ಲಿಂಗಾಯಿತರ ಅಗತ್ಯವಿಲ್ಲ ; ಯಡಿಯೂರಪ್ಪ ಚಿರಂಜೀವಿ ಅಲ್ಲ!  ಬಿಜೆಪಿಯಲ್ಲಿ ಕೋಲಾಹಲ ಎಬ್ಬಿಸಿದ ಬಿಎಲ್ ಸಂತೋಷ್ ಕುರಿತ ಪತ್ರಿಕಾ ತುಣುಕು, ನಕಲಿ ಸುದ್ದಿ ಎಂದ ರಾಜ್ಯ ಬಿಜೆಪಿ ! 

05-05-23 10:45 pm       Bangalore Correspondent   ಕರ್ನಾಟಕ

ಪತ್ರಿಕಾ ತುಣುಕು ಅಸಲಿಯೋ, ನಕಲಿಯೋ ಎಂದು ತಿಳಿಯುವ ಮೊದಲು ಇಡೀ ರಾಜ್ಯದಲ್ಲಿ ವೈರಲ್ ಆಗಿದ್ದಲ್ಲದೆ, ಲಿಂಗಾಯತ ಸಮುದಾಯವೇ ತಿರುಗಿ ಬೀಳುವ ಸ್ಥಿತಿ ಎದುರಾಗಿದೆ. 

ಬೆಂಗಳೂರು, ಮೇ 5: ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪಿಸಿ ಎಡವಟ್ಟು ಮಾಡಿಕೊಂಡಿದ್ದು ಬಿಜೆಪಿಗೆ ಅಸ್ತ್ರ ಆಗಿರುವಾಗಲೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಲಿಂಗಾಯತರ ಬಗ್ಗೆ ಕೇವಲವಾಗಿ ಆಡಿದ್ದಾರೆನ್ನುವ ಮಾತುಗಳ ಪತ್ರಿಕಾ ತುಣುಕು ರಾಜ್ಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ. ಪತ್ರಿಕಾ ತುಣುಕು ಅಸಲಿಯೋ, ನಕಲಿಯೋ ಎಂದು ತಿಳಿಯುವ ಮೊದಲು ಇಡೀ ರಾಜ್ಯದಲ್ಲಿ ವೈರಲ್ ಆಗಿದ್ದಲ್ಲದೆ, ಲಿಂಗಾಯತ ಸಮುದಾಯವೇ ತಿರುಗಿ ಬೀಳುವ ಸ್ಥಿತಿ ಎದುರಾಗಿದೆ. 

ವೈರಲ್ ಆದ ಪತ್ರಿಕಾ ತುಣುಕಿನಲ್ಲಿ ಬಿಎಲ್ ಸಂತೋಷ್ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸಭೆ ನಡೆಸಿದ್ದಾರೆ ಎಂದಿದ್ದು ಅದರಲ್ಲಿ ಯಡಿಯೂರಪ್ಪ ಬಗ್ಗೆಯೇ ಅವರ ಹೆಸರೆತ್ತದೆ ಕೇವಲವಾಗಿ ಮಾತನಾಡಿದ್ದಾರೆಂದು ಸುದ್ದಿ ಬರೆಯಲಾಗಿದೆ. ನಾವು ಹಿಂದುತ್ವದಲ್ಲಿ ನಂಬಿಕೆ ಇಟ್ಟಿದ್ದು ಅದರಲ್ಲೇ ಮುಂದುವರಿಯುತ್ತೇವೆ. ಬಿಜೆಪಿಗೆ “ಲಿಂಗಾಯಿತ”ರ ಅಗತ್ಯವಿಲ್ಲ. ಯಡಿಯೂರಪ್ಪ ಏನೂ ಚಿರಂಜೀವಿಯಲ್ಲ. ಪಕ್ಷ ಅವರನ್ನೇ ನಂಬಿ ಕೂರುವುದಿಲ್ಲ.‌ ನಾವು ಇನ್ನೆಷ್ಟು ದಿನ ಲಿಂಗಾಯತರ ಓಲೈಕೆ ಮಾಡಿಕೊಂಡಿರಬೇಕು ಎಂದು ಸಭೆಯಲ್ಲಿ ಸಂತೋಷ್ ಆಡಿದ್ದಾರೆ ಎನ್ನಲಾದ ಮಾತುಗಳ ಸುದ್ದಿ ವೈರಲ್ ಆಗಿದ್ದು ವೀರಶೈವ ಲಿಂಗಾಯತ ಸಮುದಾಯದಲ್ಲಿ ಕೋಲಾಹಲ ಎಬ್ಬಿಸಿದೆ. 

ಪತ್ರಿಕಾ ತುಣುಕು ವೈರಲ್ ಆದ ಬೆನ್ನಲ್ಲೇ ರಾಜ್ಯ ಬಿಜೆಪಿ ಸ್ಪಷ್ಟನೆ ನೀಡಿದ್ದು ಅದು ನಕಲಿ ಪತ್ರಿಕಾ ಮಾದರಿ ಎಂದು ಹೇಳಿದೆ. ಅಲ್ಲದೆ, ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾಗಿ ಹೇಳಿದೆ. ಆದರೆ ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಇದು ಸ್ವತಃ ಕೇಸರಿ ಪಾಳೆಯದಲ್ಲಿಯೇ ಸಂಚಲನ ಸೃಷ್ಟಿಸಿದೆ. ಯಡಿಯೂರಪ್ಪ ಇಲ್ಲದಿದ್ದರೂ ಪಕ್ಷ ನಡೆಯುತ್ತದೆ. ಅವರನ್ನು ನೆಚ್ಚಿಕೊಂಡು ಪಕ್ಷವಿಲ್ಲ. ಬಿಜೆಪಿ ಹಿಂದುತ್ವದ ಮೇಲೆ ಸ್ಥಾಪಿತವಾಗಿರುವ ಪಕ್ಷವೇ ಹೊರತು ವ್ಯಕ್ತಿ ನಂಬಿಕೊಂಡಂತದ್ದಲ್ಲ. ನಾವು ಹಿಂದುತ್ವದಲ್ಲಿ ಮುಂದುವರೆಯುತ್ತೇವೆ. ಬಿಜೆಪಿ ನಂಬಿಕೆ ಇಟ್ಟಿರುವುದೇ ಹಿಂದುತ್ವದಲ್ಲಿ ಹೊರತು ಯಾವುದೇ ಜಾತಿ ಮೇಲಲ್ಲ. ಲಿಂಗಾಯಿತರ ಮತಗಳು ಕೈ ತಪ್ಪಿ ಹೋದರೆ ನಮಗೇನೂ ತೊಂದರೆಯಿಲ್ಲ. ಇಬ್ಬರು ಮಕ್ಕಳನ್ನು ಬೆಳೆಸಿದರೆ ಒಂದು ಸಮುದಾಯ ಬೆಳೆಯುತ್ತದೆಯೇ ಹೊರತು ಪಕ್ಷ ಬೆಳೆಯುವುದಿಲ್ಲ ಎಂದು ಸಂತೋಷ್ ಹೇಳಿದ್ದಾರೆನ್ನುವ ಸುದ್ದಿ ಪಕ್ಷದೊಳಗೆ ವ್ಯಾಪಕ ಆಕ್ರೋಶ- ಅಸಮಾಧಾನಕ್ಕೆ ಕಾರಣವಾಗಿದೆ.

We dont need Lingayat or BS Yediyurappa controversial statement by BL Santosh triggers row, BJP says its fake news.