ಸಿನಿಮಾದ ನೆಪದಲ್ಲಿ ಹಲವು ತಿಂಗಳು ಕಾಡಂಚಿನಲ್ಲಿ ದಿನ ಕಳೆದಿದ್ದ ನಟ ರಿಷಬ್‌ ಶೆಟ್ಟಿ, ಇದೀಗ ಕಾಡಂಚಿನ ಜನರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ. ಸದ್ಯ ಪಶ್ಚಿಮ ಘಟ್ಟಗಳಲ್ಲಿ ಎದುರಾಗುತ್ತಿರುವ ಕಾಡ್ಗಿಚ್ಚು ನಿಯಂತ್ರಣಕ್ಕೆ ರಿಷಬ್ ಮನವಿ ಮಾಡಿದ್ದು ಗಮನ ಸೆಳೆದಿದೆ. 

ಮುಖ್ಯಮಂತ್ರಿ ಭೇಟಿ ಬಗ್ಗೆ ರಿಷಬ್ ಶೆಟ್ಟಿ ಟ್ವಿಟರ್ ನಲ್ಲಿ ಫೋಟೊ ಮತ್ತು ವಿಡಿಯೋ ಹಂಚಿಕೊಂಡಿದ್ದಾರೆ. ಕಾಂತಾರ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಕಾಡಂಚಿನ ಪ್ರದೇಶಗಳಲ್ಲಿ ಸುತ್ತಾಡಿದ್ದೇನೆ. ಅರಣ್ಯ ಇಲಾಖೆಯ ಜೊತೆ ರಾಯಭಾರಿಯ ರೀತಿ ಕೆಲಸ ಮಾಡುತ್ತಾ ಅನುಭವ ಪಡೆದಿದ್ದೇನೆ. ಅರಣ್ಯ ರಕ್ಷಣೆ ವೇಳೆ ಇಲಾಖೆಯ ಸಿಬ್ಬಂದಿ ಮತ್ತು ಕಾಡಂಚಿನ ಪ್ರದೇಶಗಳ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿತುಕೊಂಡಿದ್ದೇನೆ. ಕೃಷಿಕರು ಎದುರಿಸುತ್ತಿರುವ ಕಾಡಾನೆ ಹಾವಳಿ, ಕಾಡ್ಗಿಚ್ಚು ಸಂಭವಿಸಿದ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬಂದಿ ಎದುರಿಸುವ ಕಷ್ಟಗಳು, ಅವರ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬ, ಸಿಬಂದಿ ಇಲ್ಲದೆ ಜನ ಕಷ್ಟ ಪಡುತ್ತಿರುವುದು ಹೀಗೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. 

ಇವನ್ನು ಕ್ರೋಡೀಕರಿಸಿ ಮುಖ್ಯಮಂತ್ರಿಗಳಿಗೆ 20 ಅಂಶಗಳ ವಿವರವಾದ ಮನವಿ ಸಲ್ಲಿಸಿದ್ದೇನೆ. ಅತಿ ಶೀಘ್ರದಲ್ಲೇ ಇವುಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಆದೇಶ ನೀಡುವುದಾಗಿ ಸಿ.ಎಂ ಭರವಸೆ ನೀಡಿದ್ದಾರೆ ಎಂದು ರಿಷಬ್‌ ಶೆಟ್ಟಿ ವಿಡಿಯೋದಲ್ಲಿ ತಿಳಿಸಿದ್ದಾರೆ.

Director and actor Rishab Shetty has met Chief Minister Basavaraj Bommai requesing him to solve the issues concerned to forest department and regarding problems being faced by the people who are living on the fringes of forest in the wake of summer season as forest areas are prone to wildfires.