ಅಮುಲ್ ಉತ್ಪನ್ನ ಬೆಂಗಳೂರು ಮಾರುಕಟ್ಟೆಗೆ ; ನಮ್ಮ ಬ್ಯಾಂಕ್ ಮುಗಿಸಿದ್ದಾಯ್ತು, ನಂದಿನಿ ಮುಗಿಸಲು ಮೋದಿ- ಅಮಿತ್ ಷಾ ಸಂಚು ಎಂದ ಸಿದ್ದರಾಮಯ್ಯ

07-04-23 03:56 pm       HK News Desk   ಕರ್ನಾಟಕ

ಇತ್ತೀಚೆಗೆ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅಮುಲ್ ಜೊತೆಗೆ ಕರ್ನಾಟಕದ ನಂದಿನಿಯನ್ನು ವಿಲೀನ ಮಾಡುವ ಪ್ರಸ್ತಾಪ ಮಾಡಿದ್ದರು. ಅದರ ಹಿನ್ನೆಲೆಯಲ್ಲಿ ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ಅಮುಲ್‌ ಹಾಗೂ ನಂದಿನಿ ವಿಲೀನದ ಆತಂಕ ಎದುರಾಗಿದೆ ಎಂದು ಎಚ್ಚರಿಸಿದ್ದಾರೆ.

ಬೆಂಗಳೂರು, ಮಾ.7: ಕರ್ನಾಟಕದಲ್ಲಿ ಅಮುಲ್‌ ಉತ್ಪನ್ನಗಳ ಮಾರಾಟ ಆರಂಭಿಸಿರುವುದು ಚರ್ಚೆಗೆ ಈಡಾಗಿರುವಂತೆಯೇ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅಮುಲ್ ಜೊತೆಗೆ ಕರ್ನಾಟಕದ ನಂದಿನಿಯನ್ನು ವಿಲೀನ ಮಾಡುವ ಪ್ರಸ್ತಾಪ ಮಾಡಿದ್ದರು. ಅದರ ಹಿನ್ನೆಲೆಯಲ್ಲಿ ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ಅಮುಲ್‌ ಹಾಗೂ ನಂದಿನಿ ವಿಲೀನದ ಆತಂಕ ಎದುರಾಗಿದೆ ಎಂದು ಎಚ್ಚರಿಸಿದ್ದಾರೆ.

"ಕರ್ನಾಟಕದಲ್ಲಿ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದ ಬ್ಯಾಂಕುಗಳನ್ನು ತಿಂದು ಮುಕ್ಕಿದ್ದಾಯಿತು. ಈಗ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಂಚು ಹೂಡಿದ್ದಾರೆ. ಕನ್ನಡಿಗರೇ ಎಚ್ಚರ...!!'' ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

''ಕೆಎಂಎಫ್ ಮತ್ತು ಅಮುಲ್ ಸಂಸ್ಥೆಗಳ ವಿಲೀನದ ಬಗ್ಗೆ ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್‌ ಶಾ ಪ್ರಸ್ತಾಪ ಮಾಡಿದ ದಿನದಿಂದ, ರಾಜ್ಯದ ಹೈನು ಉದ್ಯಮಕ್ಕೆ ಗರ ಬಡಿದಿದೆ. ವಿಲೀನದ ಪ್ರಸ್ತಾವಕ್ಕೆ ಕನ್ನಡಿಗರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಹಿಂಬಾಗಿಲಿನಿಂದ ಅಮುಲ್ ಪ್ರವೇಶಿಸುತ್ತಿದೆ..'' ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

"ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆಯಲ್ಲಿ ಮಾಯವಾಗುತ್ತಿದೆ. ಇದೇ ವೇಳೆ ಅಮುಲ್ ಉತ್ಪನ್ನಗಳ ಮಾರಾಟ ಭರದಿಂದ ಪ್ರಾರಂಭವಾಗಿದೆ. ಸಚಿವ ಅಮಿತ್‌ ಶಾ ಅವರ ನೇರ ಉಸ್ತುವಾರಿಯಲ್ಲಿಯೇ ಇವೆಲ್ಲ ನಡೆಯುತ್ತಿದೆ ಎನ್ನುವುದು ನಿಸ್ಸಂಶಯ..''‌ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

