ಜೆಡಿಎಸ್ ಪಂಚರತ್ನ ರಥಯಾತ್ರೆ ; ಬಳಸಿ ಎಸೆದು ಹೋಗಿದ್ದ ಅನ್ನಾಹಾರ ತಿಂದು 15ಕ್ಕೂ ಹೆಚ್ಚು ಜಾನುವಾರು ಸಾವು

26-03-23 11:44 am       HK News Desk   ಕರ್ನಾಟಕ

ಜೆಡಿಎಸ್ ನಾಯಕರು ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆಗೆ ಬಳಸಿ ಎಸೆದಿದ್ದ ಹಳಸಿದ ಅನ್ನ, ಸಾಂಬಾರನ್ನು ತಿಂದ ಸುಮಾರು 15ಕ್ಕೂ ಹೆಚ್ಚು ಜಾನುವಾರುಗಳು ದಾರುಣ ಮೃತಪಟ್ಟ ಘಟನೆ ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ನಡೆದಿದೆ.

ಯಾದಗಿರಿ, ಮಾ.26: ಜೆಡಿಎಸ್ ನಾಯಕರು ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆಗೆ ಬಳಸಿ ಎಸೆದಿದ್ದ ಹಳಸಿದ ಅನ್ನ, ಸಾಂಬಾರನ್ನು ತಿಂದ ಸುಮಾರು 15ಕ್ಕೂ ಹೆಚ್ಚು ಜಾನುವಾರುಗಳು ದಾರುಣ ಮೃತಪಟ್ಟ ಘಟನೆ ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ನಡೆದಿದೆ.

ಯರಗೋಳ ಹೊರವಲಯದಲ್ಲಿ ಮೊನ್ನೆ ಮಾ.23ರಂದು ಜೆಡಿಎಸ್‌ ಪಂಚರತ್ನ ರಥಯಾತ್ರೆಯ ಅಂಗವಾಗಿ ಸಮಾವೇಶದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಉಳಿದ ಅನ್ನಾಹಾರವನ್ನು ಅಲ್ಲಿಯೇ ಹೊಲದ ಬಳಿ ಬಿಸಾಡಿ ಹೋಗಿದ್ದರು. ಎರಡು ದಿನಗಳಲ್ಲಿ ಬಿಸಿಲಿಗೆ ಹಾಳಾಗಿದ್ದ ಆಹಾರವನ್ನು ದನಗಳು ತಿಂದಿದ್ದು 15ಕ್ಕೂ ಹೆಚ್ಚು ಜಾನುವಾರುಗಳು ಹೊಟ್ಟೆಯುಬ್ಬಿ ಮೃತಪಟ್ಟಿವೆ.

ಗುರುಮಠಕಲ್‌ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರ್ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಸಮಾವೇಶದ ನಂತರ ಉಳಿದ ಅನ್ನಾಹಾರವನ್ನು ವಿಲೇವಾರಿಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದೇ ಜಾನುವಾರುಗಳ ಸಾವಿಗೆ ಕಾರಣ ಎಂಬ ಆರೋಪವನ್ನು ರೈತರು ಮಾಡಿದ್ದಾರೆ.‌ ಮಾಹಿತಿ ತಿಳಿಯುತ್ತಲೇ ಪಶು ವೈದ್ಯರ ತಂಡ ಭೇಟಿ ನೀಡಿದ್ದು, ಮೃತಪಟ್ಟ ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಿದೆ. ಅಸ್ವಸ್ಥಗೊಂಡ 10ಕ್ಕೂ ಹೆಚ್ಚು ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ ಜೆಡಿಎಸ್‌ ನಾಯಕ ಶರಣುಗೌಡ ಕಂದಕೂರ, ರೈತರನ್ನು ಸಂಪರ್ಕಿಸಿ ಸಾಂತ್ವನ ಹೇಳಿದ್ದಾರೆ. ಜಾನುವಾರುಗಳ ಮಾಲೀಕರುಗಳಿಗೆ ಧನಸಹಾಯ ನೀಡಿದ್ದು, ತ್ಯಾಜ್ಯ ವಿಲೇವಾರಿ ಹೊಣೆ ಹೊತ್ತಿದ್ದ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

About 15 cattle succumbed to food poisoning after consuming left over food from an election rally organised by the Janata Dal (Secular) party at Yeragol village in Yadgir district.