ಮೊನ್ನೆ ಮೊನ್ನೆ ವರೆಗೂ ಅಧಿಕಾರದಲ್ಲಿದ್ದ ಬೊಮ್ಮಾಯಿಯನ್ನೂ ಹೊರಕ್ಕೆ ದಬ್ಬಿದ ಮಾರ್ಷಲ್ ಗಳು ; ವಿಪಕ್ಷ ನಾಯಕರಿಲ್ಲದ ಬಿಜೆಪಿಗೆ ಕಾಂಗ್ರೆಸ್ ತಪರಾಕಿ ! 

19-07-23 09:10 pm       Bangalore Correspondent   ಕರ್ನಾಟಕ

ಅಸಭ್ಯ ವರ್ತನೆ ಕಾರಣಕ್ಕೆ ಬಿಜೆಪಿ ಶಾಸಕರನ್ನು ವಿಧಾನಸಭೆ ಅಧಿವೇಶನದಿಂದ ಮಾರ್ಷಲ್ ಗಳು ಹೊರಕ್ಕೆ ತಳ್ಳಿರುವ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು, ಜುಲೈ 19: ಅಸಭ್ಯ ವರ್ತನೆ ಕಾರಣಕ್ಕೆ ಬಿಜೆಪಿ ಶಾಸಕರನ್ನು ವಿಧಾನಸಭೆ ಅಧಿವೇಶನದಿಂದ ಮಾರ್ಷಲ್ ಗಳು ಹೊರಕ್ಕೆ ತಳ್ಳಿರುವ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದಲ್ಲದೆ, ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. 

ವಿಶೇಷ ಅಂದ್ರೆ, ಮೊನ್ನೆ ವರೆಗೂ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನೂ ಯಾವುದೇ ಮುಲಾಜಿಲ್ಲದೆ ಹೊರಕ್ಕೆ ತಳ್ಳಿರುವುದು. ಬಸವನಗೌಡ ಪಾಟೀಲ್ ಯತ್ನಾಳ್ ಮಾರ್ಷಲ್ ಗಳ ತಳ್ಳಾಟದಲ್ಲಿ ಕುಸಿದು ಬಿದ್ದರೆ, ಬೊಮ್ಮಾಯಿ ವಿಧಾನಸಭೆ ಬಾಗಿಲಿನಿಂದ ಹೊರ ದಬ್ಬಲ್ಪಟ್ಟಿದ್ದಾರೆ. ಸುನಿಲ್ ಕುಮಾರ್, ಅಶೋಕ್ ಸೇರಿದಂತೆ ಕರಾವಳಿಯ ಬಿಜೆಪಿ ಶಾಸಕರನ್ನು ಹೊರಕ್ಕೆ ತಳ್ಳಲಾಗಿದೆ. 

ಸಾಮಾನ್ಯವಾಗಿ ಶಾಸಕರನ್ನು ಅಸಭ್ಯ ವರ್ತನೆಯ ಕಾರಣಕ್ಕೆ ಸ್ಪೀಕರ್ ಅಮಾನತು ಮಾಡಿದರೆ, ಅವರನ್ನು ಹೊರಕ್ಕೆ ಹೋಗಲು ಸ್ಪೀಕರ್ ಸೂಚಿಸುತ್ತಾರೆ. ಇವತ್ತು ಕೂಡ ಇದೇ ರೀತಿ ಸ್ಪೀಕರ್ ಹೊರಗೆ ಹೋಗಲು ಸೂಚನೆ ನೀಡಿದ್ದರು.‌ ಆದರೆ ಸ್ಪೀಕರ್ ಕ್ರಮಕ್ಕೆ ಆಕ್ಷೇಪಿಸಿದ ಬಿಜೆಪಿ ಶಾಸಕರು ಪ್ರತಿಭಟನೆಗೆ ಇಳಿದಿದ್ದಾರೆ. ಆದರೆ ಸದನದಲ್ಲಿ ಅಧ್ಯಕ್ಷರೇ ಸುಪ್ರೀಂ ಆಗಿರುತ್ತಾರೆ. ಸದನದಲ್ಲಿ ಗಲಾಟೆ ನಡೆಸಿದರೆ, ವಿಧಾನಸಭೆಯ ಒಳಗೆ ಪೊಲೀಸರ ರೀತಿ ಕರ್ತವ್ಯದಲ್ಲಿರುವ ಮಾರ್ಷಲ್ ಗಳನ್ನು ಬಳಕೆ ಮಾಡುತ್ತಾರೆ.‌ ಹೊರಕ್ಕೆ ತಳ್ಳಿ ಎಂದು ಸೂಚನೆ ಕೊಟ್ಟರೆ ಅದನ್ನು ಯಥಾವತ್ ಪಾಲನೆ ಮಾಡುತ್ತಾರೆ. ಇದೇ ರೀತಿ ಘಟನೆಯಾಗಿದ್ದು ಮಾಜಿ ಸಿಎಂ, ಮಾಜಿ ಸಚಿವ ಅನ್ನುವ ಮುಲಾಜು ನೋಡದೆ ಮಾರ್ಷಲ್ ಗಳು ತಮ್ಮ ಕರ್ತವ್ಯ ಪಾಲಿಸಿದ್ದಾರೆ. 

ಆದರೆ ಹಿರಿಯ ಶಾಸಕರನ್ನು ಹೊರಕ್ಕೆ ತಳ್ಳಿರುವುದು, ವಯಸ್ಸಾದವರೆಂದೂ ಲೆಕ್ಕಿಸದೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಇದರ ವಿಡಿಯೋ ನೋಡಿದ ಜನಸಾಮಾನ್ಯರು ಬಿಜೆಪಿ ಶಾಸಕರ ಸ್ಥಿತಿ ನೋಡಿ ನಗುವಷ್ಟರ ಮಟ್ಟಿಗೆ ಚರ್ಚೆ ಬೆಳೆದಿದೆ. ಕಾಂಗ್ರೆಸ್ ನಾಯಕರು ನೇರ ಕ್ರಮದ ಮೂಲಕ ಬಿಜೆಪಿ ಶಾಸಕರನ್ನು ಹೊರಗೆ ತಳ್ಳಿರುವುದು ಹೇಗೂ ವಿಪಕ್ಷ ನಾಯಕರೇ ಇಲ್ಲದ ಪಕ್ಷಕ್ಕೆ ಇಲ್ಲಿ ಬೆಲೆಯೇ ಇಲ್ಲ ಎನ್ನುವುದನ್ನು ಸೂಚಿಸಿದಂತಿದೆ. ಈ ರೀತಿಯ ಬೆಳವಣಿಗೆ ಬಿಜೆಪಿ ಕಾರ್ಯಕರ್ತರಲ್ಲಿ ಇರಿಸುಮುರಿಸು ತಂದಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಪ್ರಭಾವ ಬೆಳೆಸಿಕೊಂಡಿರುವುದನ್ನು ತೋರಿಸಿದೆ.

Former CM Bommai pushed by marshals during fight at Assembly, video goes viral.