''ಗುಜರಾತ್ ಮೂಲದ ಅಮುಲ್ ಹಾಲು ಮತ್ತು ಮೊಸರು ಮಾರಾಟದ ಮೂಲಕ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಲು ಹಿಂದೆಯೂ ಪ್ರಯತ್ನಿಸಿತ್ತು. ಅದಕ್ಕೆ ನಾವು ಅವಕಾಶ ಕೊಡಲಿಲ್ಲ. ಈಗ ರಾಜ್ಯ ಬಿಜೆಪಿ ಕೆಂಪುಕಂಬಳಿ ಹಾಸಿ ಅಮುಲ್ ಅನ್ನು ಸ್ವಾಗತಿಸಿದೆ ಎಂದು ಸಿದ್ದರಾಮಯ್ಯ ಟ್ವೀಟ್‌ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಆಡಳಿತಾವಧಿಯಲ್ಲಿ ಕೆಎಂಎಫ್‌ನಲ್ಲಿ ಹಾಲಿನ ಸಂಗ್ರಹ ಕಡಿಮೆಯಾಗುತ್ತಿದೆ. ದಿನಕ್ಕೆ 99 ಲಕ್ಷ ಲೀಟರ್ ಹಾಲು ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದು ಕೆಎಂಎಫ್ ವಿರುದ್ಧದ ಷಡ್ಯಂತ್ರವೇ..'' ಎಂದು ಸಿದ್ದರಾಮಯ್ಯ ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

''ನಮ್ಮ ಸರ್ಕಾರ ಹಾಲಿಗೆ ನೀಡುವ ಸಹಾಯಧನವನ್ನು ಲೀಟರಿಗೆ 5 ರೂ.ಗಳಷ್ಟು ಹೆಚ್ಚಿಸಿದ್ದೆವು. ಇದರಿಂದಾಗಿ 2012-13 ರಲ್ಲಿ 45 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣವು 2017 ರ ವೇಳೆಗೆ 73 ಲಕ್ಷ ಲೀಟರಿಗೆ ಏರಿಕೆಯಾಗಿತ್ತು. ಈಗ ಕಡಿಮೆಯಾಗುತ್ತ ಸಾಗಲು ಕಾರಣ ಏನು..'' ಎಂದು ಟ್ವೀಟ್‌ನಲ್ಲಿ ಸಿದ್ದರಾಮಯ್ಯ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಕರ್ನಾಟಕದ ಬಿಜೆಪಿ ನಾಯಕತ್ವ ಎಷ್ಟೊಂದು ದುರ್ಬಲವಾಗಿದೆಯೆಂದರೆ ಒಂದೆಡೆ ಬೆಳಗಾವಿ ಗಡಿಪ್ರದೇಶದಲ್ಲಿ ಮಹಾರಾಷ್ಟ್ರ ಸರ್ಕಾರ ನೇರವಾಗಿ ತನ್ನ ಆಡಳಿತವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ಗುಜರಾತ್ ರಾಜ್ಯ ಅಮುಲ್ ಮೂಲಕ ಇಲ್ಲಿನ ರೈತರನ್ನು ಬೀದಿಗೆ ತಳ್ಳುವ ಪ್ರಯತ್ನ ಮಾಡುತ್ತಿದೆ..'' ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

''ಹಿಂದಿ ಹೇರಿಕೆಯ ಮೂಲಕ ನಡೆಸುತ್ತಿರುವ ಭಾಷಾದ್ರೋಹ ಮತ್ತು ರಾಜ್ಯದ ಗಡಿಯೊಳಗೆ ಅತಿಕ್ರಮಿಸುವ ಮೂಲಕ ನಡೆಸುತ್ತಿರುವ ನೆಲದ್ರೋಹದ ಜೊತೆಗೆ ಈಗ ಕೆಎಂಎಫ್ ಅನ್ನು ಮುಚ್ಚಿಸುವ ಮೂಲಕ ರೈತದ್ರೋಹ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಹೊರಟಿದೆ..'' ಎಂದು ಮಾಜಿ ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ವಿಕ್ ಕಾಮರ್ಸ್ ಎನ್ನುವ ಆನ್ಲೈನ್ ಪ್ಲಾಟ್ ಫಾರಂನಲ್ಲಿ ಬೆಂಗಳೂರು ನಗರದಲ್ಲಿ ಅಮುಲ್ ಹಾಲು ಮತ್ತು ಮೊಸರನ್ನು ಮಾರಾಟಕ್ಕೆ ಇಳಿಸಲಾಗಿದೆ.‌ ಈ ಸುದ್ದಿಯ ಬೆನ್ನಲ್ಲೇ ಅಮುಲ್ - ಇಂದಿನಿ ವಿಲೀನದ ಆರೋಪ ಮುನ್ನೆಲೆಗೆ ಬಂದಿದೆ

Karnataka's former CM and Congress leader Siddaramaiah raked up the Amul vs. Nandini issue once again ahead of the May 10 Karnataka assembly polls. Instilling a sense of regionalism, the leader of the opposition of the Karnataka Legislative Assembly, Siddaramaiah appealed to Kannadigas to save Nandini milk after Amul announced its intention to enter the Karnataka market.