Ajith Kumar Rai: ಪರಪ್ಪನ ಅಗ್ರಹಾರ ಜೈಲು ಸೇರಿದ ತಹಸೀಲ್ದಾರ್ ಅಜಿತ್ ರೈ ; 200 ಎಕ್ರೆ ಬೇನಾಮಿ ಆಸ್ತಿ, ಭ್ರಷ್ಟನಿಗೆ ಸುತ್ತಿಕೊಳ್ಳಲಿದ್ಯಾ ಭೂ ಹಗರಣದ ಉರುಳು ?

07-07-23 10:06 pm       Bangalore Correspondent   ಕರ್ನಾಟಕ

ಲೋಕಾಯುಕ್ತ ದಾಳಿಯಲ್ಲಿ ಅರೆಸ್ಟ್ ಆಗಿರುವ ತಹಶೀಲ್ದಾರ್ ಅಜಿತ್ ರೈಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ.

ಬೆಂಗಳೂರು, ಜುಲೈ 7: ಲೋಕಾಯುಕ್ತ ದಾಳಿಯಲ್ಲಿ ಅರೆಸ್ಟ್ ಆಗಿರುವ ತಹಶೀಲ್ದಾರ್ ಅಜಿತ್ ರೈಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ. ಇದೇ ವೇಳೆ, ಅಜಿತ್ ರೈಗೆ ಸಂಬಂಧಿಸಿ ದಿನದಿಂದ ದಿನಕ್ಕೆ ಸ್ಪೋಟಕ ಮಾಹಿತಿಗಳು ಹೊರಬರುತ್ತಿವೆ. ಬೆಂಗಳೂರು ಆಸುಪಾಸಿನಲ್ಲಿ 200 ಎಕ್ರೆಗೂ ಹೆಚ್ಚು ಬೇನಾಮಿ ಆಸ್ತಿ ಮಾಡಿರುವ ಅಜಿತ್ ರೈ ಮತ್ತು ಆತನ ಸ್ನೇಹಿತರು ರೈ ಸರ್ಕಾರ್ ಎಂಬ ಹೆಸರಿನಲ್ಲೇ ಕಾರ್ಯಾಚರಣೆ ನಡೆಸುತ್ತಿದ್ದರು ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ.‌ 

ರೈ ಸರ್ಕಾರ್ ಹೆಸರಿಟ್ಟುಕೊಂಡು ಭೂ ಮಾರಾಟಕ್ಕೆ ಹಾಗೂ ಖರೀದಿಗೆ ಇವರ ತಂಡ ಕಾರ್ಯಾಚರಣೆ ನಡೆಸುತ್ತಿತ್ತು. ಟೀಂ ಸದಸ್ಯರು ತಹಸೀಲ್ದಾರ್ ಸೂಚನೆಯಂತೆ ಭೂ ಮಾಲೀಕರ ಮೇಲೆ ನಿಗಾ ಇಡುತ್ತಿದ್ದರು. ಇದೇ ವೇಳೆ, ಅಜಿತ್ ರೈ ಮೇಲೆ ಭೂ ಹಗರಣವೂ ಸುತ್ತಿಕೊಳ್ಳುವ ಸಾಧ್ಯತೆ ಕಂಡುಬಂದಿದೆ. ಸಹೋದರ ಆಶಿತ್ ರೈ, ಆಪ್ತರಾದ ಗೌರವ್ ಶೆಟ್ಟಿ, ಕೃಷ್ಣಪ್ಪ ಮತ್ತಿತರರು ಸಂಘಟಿತ ತಂಡ ಕಟ್ಟಿಕೊಂಡು ಭೂ ವ್ಯವಹಾರ ನಡೆಸುತ್ತಿದ್ದರು. ಮಾರಾಟಕ್ಕೆ ಲಭ್ಯವಿರುವ ಬಡ ರೈತರ ಭೂಮಿಯನ್ನು ಗುರುತಿಸಿ ತಹಸೀಲ್ದಾರ್ ಅಜಿತ್ ರೈ, ತನ್ನ ಸಹಚರರಿಗೆ ರವಾನಿಸುತ್ತಿದ್ದ. ಏಜಂಟರಾಗಿ ಕೆಲಸ ಮಾಡುತ್ತಿದ್ದ ರೈ ತಂಡದ ಆಪ್ತರು ಅದೇ ಭೂಮಿಯನ್ನು ಖರೀದಿಸುತ್ತಿದ್ದರು. ಅಲ್ಲದೆ, ದೊಡ್ಡ ಬಳ್ಳಾಪುರ ಸುತ್ತಮುತ್ತಲಿನಲ್ಲಿ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿರುವ ಆರೋಪ ಕೇಳಿಬಂದಿದೆ. 

