ಎಲ್ಲಿ ಹಿಡಿದು ಮಾರಿಬಿಡ್ತಾರೋ ಅಂತ ಹುಲಿಗಳು ಅವಿತ್ಕೊಂಡಿವೆ ; ಬಂಡೀಪುರದಲ್ಲಿ ಮೋದಿಗೆ ಹುಲಿ ಸಿಗದ್ದಕ್ಕೆ ಸಿದ್ದರಾಮಯ್ಯ ವ್ಯಂಗ್ಯ

09-04-23 05:38 pm       HK News Desk   ಕರ್ನಾಟಕ

ಪ್ರಧಾನಮಂತ್ರಿ ನರೇಂದ್ರ ಮೋದಿ ಬಂಡಿಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ 20 ಕಿಮೀ ಉದ್ದಕ್ಕೆ ಹುಲಿ ಸಫಾರಿ ಕೈಗೊಂಡರೂ, ಹುಲಿ ಕಾಣಸಿಗದೇ ಇರುವುದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಎಲ್ಲಿ ತನ್ನನ್ನು ಹಿಡಿದು ಮಾರಿ ಬಿಡುತ್ತಾರೋ ಎಂಬ ಭಯದಿಂದ ಹುಲಿರಾಯ ಮೋದಿ ಬರುವಾಗ ಗುಹೆಯೊಳಗೆ ಅವಿತುಕೊಂಡಿದ್ದ ಎಂದು ಕಾಲೆಳೆದಿದ್ದಾರೆ.

ಬೆಂಗಳೂರು, ಎ.9: ಪ್ರಧಾನಮಂತ್ರಿ ನರೇಂದ್ರ ಮೋದಿ ಬಂಡಿಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ 20 ಕಿಮೀ ಉದ್ದಕ್ಕೆ ಹುಲಿ ಸಫಾರಿ ಕೈಗೊಂಡರೂ, ಹುಲಿ ಕಾಣಸಿಗದೇ ಇರುವುದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಎಲ್ಲಿ ತನ್ನನ್ನು ಹಿಡಿದು ಮಾರಿ ಬಿಡುತ್ತಾರೋ ಎಂಬ ಭಯದಿಂದ ಹುಲಿರಾಯ ಮೋದಿ ಬರುವಾಗ ಗುಹೆಯೊಳಗೆ ಅವಿತುಕೊಂಡಿದ್ದ ಎಂದು ಕಾಲೆಳೆದಿದ್ದಾರೆ.

''ಹಿಡಿದು ಮಾರಿಬಿಡುತ್ತಾರೆ ಅನ್ನುವ ಭಯಕ್ಕೆ ಯಾವ ಗುಹೆಯೊಳಗೆ ಹುಲಿಗಳು ಅಡಗಿ ಕೂತಿವೆಯೋ.. ಅಯ್ಯೋ ಪಾಪ....!! ಇನ್ನು ಕೆಲವೇ ದಿನಗಳಲ್ಲಿ #SaveBandipur (ಬಂಡಿಪುರ ಉಳಿಸಿ ) ಎಂಬ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ.. ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ ನರೇಂದ್ರ ಮೋದಿ ಅವರೇ..'' ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ಮೋದಿ ಸರ್ಕಾರ ಈಗಾಗಲೇ ಕನ್ನಡಿಗರು ಕಟ್ಟಿ ಬೆಳೆಸಿದ ಬ್ಯಾಂಕ್‌, ಬಂದರು, ಏರ್‌ಪೋರ್ಟ್‌ಗಳನ್ನು ಖಾಸಗಿಯವರಿಗೆ ಮಾರಿಯಾಗಿದೆ. ಇದೀಗ ನಂದಿನಿ ಹಾಲಿನ ಮೇಲೆ ವಕ್ರದೃಷ್ಟಿ ಬೀರಿರುವ ಮೋದಿ ಸರ್ಕಾರ, ಕೆಎಂಎಫ್‌ ನುಂಗಲು ಹೊಂಚು ಹಾಕಿ ಕುಳಿತಿದೆ. ಪ್ರಧಾನಿ ಮೋದಿ ಬಂಡೀಪುರ ಭೇಟಿಯಿಂದ ಎಲ್ಲಿ ಬಂಡೀಪುರ ಉಳಿಸಿ ಅಭಿಯಾನ ಮಾಡಬೇಕಾಗಿ ಬರುವುದೋ ಎಂದು ಕನ್ನಡಿಗರು ಆತಂಕಗೊಂಡಿದ್ದಾರೆ ಎಂದು ಸಿದ್ದರಾಮಯ್ಯ ಟ್ವೀಟ್ನಲ್ಲಿ ತಿವಿದಿದ್ದಾರೆ.

''ನಮ್ಮ ವಿಜಯಾ ಬ್ಯಾಂಕನ್ನು ನುಂಗಿದ ಬರೋಡಾ ಬ್ಯಾಂಕ್ ಗುಜರಾತ್‌ನದ್ದು, ಬಂದರು, ಏರ್‌ಪೋರ್ಟ್ ನುಂಗಿದ ಅದಾನಿ ಗುಜರಾತ್‌ನವರು, ಈಗ ಕೆಎಂಎಫ್ ನುಂಗಲು ಹೊರಟಿರುವ ಅಮುಲ್ ಕೂಡ ಗುಜರಾತ್‌ನದ್ದು. ಗುಜರಾತಿಗಳಿಗೆ ಕನ್ನಡಿಗರು ಶತ್ರುಗಳಾ..''? ಎಂದು ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

''ಪ್ರಧಾನಿ ನರೇಂದ್ರ ಮೋದಿ ಅವರೇ, ನೀವು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ? ಕನ್ನಡಿಗರು ಕಟ್ಟಿದ್ದ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳನ್ನು ಮುಕ್ಕಿ ತಿಂದಾಯಿತು. ಈಗ ನಮ್ಮ ನಂದಿನಿಯನ್ನು ಮುಕ್ಕಲು ಹೊರಟಿದ್ದೀರಾ..''? ಎಂದು ಮತ್ತೊಂದು ಟ್ವೀಟ್‌ನಲ್ಲಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ. ''ಇದ್ದಕ್ಕಿದ್ದ ಹಾಗೆ ಮಾರುಕಟ್ಟೆಯಿಂದ ನಂದಿನಿ ಹಾಲು ಮತ್ತಿತರ ಉತ್ಪನ್ನಗಳು ಮಾಯವಾಗುತ್ತಿವೆ. ಗುಜರಾತ್‌ನಿಂದ ನೀವು ಕಳುಹಿಸುತ್ತಿರುವ ಅಮುಲ್ ಹಾಲು ಮತ್ತು ಉತ್ಪನ್ನಗಳ ಮಾರಾಟದ ಬಿರುಸು ಹೆಚ್ಚಾಗಿದೆ. ಇವೆಲ್ಲವೂ ಸಹಜ ಬೆಳವಣಿಗೆಯೇ ನರೇಂದ್ರ ಮೋದಿ ಅವರೇ..''? ಎಂದು ಸಿದ್ದರಾಮಯ್ಯ ಟ್ವಿಟ್ಟರ್‌ನಲ್ಲಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

Congress leader Siddaramaiah slams PM Modis contribution to tiger conservation. Congress takes credit for Project Tiger, questions PM Modi-led BJP govt's contribution to tiger conservation.