ಬಳ್ಳಾರಿ ; ವರುಣ ಆರ್ಭಟಕ್ಕೆ ಅವಾಂತರ, ಸಿಡಿಲು ಬಡಿದು ಮೂವರು ಸ್ಥಳದಲ್ಲೇ ಸಾವು

01-06-23 10:49 pm       HK News Desk   ಕರ್ನಾಟಕ

ಬಳ್ಳಾರಿ ಜಿಲ್ಲೆಯಲ್ಲಿ ವರುಣ ಆರ್ಭಟ ಜೋರಾಗಿದ್ದು, ಜಿಲ್ಲೆಯ ಸಿರುಗುಪ್ಪ ತಾಲೂಕಿನ ಉತ್ತನೂರು ಗ್ರಾಮದ ಮೂವರು ವ್ಯಕ್ತಿಗಳು ಸಿಡಿಲು ಬಡಿದು ಮೃತರಾಗಿದ್ದಾರೆ. 

ಬಳ್ಳಾರಿ, ಜೂ 1: ಬಳ್ಳಾರಿ ಜಿಲ್ಲೆಯಲ್ಲಿ ವರುಣ ಆರ್ಭಟ ಜೋರಾಗಿದ್ದು, ಜಿಲ್ಲೆಯ ಸಿರುಗುಪ್ಪ ತಾಲೂಕಿನ ಉತ್ತನೂರು ಗ್ರಾಮದ ಮೂವರು ವ್ಯಕ್ತಿಗಳು ಸಿಡಿಲು ಬಡಿದು ಮೃತರಾಗಿದ್ದಾರೆ. 

ಸಿರುಗುಪ್ಪ ತಾಲೂಕಿನ ಉತ್ತನೂರು ಗ್ರಾಮದ  ನಿವಾಸಿ ಶೇಖರಗೌಡ (32) ಹಾಗೂ ಬಸವನಗೌಡ (38) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಮೃತರು ಸಂಬಂಧಿಕರ ಮದುವೆ ಕಾರ್ಯ ನಿಮಿತ್ತ ಸೀಮಾಂಧ್ರದ ಹೊಳಗುಂದ ಮಂಡಲ ವ್ಯಾಪ್ತಿಯ ವಿರೂಪಾಪುರ ಗ್ರಾಮದ ಬಳಿ ಇರುವ ಬೊಗಟೇಶ್ವರ ದೇವಸ್ಥಾನಕ್ಕೆ ಗುರುವಾರ ಬೆಳಿಗ್ಗೆ ಗ್ರಾಮದಿಂದ ತೆರಳಿದ್ದರು. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮದುವೆಯ ನಂತರ ಮರದ ಬಳಿ ನಿಂತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತು ಇವರ ಜೊತೆಗಿದ್ದ ಬೇರೆ ಗ್ರಾಮಗಳ ನಾಲ್ಕು ಜನರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಒಟ್ಟು ಮೂವರು ಮೃತಪಟ್ಟಿದ್ದು, ಮತ್ತೋರ್ವ ಮೃತನ ಹೆಸರು, ಮಾಹಿತಿ ತಿಳಿದು ಬಂದಿಲ್ಲ.

ಸಿಡಿಲು ಬಡಿದು ಮೃತಪಟ್ಟ ಶೇಖರ ಗೌಡ ಎಂಬಾತ ಪತ್ನಿ ಹಾಗೂ ಒಂದು ಗಂಡು ಮತ್ತು ಹೆಣ್ಣು ಮಗುವನ್ನು ಅಗಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Three killed in Bellary after lightening strikes due to heavy rains.