Ashwath Narayan: ನಿನಗೂ ಬೆಂಗಳೂರಿಗೂ ಏನಪ್ಪ ಸಂಬಂಧ ; ಡಿಕೆಶಿ ಅಂದ್ರೆ ದ್ವೇಷ, ಅಸೂಯೆ, ಕಿರುಕುಳ, ನಿಮ್ಮಿಂದ ನಯಾಪೈಸೆ ಲಾಭ ಇಲ್ಲ ಬಿಡಿ..ಅಶ್ವತ್ಥ ಕಿಡಿ 

24-06-23 03:54 pm       Bangalore Correspondent   ಕರ್ನಾಟಕ

ನಾನು ರಾಮನಗರ ಜಿಲ್ಲಾ ಉಸ್ತುವಾರಿ ಆದಾಗ, ನಿನಗೂ ರಾಮನಗರಕ್ಕೂ ಏನು ಸಂಬಂಧ ಅಂತಾ ಡಿಕೆ ಶಿವಕುಮಾರ್‌ ಕೇಳಿದ್ರು.

ಬೆಂಗಳೂರು, ಜೂನ್ 24: ನಾನು ರಾಮನಗರ ಜಿಲ್ಲಾ ಉಸ್ತುವಾರಿ ಆದಾಗ, ನಿನಗೂ ರಾಮನಗರಕ್ಕೂ ಏನು ಸಂಬಂಧ ಅಂತಾ ಡಿಕೆ ಶಿವಕುಮಾರ್‌ ಕೇಳಿದ್ರು. ಈಗ ನಾನು ಕೇಳ್ತೀನಿ, ನಿನಗೂ ಬೆಂಗಳೂರಿಗೂ ಏನಪ್ಪ ಸಂಬಂಧ ಶಿವಕುಮಾರ? ಎಂದು ಏಕವಚನದಲ್ಲಿಯೇ ಮಾಜಿ ಡಿಸಿಎಂ ಡಾ ಸಿಎನ್‌ ಅಶ್ವತ್ಥ ನಾರಾಯಣ ಹಾಲಿ ಡಿಸಿಎಂ ಡಿಕೆ ಶಿವಕುಮಾರ್‌ಗೆ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಮನಗರ ನನ್ನ ಪೂರ್ವಿಕರ ಜಿಲ್ಲೆ. ನನಗೆ ಕೇಳಿದ ಹಾಗೇ ನಿನಗೂ ಕೇಳ್ತಿದೀನಿ. ನಿನಗೂ ಬೆಂಗಳೂರಿಗೆ ಏನು ಸಂಬಂಧ ಶಿವಕುಮಾರ? ಬೆಂಗಳೂರಿಗೆ ನಿಮ್ಮಿಂದ ನಯಾಪೈಸೆ ಲಾಭ ಇಲ್ಲ. ನಿಮ್ಮನ್ನು ಜನ ಕಳೆದ 35 ವರ್ಷಗಳಿಂದ ನೋಡಿದ್ದಾರೆ. ಡಿಕೆ ಶಿವಕುಮಾರ್ ಅಂದ್ರೆ ಏನು, ಯಾರು ಎಂಬುದನ್ನು ಜನ ನೋಡಿದ್ದಾರೆ. ನಿಮ್ಮಿಂದ ಏನು ಆಗಲ್ಲ, ನಿಮಗೆ ಜನರ ಮೇಲೆ ಕಾಳಜಿ ಇಲ್ಲ ಎಂದು ಕಿಡಿಕಾರಿದರು.

DK Shivakumar: Priority is to bring Congress back in karnataka, not CM seat  | Bengaluru News - Times of India

ಡಿಕೆ ಶಿವಕುಮಾರ್ ರಿಯಲ್ ಎಸ್ಟೇಟ್ ವ್ಯಾಪಾರಿ, ಅವರಿಂದ ಬೆಂಗಳೂರಿಗೆ ಉಪಯೋಗ ಆಗಲ್ಲ. ಡಿಕೆ ಶಿವಕುಮಾರ್ ಅವರದ್ದು ದ್ವೇಷದ ರಾಜಕಾರಣ, ವೇಷದ ರಾಜಕಾರಣ. ಡಿಕೆ ಶಿವಕುಮಾರ್ ಅಂದ್ರೆ ದ್ವೇಷ, ಡಿಕೆ ಶಿವಕುಮಾರ್ ಅಂದ್ರೆ ಅಸೂಯೆ, ಕಿರುಕುಳ ಎಂದು ಡಾ ಸಿಎನ್‌ ಅಶ್ವತ್ಥ ನಾರಾಯಣ ವಾಗ್ದಾಳಿ ನಡೆಸಿದರು.

ಗ್ಯಾರಂಟಿ ಯೋಜನೆಗಳ ಜಾರಿ ವಿಳಂಬದ ಬಗ್ಗೆ ಮಾತನಾಡಿದ ಸಿಎನ್‌ ಅಶ್ವತ್ಥ ನಾರಾಯಣ, ಕಾಂಗ್ರೆಸ್‌ನವರು ಮಾತು ತಪ್ಪುತ್ತಿದ್ದಾರೆ. ಅವರು ನುಡಿದಂತೆ ಉಚಿತ ಗ್ಯಾರಂಟಿಗಳನ್ನು ಕೊಡಲಿ. ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಪ್ರತಿಯೊಬ್ಬರಿಗೂ ಕೊಡಬೇಕು. ಗ್ಯಾರಂಟಿಗಳನ್ನು ಕೊಡುವುದಕ್ಕೆ ಶುರು ಮಾಡಿ, ಬೇಕಾದವರು ಅರ್ಜಿ ಹಾಕೋತಾರೆ. ಈ ಸರ್ಕಾರಕ್ಕೆ ಗ್ಯಾರಂಟಿಗಳನ್ನು ಕೊಡೋಕ್ಕೆ ಇಷ್ಟ ಇಲ್ಲ. ಕಳ್ಳನಿಗೆ ಪಿಳ್ಳೆ ನೆವ ಎಂಬಂತೆ ಇವರ ಪರಿಸ್ಥಿತಿ ಆಗಿದೆ ಎಂದು ಕಿಡಿಕಾರಿದರು.

ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆ ಮಾತನಾಡಿ, ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷ ಯಾರನ್ನೇ ನೇಮಕ ಮಾಡಿದರೂ ನಾವು ಕೆಲಸ ಮಾಡ್ತೇವೆ. ಯಾರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೂ ನಾವು ಒಪ್ಕೋತೇವೆ. ಸಾಕು ಈ ಜಾತಿ ವಿಚಾರ, ನಾವು ಕನ್ನಡಿಗರು, ಕರ್ನಾಟಕದವರು. ಪಕ್ಷದಲ್ಲಿ ಜವಾಬ್ದಾರಿ ನೀಡಿದರೆ ನಿಭಾಯಿಸುತ್ತೇನೆ. ಹಿಂದೆ ಡಿಸಿಎಂ ಸ್ಥಾನವನ್ನು ಬಯಸಿದ್ದಿಲ್ಲ, ನೀಡಿದರು ನಿಭಾಯಿಸಿದೆ ಎಂದು ಹೇಳಿದರು.

Ashwath Narayan slams DK Shivakumar in singular, says what is your connection with Bangalore, what good have you done. There is not a paisa benefit from him he added.