ಚಿಕ್ಕಮಗಳೂರು ಕಾಂಗ್ರೆಸ್ ಕಚೇರಿ ರಣರಂಗ ; ಟಿಕೆಟ್ ವಿಚಾರದಲ್ಲಿ ಕಿತ್ತಾಟ, ಕೆಪಿಸಿಸಿ ಸಂಯೋಜಕರಿಗೆ ಕಾರ್ಯಕರ್ತರಿಂದಲೇ ಹಲ್ಲೆ ! 

01-04-23 07:31 pm       HK News Desk   ಕರ್ನಾಟಕ

ಚಿಕ್ಕಮಗಳೂರಿನ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ ನಡೆದಿದ್ದು ಮೂಲ ಮತ್ತು ವಲಸಿಗ ನಾಯಕರ ಬಣಗಳು ಪರಸ್ಪರ ಕೈ ಕೈ ಮಿಲಾಯಿಸಿಕೊಂಡು ಕಿತ್ತಾಡಿಕೊಂಡಿವೆ.

ಚಿಕ್ಕಮಗಳೂರು, ಎ.1 : ಚಿಕ್ಕಮಗಳೂರಿನ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ ನಡೆದಿದ್ದು ಮೂಲ ಮತ್ತು ವಲಸಿಗ ನಾಯಕರ ಬಣಗಳು ಪರಸ್ಪರ ಕೈ ಕೈ ಮಿಲಾಯಿಸಿಕೊಂಡು ಕಿತ್ತಾಡಿಕೊಂಡಿವೆ. ಕೆಪಿಸಿಸಿ ಸಂಯೋಜಕರ ಮೇಲೆ ಹಲ್ಲೆ ನಡೆಸಲಾಗಿದೆ. 

ಕಾರ್ಯಕರ್ತರು ತಾವು ತಾವೇ ಹೊಡೆದಾಡಿ ಪರಸ್ಪರ ಹಿಗ್ಗಾಮುಗ್ಗ ಥಳಿಸಿಕೊಂಡಿದ್ದಾರೆ. ತಾಲೂಕು ಅಧ್ಯಕ್ಷ ಮಾತಿಗೆ ಮುಂದಾಗುತ್ತಿದ್ದಂತೆ ಸಿಟ್ಟಿಗೆದ್ದ ಕಾರ್ಯಕರ್ತರು, ಆಕಾಂಕ್ಷಿಗಳ ಬೆಂಬಲಿಗರ ತಳ್ಳಾಟ ನಡೆಸಿದ್ದಾರೆ. ಬಳಿಕ ಪೊಲೀಸರು ಮಧ್ಯೆ ಪ್ರವೇಶಿಸಿ ಉದ್ರಿಕ್ತ ಕಾರ್ಯಕರ್ತರನ್ನು ಹೊರಕ್ಕೆ ಕಳಿಸಿದ್ದಾರೆ. ಪರ ವಿರೋಧ ನಡುವೆಯೇ ಕಾರ್ಯಕರ್ತರು ಸಭೆಯಿಂದ ಹೊರ ನಡೆದಿದ್ದಾರೆ. 

ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಎರಡು ಬಣಗಳು ಕಿತ್ತಾಟ ನಡೆಸಿವೆ. ಟಿಕೆಟ್ ವಿಚಾರದಲ್ಲಿ ಚಿಕ್ಕಮಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಬೆಳಗ್ಗೆಯಿಂದಲೂ ಸಭೆ ನಡೆದಿತ್ತು. ಬಳಿಕ ಮಾತಿಗೆ ಮಾತು ಬೆಳೆದು ಕುರ್ಚಿ ಹಿಡಿದು ಹೊಡೆದಾಟ ನಡೆಸಿದ್ದಾರೆ. ಕೆಪಿಸಿಸಿ ಸಂಯೋಜಕರಾಗಿದ್ದ ಪವನ್ ಮೇಲೆ ಹಲ್ಲೆ ನಡೆಸಲಾಗಿದೆ. 

ಇತ್ತೀಚೆಗೆ ಬಿಜೆಪಿಯಿಂದ ಕಾಂಗ್ರೆಸ್ ಬಂದಿದ್ದ ಲಿಂಗಾಯತ ಮುಖಂಡ ಎಚ್.ಡಿ.ತಮ್ಮಯ್ಯ ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡೋಣ ಎನ್ನುತ್ತಿದ್ದಂತೆ  ಮಾರಾಮಾರಿ ಶುರುವಾಗಿದೆ. ಇವರ ಮಾತಿನ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರೇ ಗರಂ ಆಗಿದ್ದಾರೆ. ಇದೇ ವೇಳೆ, ಪಕ್ಷ ಒಗ್ಗಟ್ಟಾಗಿ ಹೋಗಲಿ ಎಂದ ಮಂಜೇಗೌಡ ವಿರುದ್ಧವೂ ಕಾರ್ಯಕರ್ತರು ರೆಬಲ್ ಆಗಿದ್ದಾರೆ. ಯಾರಿಗೋ ಅಲ್ಲ... ಅಂತ ಮಂಜೇಗೌಡ ವಿರುದ್ಧ ಕಾರ್ಯಕರ್ತರು ತಿರುಗಿ ಬಿದ್ದು ಗಲಾಟೆ ನಡೆದಿದೆ.‌ ನೋಡ ನೋಡ್ತಿದ್ದಂತೆ ಕಾಂಗ್ರೆಸ್ ಕಚೇರಿ ರಣರಂಗವಾಗಿದೆ.

chikmagalu congress office turns ugly after fight over ticket, KPCC organiser attacked by members