ಯಡಿಯೂರಪ್ಪ ಮನೆಗೆ ಕಲ್ಲು ತೂರಾಟಕ್ಕೆ 'ಸಂತೋಷ ಕೂಟ'ದ ಪಿತೂರಿ ಕಾರಣ ; ಗೃಹ ಸಚಿವರ ತವರಲ್ಲೇ ಹೀಗಾಗಿದ್ದೇಕೆ ? 

28-03-23 11:09 pm       Bangalore Correspondent   ಕರ್ನಾಟಕ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮನೆಗೆ ನಡೆದ ದಾಳಿಗೆ ಬಿಜೆಪಿ ಒಳಗಿನ ವಿರೋಧಿ ಬಣದ ಪಿತೂರಿಯೇ ಕಾರಣ ಎಂದು ಕಾಂಗ್ರೆಸ್ ಕಟಕಿಯಾಡಿದೆ. ಯಡಿಯೂರಪ್ಪ ಸರ್ಕಾರದ ಮುಖ್ಯಮಂತ್ರಿಯಲ್ಲ, ಸರ್ಕಾರದ ನಿರ್ಧಾರಗಳಲ್ಲಿ ಅವರ ಪಾತ್ರವಿಲ್ಲ.

ಬೆಂಗಳೂರು, ಮಾ.28 : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮನೆಗೆ ನಡೆದ ದಾಳಿಗೆ ಬಿಜೆಪಿ ಒಳಗಿನ ವಿರೋಧಿ ಬಣದ ಪಿತೂರಿಯೇ ಕಾರಣ ಎಂದು ಕಾಂಗ್ರೆಸ್ ಕಟಕಿಯಾಡಿದೆ. ಯಡಿಯೂರಪ್ಪ ಸರ್ಕಾರದ ಮುಖ್ಯಮಂತ್ರಿಯಲ್ಲ, ಸರ್ಕಾರದ ನಿರ್ಧಾರಗಳಲ್ಲಿ ಅವರ ಪಾತ್ರವಿಲ್ಲ. ಆದರೂ ಸರ್ಕಾರದ ಅವಾಂತರಕ್ಕೆ ಬಿಎಸ್​ವೈ ಮನೆ ಮೇಲೆ ದಾಳಿ ಆಗಿದ್ದೇಕೆ? ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದ್ದೇಕೆ ಎನ್ನುವುದೇ ಯಕ್ಷಪ್ರಶ್ನೆ. ಯಡಿಯೂರಪ್ಪ ಅವರ ಮನೆಯ ಮೇಲಿನ ದಾಳಿಯ ಹಿಂದೆ ಬಿಜೆಪಿಯ "ಸಂತೋಷ ಕೂಟ"ದ ಕೈವಾಡ ಇರುವುದು ನಿಶ್ಚಿತ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. 

ಅಲ್ಲದೆ, ಬಂಜಾರ ಸಮುದಾಯದ ಪ್ರತಿಭಟನೆ ಹಿಂದೆ ಕಾಂಗ್ರೆಸ್ ಕೈವಾಡ ಇದೆಯೆಂದು ದೂರಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧವೂ ಕಾಂಗ್ರೆಸ್ ಕಿಡಿಕಾರಿದೆ. ಪ್ರತಿ ಬಾರಿ ಕಾನೂನು ಸುವ್ಯವಸ್ಥೆ ಉಲ್ಲಂಘನೆಯ ಪ್ರಕರಣಗಳು, ಗಲಭೆ, ಘರ್ಷಣೆಯ ಬೀಜ ಬಿತ್ತುವುದು ಗೃಹ ಸಚಿವರ ತವರು ಜಿಲ್ಲೆಯಲ್ಲೇ ಏಕೆ..? ತನ್ನ ತವರಿನಲ್ಲಿ, ಅದರಲ್ಲೂ ಮಾಜಿ ಸಿಎಂ ಮನೆ ಬಳಿ ಕಾನೂನು ಸುವ್ಯವಸ್ಥೆ ಕಾಪಾಡಲಾಗದ ಆರಗ ಜ್ಞಾನೇಂದ್ರ ಅವರದ್ದು ಹೊಣೆಗೇಡಿತನವೋ ಅಥವಾ "ಸಂತೋಷ ಕೂಟ"ವನ್ನು ಮೆಚ್ಚಿಸುವ ಷಡ್ಯಂತ್ರವೋ? ಎಂದು ಕಾಂಗ್ರೆಸ್​ ಟ್ವೀಟ್​ ಮಾಡಿ ತಿವಿದಿದೆ. 

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತ ಎಜೆ ಸದಾಶಿವ ಸಮಿತಿ ವರದಿಯನ್ನು ಜಾರಿಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬಂಜಾರ ಸಮುದಾಯದವರು ಶಿಕಾರಿಪುರದಲ್ಲಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಶಿಕಾರಿಪುರದ ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರ ನಿವಾಸದ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರು.

BS Yediyurappas home, office attacked by protesters over reservation, BJP leader conspiracy says Congress tweet.