ಈ ಹಿಂದೆ ಹಿಜಾಬ್, ಹಲಾಲ್ ಎಂದು ಗಲಾಟೆ ಮಾಡಿದ್ದೀರಿ, ಇದಕ್ಕೆಲ್ಲ ಬ್ರೇಕ್ ಹಾಕುತ್ತೇವೆ ; ಸೂಲಿಬೆಲೆ, ನಕ್ರಾ ಮಾಡಿದ್ರೆ ಕಂಬಿ ಒಳಗೆ ಹೋಗ್ತೀಯಾ… ಚಕ್ರವರ್ತಿಗೆ ಎಂಬಿ ಪಾಟೀಲ್ ವಾರ್ನಿಂಗ್ ! 

04-06-23 10:19 pm       HK News Desk   ಕರ್ನಾಟಕ

ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹಿಂದೂ ಯುವ ಬ್ರಿಗೇಡ್ ಸಂಸ್ಥಾಪಕ, ಚಿಂತಕ ಚಕ್ರವರ್ತಿ ಸೂಲಿಬೆಲೆಗೆ  ಎಚ್ಚರಿಕೆ ನೀಡಿದ್ದು, ಗಲಾಟೆ ಮಾಡಿದ್ರೆ ಜೈಲು ಪಾಲಾಗ್ತೀರಿ ಹುಷಾರ್! ಎಂದಿದ್ದಾರೆ.

ವಿಜಯಪುರ, ಜೂನ್ 4: ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹಿಂದೂ ಯುವ ಬ್ರಿಗೇಡ್ ಸಂಸ್ಥಾಪಕ, ಚಿಂತಕ ಚಕ್ರವರ್ತಿ ಸೂಲಿಬೆಲೆಗೆ  ಎಚ್ಚರಿಕೆ ನೀಡಿದ್ದು, ಗಲಾಟೆ ಮಾಡಿದ್ರೆ ಜೈಲು ಪಾಲಾಗ್ತೀರಿ ಹುಷಾರ್! ಎಂದಿದ್ದಾರೆ.

ಇಂದು ವಿಜಯಪುರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಂಬಿ ಪಾಟೀಲ್ ಅವರು “ ಈ ಹಿಂದೆ ಹಿಜಾಬ್, ಹಲಾಲ್ ಎಂದು ಗಲಾಟೆ ಮಾಡಿದ್ದೀರಿ. ಇದಕ್ಕೆಲ್ಲ ಬ್ರೇಕ್ ಹಾಕುತ್ತೇವೆ. ಇನ್ನು ಮುಂದೆ ಅದೆಲ್ಲ ನಡೆಯಲ್ಲ. ಏನಾದರೂ ಗಲಾಟೆ ಮಾಡಿದರೆ ಜೈಲು ಕಂಬಿ ಏಣಿಸ್ತೀರಾ ಹುಷಾರ್!” ಎಂದು ಹೇಳಿದರು.

ಈ ವೇಳೆ ರಾಜ್ಯದಲ್ಲಿ ಹಿಟ್ಲರ್ ಸರಕಾರ ಇದೆ ಎಂದಿದ್ದ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಪಾಟೀಲ್ ತಿರುಗೇಟು ನೀಡಿದ್ದು, ಬಿಜೆಪಿ ಸರ್ಕಾರ ಆಡಳಿತಾವಧಿಯಲ್ಲಿ ಜನರ ಬದುಕು ಕಟ್ಟಿಕೊಡುವ ಬದಲಾಗಿ ಹಿಜಾಬ್, ಹಲಾಲ್, ಉರಿಗೌಡ, ನಂಜೇಗೌಡ ಎಂದೆಲ್ಲಾ ಸಮಾಜದಲ್ಲಿ ಸಂಘರ್ಷಮಯ ವಾತಾವರಣ ಸೃಷ್ಟಿಸುವ ಕೆಲಸ ಮಾಡಿದೆ. ರಾಜ್ಯದ ಅಭಿವೃದ್ಧಿ ಕಡೆಗಣಿಸಿದೆ ಎಂದು ಹೇಳಿದರು.

ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಮಾತನಾಡಿದ ಎಂಬಿ ಪಾಟೀಲ್, “ಬಿಜೆಪಿಯವರು ಪುಸ್ತಕದಲ್ಲಿ ಆರ್​​ಎಸ್​​ಎಸ್ ಅಜೆಂಡ್ ನಿರ್ಮಿಸಲು ಹೊರಟಿದ್ದರು. ನಂಜೇಗೌಡ-ಉರಿಗೌಡ ಸೇರಿದಂತೆ ಎಲ್ಲವನ್ನೂ ತೆಗೆದು ಹಾಕಲಾಗುತ್ತದೆ. ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ರಾಯಣ್ಣ, ಪುಲೆ ಸೇರಿದಂತೆ ಮಹಾನ ನಾಯಕರ ಬಗ್ಗೆ ಪಾಠವನ್ನು ಸೇರ್ಪಡೆ ಮಾಡಲಾಗುವುದು” ಎಂದು ಹೇಳಿದರು.

Minister MB Patil warns Chakravarti Sulibele of getting him behind the bars if he tries to act smart.