ಇದೇ ವೇಳೆ, ಅಜಿತ್ ರೈ ಹೆಸರಲ್ಲಿರುವ ಬ್ಯಾಂಕ್ ಅಕೌಂಟ್ ಗಳ ಬಗ್ಗೆ ಮಾಹಿತಿ ಕೋರಿ ಬ್ಯಾಂಕ್ ಗಳಿಗೆ ಅಧಿಕಾರಿಗಳು ಪತ್ರ ಬರೆದಿದ್ದಾರೆ.‌ ಅಜಿತ್ ರೈ ಹೆಸರಲ್ಲಿ ಹೆಚ್ಡಿಎಫ್ ಸಿ ಬ್ಯಾಂಕ್ ನಲ್ಲಿ ಮತ್ತೊಂದು ಲಾಕರ್ ಪತ್ತೆಯಾಗಿದೆ‌‌. ಇದೇ ವೇಳೆ, ವಶಕ್ಕೆ  ಪಡೆದಿರುವ ಮೂರು ಮೊಬೈಲ್ ಹಾಗೂ ಎರಡು ಲ್ಯಾಪ್ ಟಾಪ್ ಗಳನ್ನ ಎಫ್ಎಸ್ಎಲ್ ಗೆ ರವಾನಿಸಲು ಸಿದ್ಧತೆ ನಡೆಸಲಾಗಿದೆ. ಈ ಸಂಬಂಧ ಕೋರ್ಟ್ ಅನುಮತಿಯನ್ನು ಅಧಿಕಾರಿಗಳು ಪಡೆದಿದ್ದಾರೆ.

ಅಜಿತ್ ರೈ ತನ್ನ ಮೊಬೈಲ್‌ನಲ್ಲಿ ದಾಖಲೆಗಳು, ವ್ಯವಹಾರದ ಸೀಕ್ರೆಟ್ ಇಟ್ಟುಕೊಂಡಿಲ್ಲ. ಹೀಗಾಗಿ ತಾಂತ್ರಿಕ ತನಿಖೆಗೆ ಲೋಕಾಯುಕ್ತ ಅಧಿಕಾರಿಗಳು ಇಳಿದಿದ್ದು, ಮೊಬೈಲ್ ಹಾಗೂ ಲ್ಯಾಪ್‌ಟಾಪ್ ನಲ್ಲಿರುವ ಮಾಹಿತಿಗಳು ದೊರೆತರೆ ಮತ್ತಷ್ಟು ಭ್ರಷ್ಟಾಚಾರದ ದಾಖಲೆಗಳು ಹೊರಬರಲಿವೆ ಎನ್ನಲಾಗುತ್ತಿದೆ. 

ಅನುಕಂಪದಲ್ಲಿ ಸರ್ಕಾರಿ ಹುದ್ದೆ ಪಡೆದಿದ್ದ ಅಜಿತ್ ರೈ 

ಅಜಿತ್ ರೈ ತಂದೆ ಪುತ್ತೂರಿನಲ್ಲಿ ಭೂ ಮಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕರ್ತವ್ಯದಲ್ಲಿದ್ದಾಗಲೇ ತಂದೆ ತೀರಿಕೊಂಡಿದ್ದರು ಎಂಬ ಕಾರಣಕ್ಕೆ ಅನುಕಂಪದ ಆಧಾರದ ಮೇಲೆ ಕಂದಾಯ ಇಲಾಖೆಯಲ್ಲಿ ಅಜಿತ್ ರೈಗೆ ಕೆಲಸ ನೀಡಲಾಗಿತ್ತು. ಅಲ್ಲಿ ಕೆಲ ವರ್ಷ ಕೆಲಸ ಮಾಡಿದ್ದ ಅಜಿತ್, ಬಳಿಕ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ, ಬಡ್ತಿ ಪಡೆದು ತಹಶೀಲ್ದಾರ್ ಆಗಿದ್ದ. ಈ ಹಿಂದೆಯೂ ಅಜಿತ್ ರೈ ಕೆಆರ್‌ ಪುರ ತಹಶೀಲ್ದಾರ್ ಆಗಿದ್ದಾಗ ಅಮಾನತುಗೊಂಡಿದ್ದ. ಹಿಂದೆ ಬಿಬಿಎಂಪಿ ಕೈಗೊಂಡಿದ್ದ ಒತ್ತುವರಿ ತೆರವು ಕಾರ್ಯಾಚರಣೆಗೆ ಸಹಕರಿಸಿದ ಅರೋಪದಡಿ ಅಜಿತ್‌ ಕುಮಾರ್ ರೈನನ್ನು ಸರ್ಕಾರ 2022, ನವೆಂಬರ್‌ ತಿಂಗಳಲ್ಲಿ ಅಮಾನತು ಮಾಡಿತ್ತು.

ಆದಾಯಕ್ಕಿಂತ ಅಧಿಕ ಆಸ್ತಿ ಪತ್ತೆ

ಅಜಿತ್ ರೈ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದು, ಲೋಕಾಯುಕ್ತ ಪೊಲೀಸರಿಗೆ ಹಲವು ದೂರುಗಳು ಬಂದಿದ್ದವು ಎನ್ನಲಾಗಿದೆ. ಇದೇ ಆಧಾರದ ಮೇಲೆ ಕಳೆದ ವಾರ ಲೋಕಾಯುಕ್ತ ಪೊಲೀಸರು ಅಜಿತ್ ಕಚೇರಿ ಹಾಗೂ ಆತನ ಸಂಬಂಧಿಕರಿಗೆ ಸೇರಿದ 10 ಪ್ರದೇಶಗಳ ಮೇಲೆ ದಾಳಿ ಮಾಡಿ, ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಭ್ರಷ್ಟನ ಕೋಟಿ ಕೋಟಿ ಸಾಮ್ರಾಜ್ಯ ಕಂಡು ಲೋಕಾಯುಕ್ತರೆ ಬೆಚ್ಚಿ ಬಿದ್ದಿದ್ದಾರೆ. 

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವ ದೇವನಹಳ್ಳಿ ಬಳಿ ಅಜಿತ್ ರೈ ಸಾಕಷ್ಟು ಆಸ್ತಿ ಖರೀದಿಸಿದ್ದಾನೆ. ಸುಮಾರು 150 ಎಕರೆಗಿಂತ ಜಾಸ್ತಿ ಜಮೀನನ್ನು ಬೇನಾಮಿಗಳ ಹೆಸರುಗಳಲ್ಲಿ ಹೊಂದಿದ್ದ. ಲೋಕಾಯುಕ್ತ ದಾಳಿ ವೇಳೆ ಸುಮಾರು 200 ಎಕರೆ ಜಮೀನಿಗೆ ಸಂಬಂಧಿಸಿದ 150 ರಿಂದ 160 ಕ್ರಯಪತ್ರಗಳು ದೊರೆತಿವೆ ಎನ್ನಲಾಗಿದೆ. ಈ ಜಮೀನುಗಳ ಮೌಲ್ಯವೇ ಸುಮಾರು 200 ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿದೆ.

K R Puram tahsildar Ajith Kumar Rai arrested sent to Jail, 200 acres of unauthorised land found. The ED has already launched a preliminary probe into the alleged benami properties and allegations of money laundering against Mr. Rai, and will soon register an Enforcement Case Information Report (ECIR), sources in the ED said.